ರಹಸ್ಯ ಕಾರ್ಯಚರಣೆ ಮಾಡಿ ಇಬ್ಬರು ಮಕ್ಕಳನ್ನು ರಕ್ಷಿಸಿದ ಕಾರ್ಮಿಕ ಇಲಾಖೆಯ ಅಧಿಕಾರಿಗಳು

 

ತುಮಕೂರು : ಯಲ್ಲಾಪುರ ಸಮೀಪದ, ಮೈಕೋ ಕಾರ್ಖಾನೆಯ ಬಳಿಯಿರುವ ಎಸ್.ಆರ್.ಎಸ್. ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಓರ್ವ ಬಾಲ ಕಾರ್ಮಿಕ ಮತ್ತು ಓರ್ವ ಕಿಶೋರ ಕಾರ್ಮಿಕರನ್ನು ರಕ್ಷಿಸಿ ಬಾಲ ಮಂದಿರಕ್ಕೆ ಬಿಡುವಲ್ಲಿ ಜಿಲ್ಲಾ ಕಾರ್ಮಿಕ ಇಲಾಖೆಯ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.

 

 

ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಹಲವಾರು ದಿನಗಳಿಂದ ಈ ಕಾರ್ಖಾನೆಯ ವಿರುದ್ಧ ದೂರುಗಳು ಕೇಳಿ ಬರುತ್ತಿದ್ದು, ಇದರ ಖಚಿತ ಮಾಹಿತಿಯ ಆಧಾರದ ಮೇಲೆ ಇಂದು ಸಾಮಾನ್ಯ ಜನರಂತೆ ಸ್ವಯಂ ಜಿಲ್ಲಾ ಕಾರ್ಮಿಕ ಅಧಿಕಾರಿಗಳಾದ ತೇಜಾವತಿರವರು ತಂಡವೊಂದನ್ನು ರಚಿಸಿ, ಇಟ್ಟಿಗೆ ಖರೀದಿಸುವ ನೆಪದಲ್ಲಿ ಕಾರ್ಖಾನೆಗೆ ಭೇಟಿ ನೀಡಿ ನೋಡಿದಾಗ ಅಲ್ಲಿ ಬಾಲ ಕಾರ್ಮಿಕರು ಯಾರ ಕಾಣ ಸಿಗದೇ ಇದ್ದಾಗ, ಅಲ್ಲಿಂದ ಕಾರ್ಯ ನಿಮಿತ್ತ ಕಛೇರಿಗೆ ವಾಪಸ್ಸು ಬರುತ್ತಾರೆ, ಆದರೆ ಕೆಲ ಸಿಬ್ಬಂದಿಗಳನ್ನು ಅಲ್ಲೇ ಗಸ್ತಿನಲ್ಲಿಟ್ಟು ಬಂದಿರುತ್ತಾರೆ.

 

 

 

 

ಮಧ್ಯಾಹ್ನ ಊಟಕ್ಕೆಂದು ತೆರಳಿದ್ದ ಮಕ್ಕಳು ಆ ಕಾರ್ಖಾನೆಯ ಕಡೆ ಬರುತ್ತಿರುವುದನ್ನು ಗಮನಿಸಿದ ಕಾರ್ಮಿಕ ಅಧಿಕಾರಿಗಳು ಅವರನ್ನು ವಿಚಾರಿಸಲಾಗಿ ರಾಯಚೂರು ಮೂಲದ ಶರಣಪ್ಪ (15ವರ್ಷ) ಮತ್ತು ಕೊಪ್ಪಳ ಮೂಲದ ಹನುಮೇಶ್ (13ವರ್ಷ) ಎಂಬ ಇಬ್ಬರು ಮಕ್ಕಳು ಸದರಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವುದಾಗಿ ತಪ್ಪೊಪ್ಪಿಗೆ ನೀಡಿರುತ್ತಾರೆ, ಇದರ ಆಧಾರದಂತೆ ಸ್ಥಳಕ್ಕೆ ತೆರಳಿ ದಸ್ತಗಿರಿ ಮಾಡಿದ ಕಾರ್ಮಿಕ ಅಧಿಕಾರಿಗಳು, ಕಾರ್ಖಾನೆಯ ಮಾಲೀಕರು ಸ್ಥಳದಲ್ಲಿ ಇಲ್ಲದ ಕಾರಣ ಆ ಮಕ್ಕಳ ಪೋಷಕರಿಗೆ ಕಾರ್ಮಿಕ ಪದ್ಧತಿಯ ಕುರಿತು ಅರಿವು ಮೂಡಿಸಿದ್ದಾರೆ ಜೊತೆಗೆ ಆ ಮಕ್ಕಳನ್ನು ತುಮಕೂರು ನಗರದ ಬಾಲ ಮಂದಿರಕ್ಕೆ ಕರೆ ತಂದು ಬಿಟ್ಟಿದ್ದಾರೆ.

 

 

 

 

ಇನ್ನು ಎಸ್.ಆರ್.ಎಸ್. ಇಟ್ಟಿಗೆ ಕಾರ್ಖಾನೆ ಮಾಲೀಕರ ವಿರುದ್ಧ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಕಾರ್ಮಿಕ ಇಲಾಖೆ ಮುಂದಾಗಿದ್ದು, ಆ ಕುರಿತು ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕಾರ್ಮಿಕ ಇಲಾಖೆಯ ನಿರೀಕ್ಷಕರಾದ ವೆಂಕಟೇಶ ಬಾಬುರವರು ತಿಳಿಸಿದರು. ಈ ಕಾರ್ಯಚರಣೆಯಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ತೇಜಾವತಿ, ಕಾರ್ಮಿಕ ನಿರೀಕ್ಷಕರುಗಳಾದ ವೆಂಕಟೇಶ ಬಾಬು, ಬಾಲ ಕಾರ್ಮಿಕ ಯೋಜನಾ ನಿರ್ದೇಶಕರಾದ ರವಿ ಕುಮಾರ್ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿಗಳು ಭಾಗಿಗಳಾಗಿದ್ದರೆ.

Leave a Reply

Your email address will not be published. Required fields are marked *

error: Content is protected !!