ತುಮಕೂರು: ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ವಿದ್ಯಾಭ್ಯಾಸ ಹೊಂದಿ ಉನ್ನತ ಅಧಿಕಾರಿಗಳಾಗಿ ಈ ರಾಷ್ಟ್ರದ ಸೇವೆ ಮಾಡುವಂತೆ ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ: ಜಿ. ಪರಮೇಶ್ವರ ಅವರು ಕರೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಗರದ ಗೆದ್ದಲಹಳ್ಳಿ ಬಳಿಯ ಬಾಲಕಿಯರ ವಸತಿ ನಿಲಯದ ಆವರಣದಲ್ಲಿ ಜರುಗಿದ ವಿದ್ಯಾರ್ಥಿಗಳಿಗೆ ವಿವಿಧ ಸವಲತ್ತುಗಳ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಬೇಕು. ಈ ನಿಟ್ಟಿನಲ್ಲಿ ಸರ್ಕಾರ ಯೋಜನೆ ರೂಪಿಸಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗಾಗಿ ವಸತಿ ನಿಲಯಗಳನ್ನು ಆರಂಭಿಸಿದೆ. ಇಂದು ಉನ್ನತ ಸಾಧನೆ ಮಾಡುತ್ತಿರುವ ವ್ಯಕ್ತಿಗಳೆಲ್ಲಾ ಬಡತನದಿಂದ ಬಂದವರೇ ಆಗಿರುತ್ತಾರೆ. ವಿದ್ಯಾರ್ಥಿಗಳಿಗೆ ತಂದೆ-ತಾಯಿಯರು ಪಡುವ ಕಷ್ಟದ ಅರಿವು ಇರಬೇಕು. ದೀಪದ ಬೆಳಕಿನಲ್ಲಿ ಓದಿದಂತಹ ಸರ್ ಎಂ.ವಿಶ್ವೇಶ್ವರಯ್ಯ ಅವರು ಜಗತ್ತಿನ ಗಮನ ಸೆಳೆದರು. ಸಮಾಜದಲ್ಲಿನ ಶೋಷಿತರು ಸಮಾನರಂತೆ ಬದುಕಲು ಅವರ ಸಬಲೀಕರಣಕ್ಕಾಗಿ ಡಾ: ಬಿ.ಆರ್. ಅಂಬೇಡ್ಕರ್ ಸಾಕಷ್ಟು ಶ್ರಮಿಸಿದ್ದಾರೆ. ಕಾನೂನುಗಳ ಮೂಲಕ ಮಹಿಳಾ ಸಬಲೀಕರಣವಾಗುತ್ತಿದೆ. ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರು ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮಹಿಳೆಯರಿಗಾಗಿ ಮೀಸಲಾತಿಯನ್ನು ತಂದರು. ಈ ಮೂಲಕ ಸಾಮಾನ್ಯ ಒಬ್ಬ ಮಹಿಳೆಯೂ ಕೂಡ ಪಂಚಾಯತಿ ಅಧ್ಯಕ್ಷರಾಗಿ ಅಧಿಕಾರ ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ವಸತಿ ನಿಲಯದಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯನ್ನು ಗಮನಿಸಿ ಜಿಲ್ಲಾಡಳಿತವು ಜಿಲ್ಲೆಯಾದ್ಯಂತ ವಿವಿಧ ಸವಲತ್ತುಗಳನ್ನು ವಿತರಣೆ ಮಾಡುತ್ತಿರುವುದು ರಾಜ್ಯದಲ್ಲಿಯೇ ವಿಶೇಷ ಕಾರ್ಯ ಎಂದರು. ನಾವೆಲ್ಲ ಅಭಿವೃದ್ಧಿ ಹೊಂದುವ ಜೊತೆ-ಜೊತೆಗೆ ತಾಯಿ ಭಾಷೆಯಾದ ಕನ್ನಡ ಭಾಷೆಯನ್ನು ಬೆಳೆಸಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಸ್ವಾಗತಿಸಿ ಮಾತನಾಡಿದ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ, ಕೆಡಿಪಿ ಸಭೆಯಲ್ಲಿ ವಸತಿ ನಿಲಯದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇರುವ ಬಗ್ಗೆ ತಿಳಿಸಲಾಯಿತು. ಜಿಲ್ಲೆಯ ೧೦೦ ವಸತಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ೧೨ ಸಾವಿರ ವಿದ್ಯಾರ್ಥಿಗಳಲ್ಲಿ ಕೊರತೆಯಾಗಿದ್ದ ೪ ಸಾವಿರ ಹಾಸಿಗೆ ಹಾಗೂ ೩ ಸಾವಿರ ವಿದ್ಯಾರ್ಥಿಗಳು ಉಪಯೋಗಿಸುವ ಎರಡು ಅಂತಸ್ತಿನ ೧೫೦೦ ಮಂಚಗಳು, ಹೊದಿಕೆ, ಸಿಸಿ ಟಿವಿ ವ್ಯವಸ್ಥೆ, ಕುಡಿಯುವ ನೀರಿನ ಘಟಕ, ಸೇರಿದಂತೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಸಚಿವರ ಸೂಚನೆಯಂತೆ ಜಿಲ್ಲಾಧಿಕಾರಿಗಳು ಒದಗಿಸಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ., ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾ ಅಧಿಕಾರಿ ಎಸ್.ಆರ್. ಗಂಗಪ್ಪ, ರವಿಕುಮಾರ್, ನಿರ್ಮಿತಿ ಕೇಂದ್ರದ ರಾಜಶೇಖರ್, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ತ್ಯಾಗರಾಜ್, ತಹಶೀಲ್ದಾರ್ ಸಿದ್ದೇಶ್, ನಿಲಯ ಪಾಲಕಿ ತನುಜ ಸೇರಿದಂತೆ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ಮತ್ತಿತರರು ಉಪಸ್ಥಿತರಿದ್ದರು.