ತುಮಕೂರು : ನಗರದ ಮೆಳೇಕೋಟೆ ಮುಖ್ಯರಸ್ತೆ ಧಾನ್ಹ ಪ್ಯಾಲೇಸ್ ವೃತ್ತದಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ವತಿಯಿಂದ ನಾಡಧ್ವಜವನ್ನು ಹಾರಿಸುವುದರೊಂದಿಗೆ ಭಾರತದ ಸಂವಿಧಾನದ ಪೀಠಿಕೆಯನ್ನು ಸಾಮೂಹಿಕವಾಗಿ ಪಠಣೆ ಮಾಡುವುದರ ಮೂಲಕ ವೈಭವದ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಕಾರ್ಮಿಕ ಇಲಾಖೆಯ ಅಧಿಕಾರಿಗಳಾದ ವೆಂಕಟೇಶ್ ಬಾಬು ಡಿ.ಎಂ.ರವರು ಸರ್ಕಾರದ ಸೌಲಭ್ಯಗಳು ಅರ್ಹ ಫಲಾನುಭವಿಗಳ ಸ್ವತ್ತಾಗಬೇಕು, ಇತ್ತೀಚಿಗೆ ಕೆಲ ಸರ್ಕಾರಿ ಕಛೇರಿಗಳಲ್ಲಿ ದಲ್ಲಾಳಿಗಳು ಅಕ್ರಮವಾಗಿ ಅರ್ಹ ಫಲಾನುಭವಿಗಳಿಗೆ ತಲುಪಿಸದೇ ಇತರೆಯವರಿಗೆ ಸೌಲಭ್ಯಗಳು ತಲುಪುವಂತೆ ಮಾಡುತ್ತಿದ್ದಾರೆ, ಇದನ್ನು ತಡೆಯಬೇಕಾಗಿದೆ ಎಂದು ಹೇಳಿದರು.
ಈ ಭಾರಿ ಕನ್ನಡ ರಾಜ್ಯೋತ್ಸವವನ್ನು ಮಾತ್ರ ಆಚರಿಸದೇ ಇದರೊಂದಿಗೆ ಸಂವೀಧಾನದ ಪೀಠಿಕೆಯನ್ನು ಸಾಮೂಹಿಕವಾಗಿ ಓದುವಂತೆ ಮಾಡಿದ್ದು, ತುಂಬಾ ಸಂತೋಷದ ವಿಷಯ ಏಕೆಂದರೆ ಪ್ರತಿಯೊಬ್ಬ ನಾಗರೀಕನಿಗೂ ಸಂವಿಧಾನದ ಅರಿವಿನೊಂದಿಗೆ ರಾಜ್ಯೋತ್ಸವ ಮತ್ತು ಕನ್ನಡ ನಾಡು, ನುಡಿ ಕುರಿತಾದ ಅರಿವು ಮೂಡಿಸುವಂತೆ ಮಾಡಿರುವುದು ತುಂಬಾ ಶ್ಲಾಘನೀಯ ಸಂಗತಿಯಾಗಿದೆ, ಇದರೊಂದಿಗೆ ಕಾರ್ಮಿಕರ ಒಳತಿಗಾಗಿ ಮುಂದಿನ ದಿನಗಳಲ್ಲಿ ಬೃಹತ್ ಆರೋಗ್ಯ ಶಿಬಿರವನ್ನು ಈ ಸಂಘಟನೆಯಿಂದ ಆಯೋಜಿಸಲಾಗುತ್ತದೆಂದು ಸಂಘದ ವತಿಯಿಂದ ತಿಳಿಸಿದ್ದಾರೆ, ಇದು ತುಂಬಾ ಉತ್ತಮವಾದ ಬೆಳವಣಿಗೆ ಏಕೆಂದರೆ ಕಾರ್ಮಿಕರ ಆರೋಗ್ಯದ ಕಾಳಜಿ ಈ ಸಂಘಟನೆಯಿಂದ ಆಗುತ್ತಿದೆಂದು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎಸ್.ಡಿ.ಟಿ.ಯು. ಮೈಸೂರು ಜಿಲ್ಲಾ ಘಟಕದ ಕಾರ್ಯದರ್ಶಿಯಾದ ತನ್ವೀರ್ ಪಾಷ ಎಂ. ರವರು ಮಾತನಾಡಿ ತುಮಕೂರು ಜಿಲ್ಲೆಯಲ್ಲಿ ನಮ್ಮ ಸಂಘಟನೆ ಅತ್ಯುತ್ತಮವಾಗಿ ಕಾರ್ಯ ನಿರ್ವಹಣೆ ಮಾಡುತ್ತಿದೆ ಎಂಬುದನ್ನು ಅಧಿಕಾರಿಗಳಿಂದಲೇ ಕೇಳಿ ತುಂಬಾ ಸಂತೋಷವಾಯಿತು, ಇಂದು ತಾವು ಮಾಡುತ್ತಿರುವ ರಾಜ್ಯೋತ್ಸವ ಕಾರ್ಯಕ್ರಮ ಬರೀ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗಿರಿಸದೇ ನಮ್ಮ ಕನ್ನಡ ಭಾಷೆ, ನುಡಿ, ನಾಡು ಕುರಿತಾಗಿ ಎಲ್ಲಾ ಜನರಿಗೂ ಅರಿವಾಗುವಂತೆ ವರ್ಷವಿಡೀ ರಾಜ್ಯೋತ್ಸವದಂತಹ ಕನ್ನಡಪರ ಕಾರ್ಯಕ್ರಮಗಳು ನಡೆಯುತ್ತಿರಬೇಕು ಎಂದು ಹೇಳಿದರು.
ಅಧ್ಯಕ್ಷೀಯ ಭಾಷಣವನ್ನು ಮಾಡಿದ ಜಿಲ್ಲಾಧ್ಯಕ್ಷ ಮುಬಾರಕ ಪಾಷ ನಮ್ಮ ಸಂಘಟನೆಯು ಎಲ್ಲಾ ರೀತಿಯ ಕಾರ್ಮಿಕರ ಕಷ್ಟ, ನಷ್ಟ, ನೋವು, ನಲಿವು, ಆರೋಗ್ಯ, ಸ್ವಾಸ್ಥ್ಯ ಕಾಪಾಡುವಲ್ಲಿ ಕೆಲಸ ನೆರವೇರಿಸಿಕೊಂಡು ಬರುತ್ತಿದೆ, ಅದರಂತೆ ಮುಂದಿನ ದಿನಗಳಲ್ಲಿ ಸ್ಥಳೀಯ ಮತ್ತು ಉನ್ನತ ಮಟ್ಟಡ ಆಸ್ಪತ್ರೆಗಳಲ್ಲಿ ಸಹಯೋಗದೊಂದಿಗೆ ಬೃಹತ್ ಆರೋಗ್ಯ ಶಿಬಿರವನ್ನು ಕಾರ್ಮಿಕರು ಮತ್ತು ಅವರ ಕುಟುಂಬ ವರ್ಗದವರಿಗಾಗಿಯೇ ಆಯೋಜಿಸಲಾಗುವುದೆಂದು ತಿಳಿಸಿದರು, ಇನ್ನುಳಿದಂತೆ ನಾವು ಮಾಡುತ್ತಿರುವ ಎಲ್ಲಾ ಸಾಮಾಜಿಕ ಕಾರ್ಯಕ್ರಮಗಳಿಗೆ ಇಲಾಖೆಯಿಂದಲೂ ಸಹ ಉತ್ತಮ ಸಹಕಾರ ವ್ಯಕ್ತವಾಗುತ್ತಿದ್ದು, ಅದಕ್ಕೆ ಸಹಕರಿಸುತ್ತಿರುವ ಅಧಿಕಾರಿಗಳಿಗೆ ನಾವು ಈ ಮೂಲಕ ಅಭಿನಂದನೆ ಸಲ್ಲಿಸುತ್ತಿದ್ದೇವೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾರ್ಮಿಕ ಇಲಾಖೆ ಅಧಿಕಾರಿಯದ ವೆಂಕಟೇಶ್ ಬಾಬು ಡಿ.ಎಂ, ಜಿಲ್ಲಾಧ್ಯಕ್ಷರಾದ ಮುಬಾರಕ್ ಪಾಶ, ಮೈಸೂರಿನ ಜಿಲ್ಲಾ ಕಾರ್ಯದರ್ಶಿಯಾದ ತನ್ವೀರ್ ಪಾಷಾ ಎಮ್, ತುಮಕೂರು ಜಿಲ್ಲಾ ಉಸ್ತುವಾರಿ ಉಬೇದುಲ್ಲ, ಮದರೀಷ ಮಕಾನ್ ಅಧ್ಯಕ್ಷರಾದ ಮುಕ್ತಿಯಾರ್ ಅಹಮದ್, ಕಾರ್ಯದರ್ಶಿಯಾದ ಝಬಿವುಲ್ಲಾ ಜಿಲ್ಲಾ ಉಪಾಧ್ಯಕ್ಷರಾದ ಮೊಹಮ್ಮದ್ ಅಕ್ರಂ, ಖಜಾಂಚಿ ನಯಾಜ್ ಪಾಷಾ ಸೇರಿದಂತೆ ಜಿಲ್ಲಾ ಸದಸ್ಯರುಗಳು ಹಾಗೂ ಅಪಾರ ಸಂಖ್ಯೆಯ ಕಾರ್ಮಿಕ ಮುಖಂಡರು ಮತ್ತು ಕಾರ್ಮಿಕರು ಭಾಗವಹಿಸಿದ್ದರು.