ಮನುಷ್ಯ ಸ್ವಾಭಿಮಾನ ಮತ್ತು ಸ್ವಾವಲಂಬನೆಯಿಂದ ಬದುಕಲು ಸಾಧ್ಯ ನ್ಯಾ.ಶ್ರೀಮತಿ ನೂರುನ್ನಿಸಾ

ತುಮಕೂರು:ಶಿಕ್ಷಣದಿಂದ ಮಾತ್ರ ಮನುಷ್ಯ ಸ್ವಾಭಿಮಾನ ಮತ್ತು ಸ್ವಾವಲಂಬನೆಯಿಂದ ಬದುಕಲು ಸಾಧ್ಯ ಹಾಗಾಗಿ ಬೀದಿ ಬದಿ ವ್ಯಾಪಾರಿಗಳು ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಿದ ಕಾರ್ಯದರ್ಶಿ ನ್ಯಾ.ಶ್ರೀಮತಿ ನೂರುನ್ನಿಸಾ ಕರೆ ನೀಡಿದ್ದಾರೆ.

 

 

ನಗರದ ಕನ್ನಡ ಭವನದಲ್ಲಿ ಕರ್ನಾಟಕ ರಾಜ್ಯ ರಸ್ತೆ ಬದಿ ವ್ಯಾಪಾರಿಗಳ ಮಹಾಮಂಡಳ(ರಿ), ತುಮಕೂರು ಜಿಲ್ಲಾ ಬೀದಿ ಬದಿ ವ್ಯಾಪಾರಿಗಳ ಕ್ಷೇಮಾಭಿವೃದ್ದಿ ಸಂಘ(ರಿ), ಮತ್ತು ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಅಸಂಘಟಿತ ಕಾರ್ಮಿಕರ ಒಕ್ಕೂಟದವತಿಯಿಂದ ಆಯೋಜಿಸಿದ್ದ ೪ನೇ ವರ್ಷದ ಬೀದಿ ಬದಿ ವ್ಯಾಪಾರಿಗಳ ಮತ್ತು ಕಾರ್ಮಿಕರ ಸಮಾವೇಶ ಹಾಗೂ ಪ್ರತಿಭಾಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು, ನಿಮ್ಮ ಮಕ್ಕಳು ನಿಮಗಿಂತೆ ನೆಮ್ಮದಿಯ ಜೀವನ ನಡೆಸಬೇಕೆಂದರೆ ಇಂದಿನಿಂದಲೇ ಅವರಿಗೆ ಒಳ್ಳೆಯ ಶಿಕ್ಷಣ ನೀಡಿ ಎಂದರು.

 

 

 

ಸಂವಿಧಾನದಲ್ಲಿ ಎಲ್ಲರೂ ಗೌರವಯುತವಾಗಿ ಬದುಕಲು ಬೇಕಾದ ಹಕ್ಕುಗಳನ್ನು ನೀಡಿದೆ.ಆ ಹಕ್ಕುಗಳ ನಿಮ್ಮವಾಗಬೇಕಾದರೆ ನೀವು ಸಂಘಟಿತರಾಗಿ ಹೋರಾಟ ನಡೆಸಬೇಕಾಗಿದೆ.ಜನರಿಗೆ ಗೌರವಯುತವಾದ ಬದುಕು ದೊರೆಯಬೇಕು ಎಂಬ ಉದ್ದೇಶದಿಂದಲೇ ಸರಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ.ಜೊತೆಗೆ ಅದರ ಮೇಲ್ವಿಚಾರಣೆಗೆ ಸಮಿತಿಗಳನ್ನು ರಚಿಸಿದೆ.ತುಮಕೂರು ಮಹಾನಗರಪಾಲಿಕೆಯಲ್ಲಿ ಬೀದಿಗಳ ವ್ಯಾಪಾರಿಗಳ ಕುಂದುಕೊರತೆ ಆಲಿಸಲು ನಿವೃತ್ತ ನ್ಯಾಯಾಧೀಶರೊಬ್ಬರನ್ನು ಸರಕಾರ ನೇಮಕ ಮಾಡಿದೆ.ನಿಮ್ಮ ದುಖಃ ದುಮ್ಮಾನಗಳನ್ನು ಅವರ ಬಳಿ ಹೇಳಿಕೊಂಡಲ್ಲಿ ಪರಿಹಾರ ದೊರೆಯಲಿದೆ ಎಂದು ನ್ಯಾ.ನೂರುನ್ನಿಸಾ ಸಲಹೆ ನೀಡಿದರು.
ಇಂದು ಮನೆಗಳ ನಡುವೆ ಗೋಡೆ ಎದ್ದಂತೆ,ಮನಸ್ಸುಗಳ ನಡುವೆಯೂ ಗೋಡೆಗಳು ಎದ್ದಿವೆ.ಯಾವ ಧರ್ಮವೂ ಹಿಂಸೆಯನ್ನು,ದ್ವೇಷವನ್ನು ಬೋಧಿಸುವುದಿಲ್ಲ.ಎಲ್ಲಾ ಧರ್ಮ ಗ್ರಂಥಗಳನ್ನು ಒಳ್ಳೆಯದನ್ನೇ ಹೇಳಿವೆ.ಅವುಗಳೆಲ್ಲದರ ಸಾರವನ್ನು ನಮ್ಮ ಸಂವಿಧಾನದಲ್ಲಿ ಅಳವಡಿಸಲಾಗಿದೆ.ಹಾಗಾಗಿ ಎಲ್ಲಾ ಧರ್ಮ ಗ್ರಂಥಗಳಿಗಿಂತ ಸಂವಿಧಾನ ಶ್ರೇಷ್ಠವಾದುದ್ದು, ಅದರ ಅಡಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಗು ಘನತೆಯಿಂದ ಬದುಕಲು ಅವಕಾಶ ಕಲ್ಪಿಸಿದೆ.ಇನ್ನೊಬ್ಬನಿಗೆ ನೋವುಂಟು ಮಾಡದೆ, ಇನ್ನೊಬ್ಬರ ಹಕ್ಕನ್ನು ಕಸಿಯದೆ ಹೇಗೆ ನನ್ನ ಹಕ್ಕು ಮತ್ತು ಕರ್ತವ್ಯಗಳನ್ನು ನಿಭಾಯಿಸಬಹುದು ಎಂಬ ಸಾಮಾನ್ಯ ಪ್ರಜ್ಞೆಯನ್ನು ಪ್ರತಿಯೊಬ್ಬ ಪ್ರಜೆಯೂ ಬೆಳೆಸಿಕೊಂಡರೆ,ಕೋರ್ಟು,ಕಾನೂನು,ಪೊಲೀಸ್ ಠಾಣೆಗಳಿಂದ ದೂರ ಉಳಿಯ ಬಹುದು ಎಂದು ನ್ಯಾ.ನೂರನ್ನಿಸಾ ಕಿವಿ ಮಾತು ಹೇಳಿದರು.

 

 

 

ರಾಮರಾಜ್ಯದ ಬಗ್ಗೆ ಎಲ್ಲರೂ ಮಾತನಾಡುತ್ತೇವೆ.ರಾವಣ್ಣ ಕೆಟ್ಟವನೆಂಬಂತೆ ನೋಡುತ್ತೇವೆ.ಆದರೆ ಎಂದಿಗೂ ಆತ ಸೀತೆಯ ಆಶಯಕ್ಕೆ ವಿರುದ್ದವಾಗಿ ಆಕೆಯೊಂದಿಗೆ ನಡೆದುಕೊಳ್ಳಲಿಲ್ಲ.ಆಧುನಿಕ ಯುಗದಲ್ಲಿ ನೂರಾರು ರಾವಣರು ನಮ್ಮ ಸುತ್ತಮುತ್ತ ಇದ್ದಾರೆ. ಬಹಳ ಎಚ್ಚರಿಕೆಯಿಂದ ಹೆಣ್ಣು ಮಕ್ಕಳು ಇರಬೇಕಾಗಿದೆ.ಏನಾದರೂ ಆಗು ಮೊದಲು ಮಾನವನಾಗು ಎಂಬ ಕವಿ ವಾಣಿಯಂತೆ ನಾವೆಲ್ಲರೂ ನಡೆದುಕೊಳ್ಳಬೇಕಿದೆ.ಮಹಾತ್ಮಗಾಂಧಿ ಅವರ ರಾಮರಾಜ್ಯ ನಮ್ಮದಾಗಲಿ ಎಂದು ನ್ಯಾ.ನೂರುನ್ನಿಸಾ ಶುಭ ಹಾರೈಸಿದರು.

 

 

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಹಿರೇಮಠದ ಡಾ.ಶ್ರೀಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಇಂದು ಎಲ್ಲಾ ಆಸ್ತ್ರಗಳಿಗಿಂತ ಸಂಘಟನೆ ಎಂಬುದೇ ಪ್ರಬಲವಾಗಿದೆ.ಬಿಡಿ ಹೋರಾಟಗಳಿಂದ ಯಾವುದೇ ಪ್ರಯೋಜನವಿಲ್ಲ. ಹಾಗಾಗಿ ಎಲ್ಲರೂ ಸಂಘಟಿತರಾಗಿ ಹೋರಾಟಕ್ಕೆ ಇಳಿದಾಗ ಮಾತ್ರ ಸಂವಿಧಾನ ಬದ್ದವಾಗಿ ಸರಕಾರದ ಸವಲತ್ತುಗಳನ್ನು ಪಡೆಯಲು ಸಾಧ್ಯ.ಬೀದಿ ಬದಿ ವ್ಯಾಪಾರಗಳೆಂದರೆ ಭೀಕ್ಷೆ ಬೇಡಲು ಕುಳಿತವರಲ್ಲ, ಅಥವಾ ಬಿಟ್ಟಿ ಭಾಗ್ಯಗಳಿಗೆ ಕಾದು ಕುಳಿತವರಲ್ಲ.ಇಡೀ ದಿನ ಕಷ್ಟಪಟ್ಟು ದುಡಿದು, ಅದರಲ್ಲಿ ಬಂದ ಹಣದಲ್ಲಿ ಜೀವನ ನಡೆಸುವ ಸ್ವಾಭಿಮಾನಿಗಳು.ಹಾಗಾಗಿ ಎಲ್ಲರೂ ಸಂಘಟಿತರಾಗಿ, ಅಸಂಘಟಿತ ಎಂಬ ಪದವನ್ನು ಕಿತ್ತು ಹಾಕಿ ಎಂದರು.
ಶಿಕ್ಷಣ ಅತಿ ಮುಖ್ಯ.ಒಂದು ಕಾಲದಲ್ಲಿ ಶಿಕ್ಷಣ ದೊರೆಯದೆ ಇದ್ದಾಗ ಬ್ರಿಟಿಷರ ದಾಸ್ಯಕ್ಕೆ ತುತ್ತಾಗಿದ್ದೇವು. ಆ ವೇಳೆ ಶಿಕ್ಷಣ ಕಲಿತ ಮಹನೀಯರು ಭಾರತೀಯರ ಮೇಲಾಗುತ್ತಿರುವ ದಬ್ಬಾಳಿ, ದೌರ್ಜನ್ಯ, ಶೋಷಣೆಯನ್ನು ತಿಳಿಸಿದ್ದರಿಂದಲೇ ಎಲ್ಲರೂ ಒಗ್ಗೂಡಿ ಸ್ವಾತಂತ್ರ ಹೋರಾಟವನ್ನು ರೂಪಿಸಲು ಸಾಧ್ಯವಾಯಿತು.ವಿದ್ಯೆ ನಿಮ್ಮಲ್ಲಿ ಸರಿ,ತಪ್ಪುಗಳ ಅರಿವು ಮೂಡಿಸುವದಲ್ಲದೆ, ಹೋರಾಟದ ಮಾನೋಭಾವನೆಯನ್ನು ಉಂಟು ಮಾಡುತ್ತದೆ.ಬೀದಿ ಬದಿ ವ್ಯಾಪಾರಿಗಳೆಂಬ ಕೀಳಿರಿಮೆಯನ್ನು ಕಿತ್ತು ಹಾಕಿ,ನೀವು ಪರೋಕ್ಷವಾಗಿ ಕಟ್ಟುತ್ತಿರುವ ತೆರಿಗೆ,ದೊಡ್ಡ ದೊಡ್ಡ ವ್ಯಾಪಾರಸ್ಥರು ಕಟ್ಟುವ ತೆರಿಗೆಗಿಂತಲೂ ಹೆಚ್ಚು ಮೌಲ್ಯಯುತ ವಾದುದ್ದು.ದೇಶದ ಅರ್ಥಿಕ ಬೆಳೆವಣಿಗೆಯಲ್ಲಿ ನಿಮ್ಮ ಪಾತ್ರವು ಇದೆ ಎಂದು ಹುರುದುಂಬಿಸಿದರು.

 

 

 

 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತುಮಕೂರು ಜಿಲ್ಲಾ ಬೀದಿ ಬದಿ ವ್ಯಾಪಾರಿಗಳ ಕ್ಷೇಮಾಭಿವೃದ್ದಿ ಸಂಘದ ಜಿಲ್ಲಾಧ್ಯಕ್ಷ ಭದ್ರೇಗೌಡ ಮಾತನಾಡಿ, ಹಲವಾರು ವರ್ಷಗಳಿಂದ ನೊಂದು,ಬೆಂದಿರುವ ಬೀದಿ ಬದಿ ವ್ಯಾಪಾರಿಗಳನ್ನು ಒಂದು ಗೂಡಿಸಿ, ೨೦೧೪ರಲ್ಲಿ ಈ ಸಂಘವನ್ನು ಸ್ಥಾಪಿಸಿ,ಹೊಸ ಕಾಯ್ದೆ ಅನ್ವಯ ಅವರಿಗೆ ಕಾನೂನಿನ ಅರಿವಿನ ಜೊತೆಗೆ, ಅವರಿಗೆ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಹೋರಾಟ ಆರಂಭಿಸಲಾಗಿದೆ.ಇದರ ಫಲವಾಗಿ,ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ,ಪಿ.ಎಂ.ಸ್ವನಿಧಿಯಲ್ಲಿ ಸಾಲ ಸೌಲಭ್ಯ,ಮಕ್ಕಳಿಗೆ ಶೈಕ್ಷಣಿಕ ಸಾಲ ಸೌಲಭ್ಯ ಸೇರಿದಂತೆ ಹಲವಾರು ಸವಲತ್ತು ಗಳನ್ನು ಕೊಡಿಸಲಾಗಿದೆ.ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಹ ಹಮ್ಮಿಕೊಂಡು, ಮಕ್ಕಳ ಶೈಕ್ಷಣಿಕ ಪ್ರಗತಿಗೆ ಮುನ್ನುಡಿ ಬರೆಯಲಾಗಿದೆ ಎಂದರು.

 

 

 

ಈ ವೇಳೆ ಕಾಂಗ್ರೆಸ್ ಮುಖಂಡ ಇಕ್ಬಾಲ್ ಅಹಮದ್, ಭದ್ರೇಗೌಡ ,ಮಾರುತಿ ಮೆಡಿಕಲ್‌ನ ಮಹೇಂದ್ರ ಮನ್ನೋತ್,ಕಟ್ಟಡ ನಿರ್ಮಾಣ ಮತ್ತು ಅಸಂಘಟಿತ ಕಾರ್ಮಿಕರ ಒಕ್ಕೂಟದ ರಾಜ್ಯಾಧ್ಯಕ್ಷ ಬಿ.ದೇವರಾಜು,ರಾಜ್ಯ ಕಾರ್ಯಾಧ್ಯಕ್ಷ ಆರ್.ಶ್ರೀನಿವಾಸ್, ತುಮಕೂರು ಜಿಲ್ಲಾ ಬೀದಿ ಬದಿ ವ್ಯಾಪಾರಿಗಳ ಕ್ಷೇಮಾಭಿವೃದ್ದಿ ಸಂಘದ ಉಪಾಧ್ಯಕ್ಷ ಮಂಜುನಾಥ್,ಖಜಾಂಚಿ ಜಗಧೀಶ್, ಸಂಘಟನಾ ಕಾರ್ಯದರ್ಶಿಗಳಾದ ಲೋಕೇಶ್, ಪ್ರಭಾಕರ್, ಸಮಲತ, ಸುಜಾತ ಮತ್ತಿತರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!