ತುಮಕೂರು : ತಾಲ್ಲೂಕಿನ ಊರ್ಡಿಗೆರೆ ಹೋಬಳಿ ದೇವರಾಯನದುರ್ಗ ಶ್ರೀ ಲಕ್ಷ್ಮಿನರಸಿಂಹ ಸ್ವಾಮಿ ಜಾತ್ರಾ ಮಹೋತ್ಸವವು ಭಾನುವಾರದಿಂದ ಪ್ರಾರಂಭಗೊಂಡಿದ್ದು, ಮಾರ್ಚ್ 29ರವರೆಗೆ ಜರುಗಲಿದೆ. ಜಾತ್ರಾ ಸಂದರ್ಭದಲ್ಲಿ ಶ್ರೀ ಕ್ಷೇತ್ರಕ್ಕೆ ಆಗಮಿಸುವ ವಾಹನಗಳಿಗೆ ಪಂಚಾಯತಿ/ದೇವಾಲಯ/ಸಂಘ ಸಂಸ್ಥೆ/ಖಾಸಗಿಯವರು ಯಾವುದೇ ಶುಲ್ಕ ವಸೂಲಿ ಮಾಡಿದಲ್ಲಿ ಅವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.
ತಮ್ಮ ಕಚೇರಿಯಲ್ಲಿ ಅಧಿಕಾರಿಗಳು ಹಾಗೂ ಧರ್ಮಾಧಿಕಾರಿಗಳೊಂದಿಗೆ ಬ್ರಹ್ಮೋತ್ಸವ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಅವರು, ಜಾತ್ರಾ ಪ್ರಯುಕ್ತ ಮಾರ್ಚ್ 24ರಂದು ಜರುಗಲಿರುವ ಬ್ರಹ್ಮರಥೋತ್ಸವಕ್ಕೆ ಸುಮಾರು 50ಸಾವಿರ ಭಕ್ತಾಧಿಗಳು ಆಗಮಿಸುವ ನಿರೀಕ್ಷೆಯಿದೆ. ಬ್ರಹ್ಮರಥೋತ್ಸವ ದಿನದಂದು ವಾಹನದ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ನಿಗಧಿಪಡಿಸಿದ ಸ್ಥಳಗಳಲ್ಲಿ ವಾಹನ ನಿಲುಗಡೆಗೆ ಕ್ರಮವಹಿಸಬೇಕು. ಜಾತ್ರೆ ಮುಕ್ತಾಯವಾಗುವವರೆಗೆ ಕ್ಷೇತ್ರಕ್ಕೆ ಆಗಮಿಸುವ ಯಾವುದೇ ವಾಹನಗಳಿಗೆ ಶುಲ್ಕ ವಿಧಿಸಿ ವಸೂಲಿ ಮಾಡಿದರೆ ಅಂಥವರನ್ನು ದಸ್ತಗಿರಿ ಮಾಡಲು ಪೊಲೀಸ್ ಇಲಾಖೆಗೆ ಸೂಚಿಸಿದರು.
ಕಳೆದ 2023ರಲ್ಲಿ ಬ್ರಹ್ಮರಥೋತ್ಸವದ ದಿನದಂದು ಜರುಗಿದ ಆಕಸ್ಮಿಕ ಬೆಂಕಿ ಅವಘಡದಿಂದ ಒಬ್ಬರು ಮೃತಪಟ್ಟಿದ್ದು, ಇಂತಹ ಅವಘಡಗಳು ಮತ್ತೊಮ್ಮೆ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕೆಂದು ದೇವಾಲಯ, ಅರಣ್ಯ ಇಲಾಖೆ, ಪಂಚಾಯತಿ ಅಧಿಕಾರಿಗಳಿಗೆ ಸೂಚನೆ ನೀಡಿದರಲ್ಲದೆ ಬೆಂಕಿ ಅವಘಡ, ಕಾಡ್ಗಿಚ್ಚಿನ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಭಿತ್ತಿಪತ್ರಗಳನ್ನು ವಿತರಿಸಬೇಕು. ದೇವಾಯಲಕ್ಕೆ ಹೋಗುವ ಮಾರ್ಗದಲ್ಲಿ ಎಚ್ಚರಿಕೆ ಫಲಕಗಳನ್ನು ಅಳವಡಿಸಬೇಕು. ಪೊಲೀಸ್ ಇಲಾಖೆ ಮಾರ್ಗದರ್ಶನದಲ್ಲಿ ಅವಶ್ಯವಿರುವ ಸ್ಥಳಗಳಲ್ಲಿ ಸೈನ್ ಬೋರ್ಡ್, ತಾತ್ಕಾಲಿಕ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲು ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.
ಜಾತ್ರೆಗೆ ಆಗಮಿಸುವ ಮಹಿಳೆಯರು, ವಯೋವೃದ್ಧರು ಹಾಗೂ ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಕಲ್ಪಿಸಬೇಕು. ಶ್ರೀ ಕ್ಷೇತ್ರಕ್ಕೆ ಅರಣ್ಯ ಪ್ರದೇಶದ ಕಾಲುದಾರಿಯಲ್ಲಿ ಭಕ್ತರು/ ಸಾರ್ವಜನಿಕರು ಬರುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದರು. ಪಾಲಿಕೆ ಹಾಗೂ ಊರ್ಡಿಗೆರೆ ಪಂಚಾಯತಿಯು ಸಮನ್ವಯತೆಯಿಂದ ಜಾತ್ರೆ ಸ್ಥಳದಲ್ಲಿ ಸ್ವಚ್ಛತೆ ಕಾಪಾಡುವುದರೊಂದಿಗೆ ಭಕ್ತಾದಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು. ಜಾತ್ರಾ ಸಮಯದಲ್ಲಿ ಆಹಾರ ತಯಾರಿಸುವ ಕೊಪ್ಪಲು ಹಾಗೂ ಇತರೆ ಸ್ಥಳಗಳಲ್ಲಿ ಆಹಾರ ತಯಾರಿಕೆಗೆ ಬಳಸುವ ನೀರು, ಭಕಾದಿಗಳಿಗೆ ಕುಡಿಯುಲು ಒದಗಿಸುವ ನೀರನ್ನು ಎಲ್ಲಾ ಸ್ಥಳಗಳಲ್ಲಿ ಪ್ರತಿ ದಿನ ಪರಿಶೀಲಿಸಿ ದೃಢೀಕರಿಸಲು ಆಹಾರ ಸುರಕ್ಷತಾ ಇಲಾಖೆಗೆ ಹಾಗೂ ತುರ್ತು ಸಂದರ್ಭಗಳಲ್ಲಿ ಚಿಕಿತ್ಸೆ ನೀಡಲು ೨ ತುರ್ತು ಚಿಕಿತ್ಸಾ ವಾಹನ ನಿಯೋಜಿಸಲು ಆರೋಗ್ಯ ಇಲಾಖೆಗೆ ಸೂಚನೆ ನೀಡಿದರು.
ಬ್ರಹ್ಮ ರಥೋತ್ಸವವು ಭಾನುವಾರ ಜರುಗಲಿರುವುದರಿಂದ ಭಕ್ತಾದಿಗಳ ಸಂಖ್ಯೆ ಹೆಚ್ಚುವ ಸಾಧ್ಯತೆ ಇದ್ದು, ಸುಸ್ಥಿತಿಯಲ್ಲಿರುವ ಬಸ್ಗಳನ್ನು ನಿಯೋಜಿಸಲು ಕೆಎಸ್ಆರ್ಟಿಸಿಗೆ ಸೂಚನೆ ನೀಡಿದ ಅವರು, ಬಸ್ ಚಾಲಕರು/ನಿರ್ವಾಹಕರು ಭಕ್ತಾದಿಗಳೊಂದಿಗೆ ಸೌಜನ್ಯತೆಯಿಂದ ನಡೆದುಕೊಳ್ಳಬೇಕು. ಖಾಸಗಿ ಬಸ್ಗನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಮಾತನಾಡಿ, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬ್ರಹ್ಮರಥೋತ್ಸವಕ್ಕೆ ಸೇರಲಿರುವುದರಿಂದ ಮಾರ್ಚ್ರ 23 ಮಧ್ಯರಾತ್ರಿಯಿಂದಲೇ 100 ರಿಂದ 150 ಮಂದಿ ಗೃಹರಕ್ಷಕದಳ ಹಾಗೂ 200 ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ ಕರಾಳೆ, ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಎಸ್.ಟಿ. ಸುನೀಲ್ ಕುಮಾರ್ ಹಾಗೂ ಪ್ರಧಾನ ಅರ್ಚಕರು, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.