ಒಂದೇ ಕುಟುಂಬದ ಐವರ ಸಾವಿನ ಪ್ರಕರಣ ; ರಾಜ್ಯಾದ್ಯಂತ ಬಡ್ಡಿ ದಂಧೆಗೆ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಪರಂ ವಿಶ್ವಾಸ
ರಾಜ್ಯದ ಗೃಹ ಸಚಿವರಾಗಿರುವ ಜಿ. ಪರಮೇಶ್ವರ್ ಅವರು ಸೋಮವಾರ ಶವಾಗಾರಕ್ಕೆ ಭೇಟಿ ನೀಡಿ, ಗರೀಬ್ ಸಾಬ್ ಕುಟುಂಬಕ್ಕೆ ಸಾಂತ್ವನ ಹೇಳಿದರು. ಇದು ನಿಜಕ್ಕೂ ಬಹಳ ನೋವು ತರುವ ವಿಷಯ. ಕುಟುಂಬದಲ್ಲಿ ಯಾರೂ ಉಳಿದಿಲ್ಲ. ಗರೀಬ್ ಸಾಬ್ ಅವರಿಗೆ ತಂದೆ, ತಾಯಿ, ಸಹೋದರರು ಇದ್ದರೂ ಸಹ ತಾವು ಮಾಡಿಕೊಂಡಿರುವ ಸಾಲವನ್ನು ತೀರಿಸಲು ಸಾಧ್ಯವಾಗಲಿಲ್ಲ ಸಾಲ ನೀಡಿದವರು ಅವರು ವಿಧಿಸುತ್ತಿದ್ದ ಅಪಾರವಾದ ಬಡ್ಡಿ ಮರುಪಾವತಿಗೆ ಒತ್ತಡ ಹೇರುವುದಲ್ಲದೇ ಮಾನಸಿಕ ಕಿರುಕುಳ ನೀಡಲಾಗುತ್ತಿತ್ತು ಎಂದು ತಮ್ಮ ಡೆತ್ ನೋಟ್ ನಲ್ಲಿ ಬರೆದುಕೊಂಡಿದ್ದಾರೆ ಆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ತಿಳಿಸಿದರು.
ಈ ಸಾವಿನ ಹಿಂದೆ ಬಡ್ಡಿ ದಂಧೆ ಇದೆ ಎಂದು ಜನರು ಮಾತನಾಡುತ್ತಿದ್ದಾರೆ, ಜೊತೆಗೆ ಮೃತ ವ್ಯಕ್ತಿಯು ಸಹ ತಮ್ಮ ಡೆತ್ ನೋಟ್‌ನಲ್ಲಿ ಬರೆದಿದ್ದು ಇದನ್ನು ಗಂಭೀರವಾಗಿ ತೆಗದುಕೊಂಡು, ಬಡ್ಡಿ ವ್ಯವಹಾರವನ್ನು ಶೀಘ್ರದಲ್ಲಿಯೇ ನಿಲ್ಲಿಸಲು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ ಅವರು, ಮೃತರ ಕುಟುಂಬಕ್ಕೆ ಪರಿಹಾರ ನೀಡುವ ವಿಚಾರದಲ್ಲಿ ಮುಖ್ಯಮಂತ್ರಿಗಳ ಜತೆ ಮಾತನಾಡುವುದಾಗಿ ಹೇಳಿದರು.
ಅಮಾಯಕರಿಗೆ ಸಾಲ ಕೊಟ್ಟು ಬಡ್ಡಿ ಪಡೆಯುವುದು ಜಾಸ್ತಿಯಾಗಿದೆ. ತನಿಖೆಯ ನಂತರ ಎಲ್ಲ ವಿಚಾರಗಳಲ್ಲಿ ಬಯಲಿಗೆ ಬರಲಿವೆ. ಇಂತಹ ಘಟನೆ ಮರುಕಳಿಸಬಾರದು. ಇದನ್ನು ತಡೆಯುವಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಇನ್ನು ಪ್ರಕರಣದ ವಿಷಯಕ್ಕೆ ಬಂದರೆ
ತುಮಕೂರಿನ ಸದಾಶಿವ ನಗರದ ಒಂದೇ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ಸಂಜೆ ಸಂಭವಿಸಿದ್ದು ರಾತ್ರಿ 8.30ರ ಸರಿಸುಮಾರಿಗೆ ಬಯಲಾಗಿದೆ ಎನ್ನಲಾಗಿದೆ. ಸದಾಶಿವ ನಗರ ನಿವಾಸಿ ಗರೀಬ್ ಸಾಬ್ (32), ಪತ್ನಿ ಸುಮಯ್ಯ (30) ದಂಪತಿ ಡೆತ್ ನೋಟ್ ಒಂದನ್ನು ಬರೆದಿಟ್ಟು, ತಮ್ಮ ಮೂವರು ಮಕ್ಕಳಾದ ಹಾಜಿರಾ (14), ಮೊಹಮ್ಮದ್ ಸುಭಾನ್ (10), ಮೊಹಮ್ಮದ್ ಮುನೀರ್ (8) ಅವರಿಗೆ ವಿಷ ಕೊಟ್ಟು ನಂತರ ದಂಪತಿಗಳು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ಸಾವಿಗೆ ಕಾರಣ ಸಹ ಅವರ ಡೆತ್ ನೋಟ್‌ನಲ್ಲಿ ಬರೆಯಲಾಗಿದ್ದು ತಮ್ಮಗಳ ಸಾವಿಗೆ ತಾವು ವಾಸವಿರುವ ಮನೆಯ ಕೆಳಗಡೆ ಮನೆಯ ನಿವಾಸಿಗಳಾದ ಖಲಂದಾರ್ ಮತ್ತು ಕುಟುಂಬವೇ ನೇರ ಕಾರಣವೆಂದು ಸಹ ಬರೆದುಕೊಂಡಿದ್ದಾರೆ.
ಇನ್ನು ಖಲಂದಾರ್ ಬಳಿ ಇಂತಿಷ್ಟು ಮೊತ್ತವನ್ನು ಸಾಲವಾಗಿ ಪಡೆದಿದ್ದು, ಅದರ ಬಡ್ಡಿ ಬೆಟ್ಟದಷ್ಟು ಆಗಿದ್ದು ಅದನ್ನು ವಾಪಸ್ಸಾತಿಗಾಗಿ ಖಲಂದರ್ ಮತ್ತು ಅವನ ಕುಟುಂಬ ವರ್ಗದವರು ಸಾಕಷ್ಟು ರೀತಿಯಲ್ಲಿ ಕಿರುಕುಳ ಕೊಟ್ಟಿದ್ದು ಅಲ್ಲದೇ, ತಾವು ಮತ್ತು ತಮ್ಮ ಕುಟುಂಬದವರು ಬಡಾವಣೆಯ ಇತರೆ ನಿವಾಸಿಗಳೊಂದಿಗೆ ಮಾತನಾಡಿದರೂ ಸಹ ಅವರುಗಳಿಗೆ ಇಲ್ಲ ಸಲ್ಲದ ದೂರುಗಳನ್ನು ಹೇಳಿ ನಮ್ಮನ್ನು ಎಲ್ಲರಿಂದಲೂ ದೂರವಿರುಸುವಂತೆ ಕುತಂತ್ರ ಬುದ್ಧಿಯನ್ನು ಉಪಯೋಗಿಸಿದ್ದಲ್ಲದೇ ಇವರ ಸಾಲ ತೀರಿಸಲು ನಾವು ಬೇರೊಬ್ಬರ ಬಳಿಯೂ ಸಾಲ ಪಡೆಯದಂತೆ ಮಾಡಿ ಮಾನಸಿಕವಾಗಿ ಚಿತ್ರ ಹಿಂಸೆ ನೀಡಿದ್ದಾರೆಂಬುದಾಗಿ ಹೇಳಿಕೊಂಡಿದ್ದಾರೆ.
ಇನ್ನು ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ತುಮಕೂರಿನ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎರಡು ಎಫ್.ಐ.ಆರ್.ಗಳು ದಾಖಲಾಗಿದ್ದು ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿರುವ ಪೊಲೀಸರು ಶೀಘ್ರದಲ್ಲಿಯೇ ಇದಕ್ಕೆ ನ್ಯಾಯ ದೊರಕಿಸಿಕೊಡಲು ಶ್ರಮವಹಿಸುವುದಾಗಿ ತಿಳಿಸಿದ್ದಾರೆ.
ಏನಿದೆ ಎರಡು ಎಫ್‌ಐಆರ್‌ಗಳಲ್ಲಿ?
ಘಟನೆಗೆ ಸಂಬಂಧಿಸಿ ತುಮಕೂರಿನ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿವೆ. ಮೃತ ಗರೀಬ್ ಸಾಬ್ ಅವರ ಸಹೋದರ ಖಲಂದರ್ ಸಾಬ್ ಅವರು ನೀಡಿದ ದೂರಿನ ಆತ್ಮಹತ್ಯೆ ಪ್ರಕರಣ ದಾಖಲಾಗಿದ್ದು, ಇದಕ್ಕೆ ಸಂಬಂಧಿಸಿ ಐಪಿಸಿ ಸೆಕ್ಷನ್ 302, 109, 34 ಅಡಿಯಲ್ಲಿ ಎಫ್.ಐ.ಆರ್ ದಾಖಲಾಗಿದೆ.
ಎರಡನೇ ಎಫ್ಐಆರ್ ನಲ್ಲಿ ಬಡ್ಡಿ ದಂಧೆ ಹಾಗೂ ಕಿರುಕುಳ ಆರೋಪ ದಾಖಲಾಗಿದೆ. ಇದರಲ್ಲಿ ಪಕ್ಕದ ಮನೆಯವರಾದ ಖಲಂದರ್, ಸಾನಿಯಾ, ಶಾಬಾಜ್, ಶಬಾನಾ, ಸಾನಿಯಾ ವಿರುದ್ಧ ದೂರಲಾಗಿದೆ. ಐಪಿಸಿ ಸೆಕ್ಷನ್ 305, 306, 34 ಅಡಿ ಎಫ್ಐಆರ್ ದಾಖಲಾಗಿದೆ. ಗರೀಬ್ ಸಾಬ್‌ನ ವಿಡಿಯೋ ಹೇಳಿಕೆ ಆಧರಿಸಿ ಪೊಲೀಸರು ಎಫ್ಐಆರ್ ದಾಖಲು ಮಾಡಿಕೊಂಡಿದ್ದಾರೆ.
ಗರೀಬ್ ಸಾಬ್ ಅವರು ಮಕ್ಕಳ ಶಿಕ್ಷಣಕ್ಕಾಗಿ ಹಾಗೂ ವ್ಯವಹಾರಕ್ಕಾಗಿ ಸಾಲ ಮಾಡಿದ್ದರು. ಆದರೆ, ಕಬಾಬ್ ವ್ಯವಹಾರ ಸೋಲು ಕಂಡಿತ್ತು. ಹಣ ಹೊಂದಾಣಿಕೆಗೆ ಕಷ್ಟಪಡುತ್ತಿದ್ದರು. ಇದರ ನಡುವೆ, ಆರೋಪಿಗಳಾದ ಖಲಂದರ್, ಖಲಂದರ್ ಪುತ್ರಿ ಸಾನಿಯಾ, ಖಲಂದರ್ ಪುತ್ರ ಶಾಬಾಜ್, ಹಾಗೂ ಪಕ್ಕದ ಮನೆಯ ಶಬಾನಾ, ಶಬಾನಾ ಪುತ್ರಿ ಸಾನಿಯಾ ಅವರು ಸಾಲ ಕೊಟ್ಟವರ ಬಳಿ ಚಾಡಿ ಹೇಳಿ ಮಾನಸಿಕ ಕಿರುಕುಳ ಕೊಡಿಸಿದ್ದರು ಎಂದು ಹೇಳಲಾಗುತ್ತಿದೆ. ಸದ್ಯ ಐವರು ಆರೋಪಿಗಳನ್ನು ವಶಕ್ಕೆ ಪಡೆದಿರುವ ತಿಲಕ್ ಪಾರ್ಕ್ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.