ಮಗುವಿನ ಸುರಕ್ಷತೆ ನಿರ್ಲಕ್ಷ್ಯಿಸಿದ ‘ಚೈತನ್ಯ ಟೆಕ್ನೋ ಸ್ಕೂಲ್ ಶಾಲಾ ಆಡಳಿತ ಮಂಡಳಿ: ಕಾನೂನಿನ ಮೂಲಕ ತಕ್ಕ ಪಾಠ ಕಲಿಸಿದ ತಾಯಿ!

 

 

ತುಮಕೂರು

ತನ್ನ ಮಗುವಿನ ಸುರಕ್ಷತೆಯನ್ನು ನಿರ್ಲಕ್ಷ್ಯಿಸಿ ಬೇಜವಾಬ್ದಾರಿಯಿಂದ ನಡೆದುಕೊಂಡ ಪ್ರತಿಷ್ಠಿತ ಶಾಲೆಯ ಆಡಳಿತ ಮಂಡಳಿಗೆಮಗುವಿನ ತಾಯಿ ಕಾನೂನಿನ ರುಚಿ ತೋರಿಸಿದ ಘಟನೆ ತುಮಕೂರು ನಗರದಲ್ಲಿ ನಡೆದಿದೆ.

 

 

 

ಇದು ಪ್ರತಿಷ್ಟಿತ ಶಾಲೆಯ ದಿವ್ಯ ನಿರ್ಲಕ್ಷ್ಯ ಎಂದರೂ ತಪ್ಪಾಗುವುದಿಲ್ಲ,ಇಂತಹ ದಿವ್ಯ ನಿರ್ಲಕ್ಷ ತೋರಿದ ಶಾಲಾ ಆಡಳಿತ ಮಂಡಳಿ ವರ್ತನೆಗೆ ರೋಸಿಹೋದ ಮಗುವಿನ ತಾಯಿ ಶಾಲಾ ಆಡಳಿತ ಮಂಡಳಿಗೆ ತಾಯಿ ಕಾನೂನಿನ ಮೂಲಕ ತಕ್ಕ ಪಾಠ ಕಲಿಸಿದ್ದಾರೆ.

 

 

ತುಮಕೂರಿನ ಪ್ರತಿಷ್ಟಿತ ಚೈತನ್ಯ ಟೆಕ್ನೋ ಸ್ಕೂಲ್ ಗೆ ಕಾನೂನಿನ ಬಿಸಿ ಮುಟ್ಟಿಸಿದ್ದಾರೆ.ವೃತ್ತಿಯಲ್ಲಿ ವಕೀಲರಾಗಿರುವ ಹೆಚ್‌.ಎನ್‌. ಮಂಜುಳ ಅವರು ತಮ್ಮ ಮಗ ತುಷಾರ್‌ ಸಿಂಹನನ್ನು “ಚೈತನ್ಯ ಟೆಕ್ನೋ ಸ್ಕೂಲ್‌” ಗೆ 1ನೇ ತರಗತಿಗೆ ದಾಖಲಿಸುತ್ತಾರೆ. ಶಾಲೆಯು ತನ್ನ ಮಗುವಿನ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತದೆ ಎಂದು ಬಲವಾಗಿ ನಂಬಿದ್ದರು.

 

 

 

ಶಾಲೆಯ ಆವರಣದ ಹೊರಗಿದ್ದ ಮಗು……

ಶಾಲೆ ಆರಂಭವಾದಾಗ ಮಗುವನ್ನು ಶಾಲಾ ಸಮಯಕ್ಕೆ ಶಾಲೆಯಲ್ಲಿ ಬಿಟ್ಟು, ಮಧ್ಯಾಹ್ನ 12 ಗಂಟೆಗೆ ಕರೆದುಕೊಂಡು ಹೋಗುವಂತೆ ಶಾಲಾ ಮುಖ್ಯಸ್ಥರು ತಿಳಿಸಿದ್ದರು. ಅದರಂತೆ ಮಂಜುಳ ಅವರು ಮಗುವನ್ನು ಕರೆದುಕೊಂಡು ಬರಲು ಶಾಲೆಗೆ ತೆರಳಿದಾಗ ಅವರಿಗೆ ಅಲ್ಲಿ ಆಘಾತ ಕಾದಿತ್ತು. ಮಗು ಶಾಲೆಯ ಆವರಣದ ಹೊರಗಡೆ ಯಾವುದೇ ರಕ್ಷಣೆ ಇಲ್ಲದಂತೆ ನಿಂತಿತ್ತು. ಇದನ್ನು ನೋಡಿ ಕಂಗಾಲಾದ ಅವರು ಕೂಡಲೇ ಶಾಲಾ ಸಿಬ್ಬಂದಿ ವರ್ಗವನ್ನು ವಿಚಾರಿಸಲು ನೋಡಿದಾಗ, ಅಲ್ಲಿ ಯಾರೂ ಸಹ ಸರಿಯಾಗಿ ಪ್ರತಿಕ್ರಿಯೆ ನೀಡಲಿಲ್ಲ… ಶಾಲಾ ಮುಖ್ಯಸ್ಥರು ಕೂಡ ಆ ಸಮಯದಲ್ಲಿ ಅಲ್ಲಿ ಇರಲಿಲ್ಲ. ನಂತರ ಮಗುವನ್ನು ಮನೆಗೆ ಕರೆದುಕೊಂಡು ಬಂದರು.

 

 

 

 

2ನೇ ದಿನ ಮಗು ಯಾಕೆ ಬಂದಿಲ್ಲ ಅಂತ ಕೇಳಿದ್ರು?

2ನೇ ದಿನ ಮಂಜುಳ ಅವರು ಮಧ್ಯಾಹ್ನ ಮಗುವನ್ನು ಶಾಲೆಯಿಂದ ಮನೆಗೆ ಕರೆದುಕೊಂಡು ಬಂದರು. ಮನೆಗೆ ಬಂದು ಸ್ವಲ್ಪ ಹೊತ್ತಿನಲ್ಲೇ ಅವರಿಗೆ ಶಾಲೆಯ ಸಿಬ್ಬಂದಿಯೊಬ್ಬರು ಕರೆ ಮಾಡಿ, “ನಿಮ್ಮ ಮಗು ಈ ದಿನ ಯಾಕೆ ಶಾಲೆಗೆ ಬಂದಿಲ್ಲ” ಎಂದು ಪ್ರಶ್ನಿಸಿದ್ದಾರೆ. ಸಿಬ್ಬಂದಿಯ ಪ್ರಶ್ನೆಯಿಂದ ಮಂಜುಳ ಅವರು ಅಚ್ಚರಿಗೀಡಾಗಿದ್ದಾರೆ. ಅಲ್ಲದೇ ಸಿಬ್ಬಂದಿಯ ಬೇಜವಾಬ್ದಾರಿಯ ಬಗ್ಗೆ ಅವರು ಪ್ರಶ್ನಿಸಿ, “ನಿಮ್ಮ ಬೇಜವಾಬ್ದಾರಿತನ ಎಷ್ಟಿದೆ, ನಾನು ಈಗ ತಾನೆ ಮಗುವನ್ನು ಶಾಲೆಯಿಂದ ಕರೆದುಕೊಂಡು ಬಂದಿದ್ದೇನೆ. ನೀವು ಹೀಗೇನಾ ನಮ್ಮ ಮಕ್ಕಳನ್ನು ರಕ್ಷಣೆ ಮಾಡೋದು” ಎಂದು ಪ್ರಶ್ನಿಸಿದ್ದಾರೆ.

 

 

 

3ನೇ ದಿನ ಶಾಲೆಯಲ್ಲಿ ಮಗುವೇ ಇಲ್ಲ!

ಮೂರನೇ ದಿನ ಮಗುವನ್ನು ಕರೆದುಕೊಂಡು ಹೋಗಲು ತಾಯಿ ಮಂಜುಳ ಅವರು ತೆರಳಿದಾಗ ಅಲ್ಲಿ ತಮ್ಮ ಮಗುವೇ ಇರಲಿಲ್ಲ. ಇದರಿಂದ ತೀವ್ರ ಆತಂಕಕ್ಕೊಳಗಾದ ಅವರು ಮಗು ಎಲ್ಲಿ ಎಂದು ವಿಚಾರಿಸಿದಾಗ, ಮಗುವಿನ ಬಗ್ಗೆ ಯಾರೂ ಸಹ ಉತ್ತರ ನೀಡಲು ತಯಾರಿರಲಿಲ್ಲ, ಇದಾದ ಬಳಿಕ ಸ್ವಲ್ಪ ಹೊತ್ತಿನಲ್ಲಿ ಮಗುವನ್ನು ಬೇರೊಂದು ರೂಟ್‌ ನ ವಾಹನಕ್ಕೆ ಹತ್ತಿಸಿ ಕಳುಹಿಸಲಾಗಿದೆ ಎಂದು ಇನ್ನೊಬ್ಬ ಸಿಬ್ಬಂದಿ ಬಂದು ಹೇಳಿದ್ದಾರೆ.

ನಂತರ ಸುಮಾರು 30 ನಿಮಿಷಗಳ ಕಾಲ ಸ್ಥಳದಲ್ಲಿ ಕಾಯುವಂತೆ ಮಾಡಿದ ಸಿಬ್ಬಂದಿ ಬಳಿಕ ಮಗುವನ್ನು ಕರೆತಂದು ಬಿಟ್ಟಿದ್ದಾರೆ. ಇದರ ಬಗ್ಗೆ ಶಾಲಾ ಆಡಳಿತ ಮಂಡಳಿಯ ಗಮನಕ್ಕೆ ತಂದಾಗ, “ಇಲ್ಲಿ ಅತೀ ಹೆಚ್ಚು ಮಕ್ಕಳು ಇರೋದರಿಂದಾಗಿ ಇಂತಹ ಅವಘಡಗಳು ಇಲ್ಲಿ ಆಗಿಂದಾಗ್ಗೆ ಸಂಭವಿಸುತ್ತಿರುತ್ತವೆ” ಎಂದು ಬೇಜವಾಬ್ದಾರಿಯಿಂದ ಉತ್ತರಿಸಿದ್ದಾರೆ.

 

 

ಕಾನೂನು ಸಮರಕ್ಕಿಳಿದ ತಾಯಿ!

ಶಾಲಾ ಆಡಳಿತ ಮಂಡಳಿಯ ಬೇಜವಾಬ್ದಾರಿಯ ನಡೆಯಿಂದ ರೋಸಿಹೋದ ತಾಯಿ ಮಂಜುಳ ಕಾನೂನು ಹೋರಾಟಕ್ಕೆ ತೀರ್ಮಾನಿಸಿದರು. ಅಂತೆಯೇ, ಕಾಲೇಜು ಆಡಳಿತ ಮಂಡಳಿಯ ವಿರುದ್ಧ ಜಿಲ್ಲಾ ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡಿದ್ದು, ತನಗಾದ ಅನ್ಯಾಯಕ್ಕೆ ಪರಿಹಾರ ಹಾಗೂ ತಾನು ಕಟ್ಟಿದ ಶುಲ್ಕವನ್ನು ಪಾವಸ್‌ ಕೊಡಿಸುವಂತೆ ದೂರಿನಲ್ಲಿ ಉಲ್ಲೇಖಿಸಿದ್ದರು.

ಈ ಬಗ್ಗೆ ಗ್ರಾಹಕರ ನ್ಯಾಯಾಲಯವು ವಿಚಾರಣೆಯನ್ನು ನಡೆಸಿ, ದೂರುದಾರರು ಸಲ್ಲಿಸಿದ್ದ ಶುಲ್ಕವನ್ನು ವಾಪಸ್‌ ಕೊಡುವಂತೆ, ಹಾಗೂ ಪರಿಹಾರವಾಗಿ 8 ಸಾವಿರ ರೂಪಾಯಿ ಹಾಗೂ ವ್ಯಾಜ್ಯ ಪರಿಹಾರ ಶುಲ್ಕವಾಗಿ 8 ಸಾವಿರ ರೂ.ಗಳನ್ನು ನೀಡುವಂತೆ ಆದೇಶಿಸಿದೆ. ಒಂದು ವೇಳೆ ಪರಿಹಾರವನ್ನು 45 ದಿನಗಳೊಳಗಾಗಿ ನೀಡದೇ, ಆದೇಶವನ್ನು ಪಾಲಿಸದೇ ಇದ್ದಲ್ಲಿ ದಿನಕ್ಕೆ 100 ರೂಪಾಯಿಯಂತೆ ದಂಡ ಪಾವತಿಸಬೇಕೆಂದು ಆದೇಶ ಮಾಡಿರುತ್ತದೆ.

 

 

 

 

ದೂರುದಾರರ ಪರವಾಗಿ ವಕೀಲರಾದ ಎಂ.ಎಸ್.ಗಣೇಶ್‌, ಆರ್‌.ತಿಪ್ಪೆಸ್ವಾಮಿ, ಶಿವಕುಮಾರ್‌ ಮೇಷ್ಟ್ರುಮನೆ ವಾದ ಮಂಡಿಸಿದರು

Leave a Reply

Your email address will not be published. Required fields are marked *

error: Content is protected !!