ತುಮಕೂರು ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ತುಮಕೂರು ಮಧ್ಯಭಾಗದಲ್ಲಿರುವ ಹಳೇಯ ರಾಷ್ಟ್ರೀಯ ಹೆದ್ದಾರಿ-೪ರ ರಸ್ತೆ ಅಂದರೆ ಎಸ್-ಮಾಲ್ ಮುಂಭಾಗ ಇರುವ ಶಿಥಿಲವಾಗಿರುವ ಸೇತುವೆ ಬಳಿ ಇತ್ತೀಚೆಗೆ ನಡೆದ ಅಪಘಾತ ಸ್ಥಳಕ್ಕೆ ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ರವರು ಭೇಟಿ ನೀಡಿ ಪರೀಶೀಲನೆ ನಡೆಸಿದರು.
ನಂತರ ಮಾತನಾಡಿದ ಶಾಸಕರು ಎಸ್-ಮಾಲ್ ಮುಂಭಾಗ ಇರುವ ಶಿಥಿಲವಾಗಿರುವ ಸೇತುವೆ ಬಳಿ ದಿನನಿತ್ಯ ಒಂದಲ್ಲ ಒಂದು ರೀತಿ ಅಪಘಾತವಾಗಿ, ಪ್ರಾಣ ಹಾನಿಯಾಗುತ್ತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ, ತುಮಕೂರು ಮಧ್ಯ ಭಾಗದಲ್ಲಿನ ಹಳೆಯ ರಾಷ್ಟ್ರೀಯ ಹೆದ್ದಾರಿ-4ರ ರಸ್ತೆಯನ್ನು ಸುಮಾರು ೪ ಕಿ.ಮೀ ರಸ್ತೆಯನ್ನು ಆರು ಪಥದ ರಸ್ತೆಯನ್ನಾಗಿ ಅಭಿವೃದ್ದಿ ಪಡಿಸಲಾಗುತ್ತಿದೆ (ಕೋಡಿ ಬಸವೇಶ್ವರ ವೃತ್ತದಿಂದ ರಾ.ಹೆ-48 ವರೆಗೆ). ಇದರಲ್ಲಿ ಬಹು ಮುಖ್ಯವಾಗಿ ಬೇಕಾಗಿರುವ ಅಮಾನಿಕೆರೆಯ ಕೋಡಿ ನೀರು ಹರಿಯುವ ರಸ್ತೆ ಭಾಗದಲ್ಲಿ ನಿರ್ಮಿಸಿದ್ದ ಸೇತುವೆಯು ತುಂಬಾ ಕಿರಿದಾಗಿ ಮತ್ತು ಶಿಥಿಲಾವಾಗಿದ್ದು, ಸದರಿ ರಸ್ತೆಯಲ್ಲಿ ಹೆಚ್ಚಿನ ವಾಹನ ದಟ್ಟಣೆ ಇರುವುದರಿಂದ ಸಾರ್ವಜನಿಕರ ವಾಹನ ಸಂಚಾರಕ್ಕೆ ತುಂಬಾ ಅಡಚಣೆಯಾಗಿರುತ್ತದೆ ಹಾಗೂ ಇತ್ತೀಚಿಗೆ ಬಿದ್ದ ಬಾರಿ ಮಳೆಯಿಂದ ನೀರು ಹರಿದು ಸೇತುವೆ ಮುರಿದು ಬೀಳುವ ಸ್ಥಿತಿಗೆ ಬಂದಿದೆ.
ಸದರಿ ಸೇತುವೆ ಮುರಿದು ಬಿದ್ದಲ್ಲಿ ತುಮಕೂರು ನಗರಕ್ಕೆ ಉತ್ತರ ಕರ್ನಾಟಕ ಜಿಲ್ಲೆ, ಬ್ರಹತ್ ಕೈಗಾರಿಕಾ ಪ್ರದೇಶ ಮತ್ತು ನೆರೆಯ ಆಂದ್ರ ಪ್ರದೇಶ ರಾಜ್ಯದಿಂದ ಬರುವ ವಾಹನಗಳಿಗೆ ಸಂಪರ್ಕವು ಕಡಿದುಹೋಗುತ್ತದೆ ಮತ್ತು ನಗರದ ಅರ್ಧ ಭಾಗಕ್ಕೆ ಸಂಪರ್ಕ ಕಡಿದು ಹೋಗುತ್ತದೆ. ಹಾಗಾಗಿ ಈ ಸೇತುವೆಯನ್ನು ಆರು ಪಥದ ಸೇತುವೆ ಪುನರ್ ನಿರ್ಮಾಣ ಮಾಡಲು ಲೋಕೋಪಯೋಗಿ ಇಲಾಖೆ, ತುಮಕೂರು ಮಹಾನಗರಪಾಲಿಕೆ ಹಾಗೂ ನಗರಾಭಿವೃದ್ಧಿ ಇಲಾಖೆ ವತಿಯಿಂದ ಒಟ್ಟು ರೂ.೬.೫೦ ಕೋಟಿಗಳ ಅನುದಾನ ಬಿಡುಗಡೆಯಾಗುತ್ತಿದ್ದು, ಸರ್ಕಾರದ ಹಂತದಲ್ಲಿ ಕಾಮಗಾರಿಗೆ ಅನುಮೋದನೆ ನೀಡಲಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಶಾಸಕರು ತಿಳಿಸಿದರು.
ಈ ಸಂದರ್ಭದಲ್ಲಿ ಟೂಡಾ ಆಯುಕ್ತರಾದ ಶಿವಕುಮಾರ್, ಪಾಲಿಕೆ ಇ.ಇ ಆಶಾ, ವಿನಯ್, ಸಂಚಾರಿ ವೃತ್ತ ನಿರೀಕ್ಷಕರಾದ ಗುರುನಾಥ್, ಲೋಕೋಪಯೋಗಿ ಇಲಾಖೆಯ ಎ.ಇ.ಇ ರವಿ, ಸಿದ್ದಪ್ಪ, ಟೂಡಾ ಎ.ಇ.ಇ ಶೈಲಜಾ, ಅರುಣ್, ಮಾಜಿ ಟೂಡಾ ಸದಸ್ಯರಾದ ಸತ್ಯಮಂಗಲ ಜಗದೀಶ್, ಮಾಜಿ ಪಾಲಿಕೆ ಸದಸ್ಯರಾದ ಇಂದ್ರಕುಮಾರ್, ಎಲ್.ಐ.ಸಿ ಲಿಂಗಣ್ಣ ಹಾಗೂ ಇತರೆ ಮುಖಂಡರು ಹಾಜರಿದ್ದರು.