ಬಿಜೆಪಿ-ಜೆಡಿಎಸ್ ಮೈತ್ರಿಯೇ ಪಕ್ಷ ಬಿಡಲು ಕಾರಣ: ಮಾಜಿ ಶಾಸಕ ಡಿ.ಸಿ. ಗೌರಿಶಂಕರ್

ಬಿಜೆಪಿ ಜೆಡಿಎಸ್ ಮೈತ್ರಿ ನಾನು ಪಕ್ಷ ತೊರೆಯಲು ಕಾರಣ ಎಂದು ಮಾಜಿ ಶಾಸಕ ಡಿಸಿ ಗೌರಿಶಂಕರ್ ತಿಳಿಸಿದರು.

ಅವರು ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮೊದಲ ಬಾರಿಗೆ ಆಗಮಿಸಿ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ಪಡೆದ ನಂತರ ಮಾತನಾಡಿ ಇತ್ತೀಚಿನ ಬೆಳವಣಿಗೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಮೈತ್ರಿಯ ನಾನು ಜೆಡಿಎಸ್ ತೊರೆಯಲು ಕಾರಣ ಈಗಾಗಲೇ ಹಲವು ಬಾರಿ ಈ ವಿಷಯವನ್ನು ಮಾಧ್ಯಮಗಳ ಮುಂದೆ ಸ್ಪಷ್ಟಪಡಿಸಿದ್ದೇನೆ. ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರು ತಮಗೆ ಅಭೂತಪೂರ್ವ ಬೆಂಬಲವನ್ನು ವ್ಯಕ್ತಪಡಿಸಿದ್ದು, ಅವರನ್ನು ರಕ್ಷಿಸುವ ಹಾಗೂ ಅವರ ಸೇವೆಯನ್ನು ಮಾಡುವ ಸಲುವಾಗಿ ಅನಿವಾರ್ಯ ಕಾರಣದಿಂದ ಮೈತ್ರಿಯನ್ನು ಒಪ್ಪಲಾಗದೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇನೆ.

 

 

 

ಕಳೆದ 15 ವರ್ಷಗಳಿಂದ ಹಾಲಿ ಶಾಸಕ ಸುರೇಶ್ ಗೌಡರ ವಿರುದ್ಧ ತಾವು ಹಾಗೂ ತಮ್ಮ ಬೆಂಬಲಿಗರು ರಾಜಕಾರಣ ಮಾಡಿಕೊಂಡು ಬಂದಿದ್ದು, ಹೈಕಮಾಂಡ್ ಮಟ್ಟದಲ್ಲಿ ಮೈತ್ರಿ ಆದ ಕೂಡಲೇ ಅದನ್ನು ಹೇಗೆ ಸ್ವೀಕರಿಸಬೇಕು? ಪ್ರತಿಯೊಬ್ಬ ಕಾರ್ಯಕರ್ತನೂ ಸಹ ಮೈತ್ರಿಗೆ ವಿರೋಧ ವ್ಯಕ್ತಪಡಿಸಿ ಯಾವುದೇ ಕಾರಣಕ್ಕೂ ಮೈತ್ರಿಗೆ ಸಮ್ಮತಿ ಸೂಚಿಸಬಾರದೆಂದು ಅಭಿಪ್ರಾಯ ವ್ಯಕ್ತಪಡಿಸಿದ ಮೇಲೆ ನಾನು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡೆ. ಇಂದಿಗೂ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮಾಜಿ ಸಿಎಂ ಕುಮಾರಸ್ವಾಮಿಯವರ ಬಗ್ಗೆ ಅಪಾರ ಗೌರವವಿದ್ದು, ಕುಮಾರಸ್ವಾಮಿಯವರ ತಮ್ಮನಂತೆಯೇ ಇದ್ದೇನೆ, ಆದರೆ ಮೈತ್ರಿಗೆ ಎಂದಿಗೂ ಸಹ ಒಪ್ಪುವುದಿಲ್ಲ ಎಂದರು.

 

 

 

 

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ತಮ್ಮನ್ನು ಪಕ್ಷಕ್ಕೆ ಗೌರವಿತವಾಗಿ ಬರಮಾಡಿಕೊಂಡಿದ್ದು ಪಕ್ಷದ ಬೆಳವಣಿಗೆಗೆ ಹಾಗೂ ಸಂಘಟನೆಗೆ ಪ್ರತಿಯೊಬ್ಬರು ಶ್ರಮಿಸಬೇಕು. ಲೋಕಸಭಾ ಚುನಾವಣೆಯಲ್ಲಿ ಪಕ್ಷ ಯಾರನ್ನೇ ಅಭ್ಯರ್ಥಿಯನ್ನಾಗಿ ಸೂಚಿಸಿದರು ಅವರ ಗೆಲುವಿಗೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡಿ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಮತಗಳನ್ನು ಕಾಂಗ್ರೆಸ್ ಪಕ್ಷಕ್ಕೆ ತರುವಲ್ಲಿ ಶ್ರಮಿಸುತ್ತೇನೆ, ನಾನು ಯಾವುದೇ ಕಾರಣಕ್ಕೂ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಹಾಗೂ ಟಿಕೆಟ್ ಆಕಾಂಕ್ಷಿಯೂ ಸಹ ಅಲ್ಲಾ ಎಂದು ಸ್ಪಷ್ಟಪಡಿಸಿದರು. ಇದೆ ವೇಳೆ ಮುಂಬರುವ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗೆ ಪಕ್ಷವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಹಾಗೂ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಸಲುವಾಗಿ ಕಾರ್ಯಕರ್ತರು ಸಂಘಟನೆ ಮಾಡಬೇಕೆಂದು ಕರೆ ನೀಡಿದ್ದು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲೆಯ ಹಿರಿಯ ನಾಯಕರಾದ ಡಾ.ಜಿ.ಪರಮೇಶ್ವರ್ ಹಾಗೂ ಕೆ.ಎನ್.ರಾಜಣ್ಣನವರ ಮಾರ್ಗದರ್ಶನದಲ್ಲಿ ಪಕ್ಷವನ್ನು ಬಲಿಷ್ಠಗೊಳಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್’ನ ಮುಖಂಡರಾದ ಆರ್. ರಾಮಕೃಷ್ಣ, ಕಲ್ಲಹಳ್ಳಿ ದೇವರಾಜು, ಸುಜಾತ, ಸೇರಿದಂತೆ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!