ರಾಜ್ಯದಲ್ಲಿ ಖಾಲಿ ಇರುವ ಅನುದಾನಿತ ಶಾಲಾ ಶಿಕ್ಷಕರ ಹುದ್ದೆಗೆ ನೇಮಕ ಮಾಡಲು ಸರ್ಕಾರಕ್ಕೆ 15 ದಿನಗಳ ಗಡುವು ನೀಡಿರುವುದಾಗಿ ರೂಪ್ಸಾ ಕರ್ನಾಟಕ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ ಹೇಳಿದರು.
ಅವರು ನಗರದ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ರಾಜ್ಯದಾದ್ಯಂತ 7,000ಕ್ಕೂ ಅಧಿಕ ಅನುದಾನಿತ ಶಾಲಾ ಶಿಕ್ಷಕರ ಹುದ್ದೆ ಖಾಲಿ ಇದ್ದು ಅದನ್ನು ಭರ್ತಿ ಮಾಡುವಂತೆ ನ್ಯಾಯಾಲಯ ಈಗಾಗಲೇ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದ್ದರು ಸಹ ಸರ್ಕಾರ ಶಿಕ್ಷಕರ ನೇಮಕ ಮಾಡಲು ಹಿಂದೇಟು ಹಾಕುತ್ತಿದ್ದು, ಅನುದಾನಿತ ಶಾಲೆಗಳನ್ನು ಮುಚ್ಚಿಸುವ ಹುನ್ನಾರ ನಡೆಸುತ್ತಿದೆ.
ಸ್ವಾತಂತ್ರ್ಯ ಪೂರ್ವದಿಂದಲೂ ಅನುದಾನಿತ ಶಾಲೆಗಳು ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದ್ದು, ಇಂದು ಅಂತಹ ಸಂಸ್ಥೆಗಳನ್ನು ಸರ್ಕಾರ ಶಿಕ್ಷಕರ ನೇಮಕ ಮಾಡದೆ ಮುಚ್ಚಲು ಹೊರಟಿರುವುದು ಖಂಡನೀಯ. ಕಳೆದ 9 ವರ್ಷಗಳಿಂದ ಸರ್ಕಾರ ಅನುದಾನಿತ ಶಾಲಾ ಶಿಕ್ಷಕರ ನೇಮಕಾತಿಗೆ ತಡೆ ಹಾಕಿದ್ದು, ಮಕ್ಕಳ ಮೂಲಭೂತ ಶಿಕ್ಷಣ ಹಕ್ಕನ್ನು ಹರಣ ಮಾಡುತ್ತಿದೆ.
ರಾಜ್ಯದ್ಯಂತ ಸರ್ಕಾರಿ ಶಾಲೆಗಳಿಗಿಂತ ಹೆಚ್ಚು ಅನುದಾನಿತ ಶಾಲೆಗಳಿದ್ದು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ನೀಡುವುದರ ಜೊತೆಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಸಹ ಕಲ್ಪಿಸಿವೆ. ಶಾಲೆಯಲ್ಲಿ ವಿಷಯಕ್ಕನುಗುಣವಾಗಿ ಶಿಕ್ಷಕರು ನೇಮಕಾತಿ ಆಗದ ಕಾರಣದಿಂದ ಪೋಷಕರು ವಿದ್ಯಾರ್ಥಿಗಳನ್ನು ಶಾಲೆಗೆ ಸೇರಿಸದ ಕಾರಣ ಇಂದು ರಾಜ್ಯದಾದ್ಯಂತ ಸಾವಿರಾರು ಮಂದಿ ವಿದ್ಯಾರ್ಥಿಗಳು ಶಿಕ್ಷಣ ವಂಚಿತರಾಗಿರುವುದು ಸಹ ಕಂಡುಬಂದಿದೆ.
ಸರ್ಕಾರಕ್ಕೆ ನ್ಯಾಯಾಲಯ ಈಗಾಗಲೇ ಖಾಲಿ ಇರುವ ಶಿಕ್ಷಕರ ನೇಮಕಾತಿಗೆ ಸೂಚನೆ ನೀಡಿದ್ದು, ಮುಖ್ಯಮಂತ್ರಿಗಳು ಹಾಗೂ ಶಿಕ್ಷಣ ಸಚಿವರಾದಿಯಾಗಿ ಜನಪ್ರತಿನಿಧಿಗಳು ಆರ್ಥಿಕ ಇಲಾಖೆಯ ಅನುಮತಿ ಬೇಕು ಎಂದು ಹೇಳುತ್ತಿದ್ದಾರೆ. ಆದರೆ ವಾಸ್ತವವಾಗಿ ಸರ್ಕಾರ ಈಗಾಗಲೇ ಶಿಕ್ಷಕರಿಗೆ ನೀಡುವ ಸಂಬಳದ ಹಣವನ್ನು ಬಜೆಟ್ ನಲ್ಲಿ ಮೀಸಲಿರಿಸಿದ್ದು, ಅದಕ್ಕೆ ಆರ್ಥಿಕ ಇಲಾಖೆಯ ಅನುಮತಿ ಅಗತ್ಯವಿರುವುದಿಲ್ಲ. ವಾಸ್ತವ ಸಂಗತಿಯನ್ನು ಮರೆಮಾಚುವ ಕೆಲಸವನ್ನು ಇವರು ಮಾಡುತ್ತಿರುವುದನ್ನು ಕಂಡರೆ ನೇರವಾಗಿ ಅನುದಾನಿತ ಶಾಲೆಗಳನ್ನು ಮುಚ್ಚಿಸುವ ಹುನ್ನಾರ ನಡೆಯುತ್ತಿದೆ ಎಂದು ತಿಳಿದು ಬರುತ್ತದೆ. ಎಲ್ಲಾ ಕಾರಣದಿಂದ ಕರ್ನಾಟಕ ರಾಜ್ಯ ಅನುದಾನಿತ ಶಾಲೆಗಳ ಒಕ್ಕೂಟದ ಪದಾಧಿಕಾರಿಗಳೊಂದಿಗೆ ವೃಕ್ಷ ಸಂಘಟನೆಯು ಸಹ ಸಭೆಗಳನ್ನು ನಡೆಸಿದ್ದು ಅಂತಿಮವಾಗಿ 15 ದಿನಗಳ ಗಡುವನ್ನು ನೀಡುವುದರ ಮೂಲಕ ಕರ್ನಾಟಕ ರಾಜ್ಯ ಅನುದಾನಿತ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಹಾಗೂ ರೂಪ್ಸಾ ಕರ್ನಾಟಕ ಮುಂದಿನ ಹೋರಾಟಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ತಿಳಿಸಿದರು.