ಕನಿಷ್ಠ ಸಂಖ್ಯೆಯ ವಿದ್ಯಾರ್ಥಿಗಳ ನೆಪದಲ್ಲಿ ಸಾವಿರಾರು ಅನುದಾನಿತ ಶಾಲೆಗಳನ್ನು ಮುಚ್ಚಲಾಗುತ್ತಿದೆ : ಲೋಕೇಶ್‌ ತಾಳಿಕಟ್ಟೆ

ತುಮಕೂರು: ಕನಿಷ್ಠ ಸಂಖ್ಯೆಯ ವಿದ್ಯಾರ್ಥಿಗಳ ನೆಪದಲ್ಲಿ ಸಾವಿರಾರು ಅನುದಾನಿತ ಶಾಲೆಗಳನ್ನು ಸದ್ದಿಲ್ಲದೆ ಮುಚ್ಚಿ ಬಡ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತಿರುವುದು ಖಂಡನೀಯ ಎಂದು ರೂಪ್ಸ ಕರ್ನಾಟಕ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ ಬೇಸರ ವ್ಯಕ್ತಪಡಿಸಿದ್ದರು.

 

 

 

ಅವರು ನಗರದ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ಹೆಚ್ಚು ಬಡವರು ವಾಸಿಸುವ ಪ್ರದೇಶಗಳಲ್ಲಿ ಕನ್ನಡ ಮಾಧ್ಯಮ ಅನುದಾನಿತ ಶಾಲೆಗಳು ಉಚಿತ ಶಿಕ್ಷಣ ನೀಡುವ ಕೆಲಸವನ್ನು ಸ್ವಾತಂತ್ರ್ಯ ಪೂರ್ವದಿಂದಲೂ ಮಾಡುತ್ತಾ ಬಂದಿದ್ದು, ಅಂತಹ ಶಾಲೆಗಳಲ್ಲಿನ ಶಿಕ್ಷಕರಿಗೆ ಸರ್ಕಾರವೇ ಸಂಬಳ ನೀಡುತ್ತಾ ಬಂದಿದೆ. ಆದರೆ ಕಳೆದ 9 ವರ್ಷದಿಂದ ಅನುದಾನಿತ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಆಡಳಿತ ಮಂಡಳಿಯವರಿಗೆ ಅನುಮತಿ ನೀಡದ ಪರಿಣಾಮ ಇಂದು ರಾಜ್ಯದಾದ್ಯಂತ ಅನುದಾನಿತ ಶಾಲೆಗಳಲ್ಲಿ ಸಾವಿರಾರು ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಇದರ ಪರಿಣಾಮದಿಂದಾಗಿ ಇಂದು ಅನುದಾನಿತ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಡನೀಯವಾಗಿ ಕಡಿಮೆಯಾಗುತ್ತಾ ಬಂದಿದ್ದು, ಇದನ್ನೇ ನೆಪ ಮಾಡಿಕೊಂಡ ಸರ್ಕಾರ ವಿದ್ಯಾರ್ಥಿಗಳ ಸಂಖ್ಯೆಯನ್ನು ಮುಂದಿಟ್ಟುಕೊಂಡು ಅನುದಾನಿತ ಶಾಲೆಗಳನ್ನು ಮುಚ್ಚುವ ಆದೇಶ ಹೊರಡಿಸುತ್ತಿರುವುದು ಶಿಕ್ಷಣದ ಅಧಿನಿಯಮಕ್ಕೆ ವಿರುದ್ಧ ಹಾಗೂ ಬಡ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮರಣ ಶಾಸನ ಬರೆದಂತಿದೆ. ಸದಾ ಬಡವರ ಪರ ಕಾಳಜಿ ವಹಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತಮ್ಮ ಅವಧಿಯಲ್ಲಿ ನೂರಾರು ಅನುದಾನಿತ ಶಾಲೆಗಳನ್ನು ಮುಚ್ಚಲು ಆದೇಶವಾಗುತ್ತಿರುವುದು ಕಣ್ಣಿಗೆ ಕಾಣದಂತಾಗಿದೆಯೇ? ಪ್ರಿಯ ಪರಿಸ್ಥಿತಿ ಮುಂದುವರೆದರೆ ಬಡ ಮಕ್ಕಳ ಹಾಗೂ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರ ಪರಿಸ್ಥಿತಿಯನ್ನು ಕೇಳುವವರು ಯಾರು ಎಂದು ಕಳವಳ ವ್ಯಕ್ತಪಡಿಸಿದರು.

 

 

 

ಅನುದಾನಿತ ಶಾಲೆಗಳಲ್ಲಿ ಕನಿಷ್ಠ 70 ಮಂದಿ ವಿದ್ಯಾರ್ಥಿಗಳಿರಬೇಕು ಎಂಬ ನಿಯಮ ಹೇಳುವ ಸರ್ಕಾರ ಸರ್ಕಾರಿ ಶಾಲೆಗಳಿಗೆ ಈ ನಿಯಮವನ್ನು ಏಕೆ ಅನ್ವಯಿಸುತ್ತಿಲ್ಲ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ನಡುವೆ ಈ ತಾರತಮ್ಯ ಏಕೆ? ತರಗತಿಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ ಎಂಬ ನೆಪದಿಂದ ಅನುದಾನಿತ ಶಾಲಾ ಶಿಕ್ಷಕರಿಗೆ ನಾಲ್ಕು ತಿಂಗಳ ಗಳಿಂದ ವೇತನ ನೀಡದಿರುವುದು ಎಷ್ಟು ಸಮಂಜಸ? ಈ ರೀತಿಯ ಅಪಾಯಕಾರಿ ನಿಯಮದ ಕುರಿತು ಹಲೋ ಬಾರೆ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಗಿದ್ದರೂ ಪ್ರಯೋಜನವಾಗಿಲ್ಲ. ಇನ್ನಾದರೂ ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಿ ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಹಾಗೂ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ಹಿತ ರಕ್ಷಿಸುವಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಮನವಿ ಮಾಡುವುದಾಗಿ ತಿಳಿಸಿದರು.

 

Leave a Reply

Your email address will not be published. Required fields are marked *

error: Content is protected !!