ತುಮಕೂರು : ಪ್ರಜಾಪ್ರಭುತ್ವ ರಕ್ಷಣಾ ವೇದಿಕೆಯನ್ನು ಎಂ.ಜಿ.ರಸ್ತೆಯಲ್ಲಿರುವ ಬಾಲಭವನದ ಸಭಾಂಗಣದಲ್ಲಿ ವಿದ್ಯುಕ್ತವಾಗಿ ಪ್ರಾರಂಭಿಸಲಾಯಿತು. ಕನ್ನಡ ರಾಜ್ಯೋತ್ಸವ ಆಚರಿಸುವುದರ ಮೂಲಕ ವೇದಿಕೆಯನ್ನು ಲೋಕಾರ್ಪಣೆ ಮಾಡಿದ್ದು ವಿಶೇಷವಾಗಿತ್ತು.
ಕರ್ನಾಟಕದ ನಾಡಧ್ವಜಾರೋಹಣವನ್ನು ಮಹಾನಗರ ಪಾಲಿಕೆ ಮಹಾಪೌರರಾದ ಪ್ರಭಾವತಿ ಸುಧೀಶ್ವರ್ ನೆರವೇರಿಸಿದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತರಾದ ಅಶ್ವಿಜ, ಕೌಶಲ್ಯ ಅಭಿವೃದ್ಧಿ ಮಾಜಿ ಅಧ್ಯಕ್ಷರಾದ ಮುರಳೀಧರ ಹಾಲಪ್ಪ, ಉಪಸ್ಥಿತರಿದ್ದರು. ನಾಡಧ್ವಜ ವಂದನೆ ಸಲ್ಲಿಸಿದ ಬಳಿಕ ಮಾತನಾಡಿದ ಪಾಲಿಕೆ ಆಯುಕ್ತರಾದ ಅಶ್ವಿಜರವರು ಇಂದಿನ ಮಕ್ಕಳು ನಮ್ಮ ಮುಂದಿನ ಭವಿಷ್ಯದ ಆಸ್ತಿಗಳು, ಕನ್ನಡ ಭಾಷೆಯನ್ನು ಉಳಿಸಿ- ಬೆಳೆಸುವ ಕಾರ್ಯ ಮಕ್ಕಳಿಂದ ಆಗಬೇಕಿದೆ, ಪೋಷಕರು ಮಕ್ಕಳಲ್ಲಿ ಕನ್ನಡ ನಾಡು ನುಡಿ ಕುರಿತಾಗಿ ತಿಳುವಳಿಕೆ ನೀಡುವಂತಹ ಕಾರ್ಯ ಆಗಬೇಕಿದೆ ಎಂದರು.
ಮುಖ್ಯ ಅತಿಥಿಗಳಾದ ಮುರಳೀದರ ಹಾಲಪ್ಪರವರು ಮಾತನಾಡಿ ನಿಮ್ಮ ಈ ವೇದಿಕೆಯು ಇತರೆ ವೇದಿಕೆಗಳಿಗೆ ಮಾದರಿಯಾಗುವಂತೆ ಆಗಲಿ ನಿಮ್ಮ ಧ್ಯೇಯೋದ್ದೇಶಗಳನ್ನು ಕೇಳಿ ತಿಳಿದು ಅತ್ಯಂತ ಸಂತೋಷವಾಗಿದ್ದು, ಮುಂದಿನ ದಿನಗಳಲ್ಲಿ ನಿಮ್ಮ ವೇದಿಕೆಯಿಂದ ಉತ್ತಮ ಸಮಾಜಸೇವೆ ಕೆಲಸಗಳನ್ನು ಅಪೇಕ್ಷಿಸುತ್ತಿದ್ದೇವೆಂದರು, ಜೊತೆಗೆ ನಮ್ಮ ಹಾಲಪ್ಪ ಸಂಸ್ಥಾನದ ವತಿಯಿಂದ ಬಡ ಮಕ್ಕಳಿಗೆ ನಿಮ್ಮ ವೇದಿಕೆಯ ಮೂಲಕ ಉಚಿತವಾಗಿ ಸೈಕಲ್‌ಗಳನ್ನು ವಿತರಿಸಲಾಗುವುದು ಎಂದರು.
ಹಿರೇಮಠದ ಡಾ. ಶ್ರೀ ಶ್ರೀ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ನಿಮ್ಮ ಪ್ರಜಾಪ್ರಭುತ್ವ ರಕ್ಷಣಾ ವೇದಿಕೆಯು ಉತ್ತಮವಾಗಿ ಬೆಳೆಯಲಿ, ನಿಮ್ಮಗಳಿಗೆ ಉಜ್ವಲ ಭವಿಷತ್ತು ಇದ್ದು, ನಿಮ್ಮಗಳಿಂದ ಸಮಾಜಕ್ಕೆ ಉತ್ತಮ ಕೆಲಸ ಕಾರ್ಯಗಳು ನಡೆಯಲಿ ಎಂದು ಶುಭ ಹಾರೈಸಿದರು. ನಮ್ಮ ಕನ್ನಡ ಭಾಷೆಗೆ ಅತ್ಯಧಿಕ ಜ್ಞಾನಪೀಠ ಪ್ರಶಸ್ತಿ ಲಭಿಸಿದ್ದು, ನಮ್ಮ ಕನ್ನಡ ಭಾಷೆಗೆ ಸುಮಾರು ೨೫೦೦ ವರ್ಷಗಳಷ್ಟು ಇತಿಹಾಸವಿದ್ದು ಅದನ್ನು ಉಳಿಸಿ ಬೆಳೆಸುವ ಕಾರ್ಯ ಆಗಬೇಕಿದೆ ಎಂದರು.
ಜನರು ಇತ್ತೀಚಿನ ದಿನಗಳಲ್ಲಿ ನಿರುತ್ಸಾಹಿಗಳಾಗುತ್ತಿದ್ದು, ಅದಕ್ಕೆ ಕಾರಣ ಸರ್ಕಾರದ ಕೆಲವು ನಿಲುವುಗಳೇ ಮುಖ್ಯವೆಂದರು. ಜನರು ಕಷ್ಟಪಟ್ಟು ದುಡಿದು ಜೀವನ ನಡೆಸಿ, ಇನ್ನೊಬ್ಬರಿಗೆ ಆಸರೆಯಾಗಿ ನಿಲ್ಲಬೇಕಿದೆ ಎಂದರು, ನಾವುಗಳು ನಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡಬೇಕಿದೆ. ಇತ್ತೀಚೆಗೆ ನಡೆದ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ತಂಡದ ಸೋಲಿಗೆ ಅತೀಯಾದ ಆತ್ಮವಿಶ್ವಾಸವೇ ಕಾರಣ, ಆದರೂ ಮಹಿಳೆಯರು ವಿಶ್ವ ಹಾಕಿ ಚಾಂಪಿಯನ್ ಶಿಪ್‌ನಲ್ಲಿ ನಮ್ಮ ಭಾರತದ ಗೌರವವನ್ನು ಎತ್ತಿ ಹಿಡಿಯುವಲ್ಲಿ ಯಶಸ್ವಿಯಾದ್ದರು, ಅದನ್ನು ಗುರುತಿಸಿ ಬೆಳೆಸುವಂತಹ ಕಾರ್ಯ ನಮ್ಮಲ್ಲಿ ಆಗಬೇಕಿದೆ, ಹುಟ್ಟಿದ ಮಗುವಿನಿಂದ ವೃದ್ಧರವರೆಗೆ ಕ್ರಿಕೆಟ್ ಕ್ರೀಡೆಯನ್ನು ಪ್ರೀತಿಸಿ ಕ್ರೀಡಾಂಗಣದ ಒಳಗಡೆ ಹಾಗೂ ಹೊರಗಡೆ ಹೇಗೆ ಆಟಗಾರರನ್ನು ಹುರಿದುಂಬಿಸಲು ವಂದೇಮಾತರಂ, ಜೈಹೋ, ಇತ್ಯಾದಿಯಾಗಿ ಘೋಷಾವಾಖ್ಯಗಳೊಂದಿಗೆ ಪ್ರೇರಪಣೆ ಮಾಡುತ್ತಾರೆಯೋ ಅದೇ ರೀತಿಯಲ್ಲಿ ಇತರೆ ಕ್ರೀಡೆಗಳು ಸೇರಿದಂತೆ ನಮ್ಮ ರಾಷ್ಟ್ರೀಯ ಕ್ರೀಡೆಯಾದ ಹಾಕಿಯನ್ನು ಹುರಿದುಂಬಿಸುವುದರೊಂದಿಗೆ ಮೊದಲು ನಮ್ಮ ನಾಡು, ನುಡಿ, ರಾಜ್ಯ, ದೇಶವನ್ನು ರಕ್ಷಿಸುವಲ್ಲಿ ಜನರು ಮುಂದಾಗಬೇಕಿದೆ ಎಂದು ಪುನರ್ ಉಚ್ಛರಿಸಿದರು. ಇಂತಹ ಕಾರ್ಯಗಳು ಈ ಪ್ರಜಾಪ್ರಭುತ್ವ ರಕ್ಷಣಾ ವೇದಿಕೆಯಿಂದ ಆಗಬೇಕಾಗಿದೆ ಎಂದು ಆಶೀವರ್ಚನ ಮಾಡಿದರು.
ವೇದಿಕೆಯ ರಾಜ್ಯಾಧ್ಯಕ್ಷರಾದ ಗುರುಪ್ರಸಾದ್ ಮಾತನಾಡಿ ನಾಡು, ನುಡಿ, ನೆಲ, ಜಲ ರಕ್ಷಣೆಯೊಂದಿಗೆ ನಮ್ಮ ಪ್ರಜಾಪ್ರಭುತ್ವ / ಸಂವಿದಾನದ ರಕ್ಷಣೆಯನ್ನು ಮಾಡಲು ಈ ಪ್ರಜಾಪ್ರಭುತ್ವ ರಕ್ಷಣಾ ವೇದಿಕೆಯನ್ನು ರಾಜ್ಯಾದ್ಯಂತ ಸಂಘಟಿಸಲಾಗುತ್ತಿದ್ದು, ಪ್ರಜೆಗಳೆಂದರೆ ಪ್ರಭುತ್ವ ಎಂಬುದು ಇಂದಿನ ಪರಿಸ್ಥಿತಿಯಲ್ಲಿ ಇಲ್ಲದಂತಾಗಿದೆ, ಅದನ್ನು ರಕ್ಷಿಸುವ ಮತ್ತು ಅದರ ಉಳಿವಿಗಾಗಿ ನಾವು ಕೆಲಸ ಕಾರ್ಯಗಳನ್ನು ಮಾಡುತ್ತೇವೆಂದರು. ಗ್ರಾಮದಿಂದ ಹಿಡಿದು ರಾಜ್ಯದ ಎಲ್ಲಾ ಮೂಲೆ ಮೂಲೆಯಲ್ಲಿಯೂ ಸಹ ನಮ್ಮ ತಂಡವು ಪ್ರಜಾಪ್ರಭುತ್ವವನ್ನು ರಕ್ಷಣೆ ಮಾಡುವ ಹೊಣೆಯನ್ನು ಹೊತ್ತು ಶ್ರಮಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಗಣ್ಯರುಗಳಾದ ರಂಗಭೂಮಿ ಕಲಾವಿದರಾದ ರಾಜು ನಂಜಪ್ಪಶೆಟ್ಟಿ, ಹರಿಕಥೆ ಪ್ರವೀಣರಾದ ನಂದೀಶ್ ಕುರುಡಿಗಾನಹಟ್ಟಿ, ಪತ್ರಿಕಾ ಛಾಯಾಗ್ರಾಹಕರಾದ ಎಸ್.ಉದಯ್, ಕ್ರೀಡೆ & ಚಿತ್ರ ಕಲಾವಿದರಾದ ನಿರ್ಮಲ, ಮಂಕುತಿಮ್ಮನ ಕಗ್ಗ ಪಠಣ ಮಾಡಿದ ಆರ್ಯಭಟ ಮತ್ತು ಪುಟಾಣಿ ಗಾರ್ಗಿ ಇವರುಗಳಿಗೆ ವೇದಿಕೆಯ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ನಂದೀಶ್ ಪ್ರಾರ್ಥಿಸಿದರು, ಚಂದ್ರಕಲಾ ನಿರೂಪಣೆಯನ್ನು ಮಾಡಿದರು. ವೇದಿಕೆಯಲ್ಲಿ ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷರಾದ ಎ.ಎನ್.ಗುರುಪ್ರಸಾದ್, ಉಪಾಧ್ಯಕ್ಷರಾದ ಎನ್.ಎಸ್.ನಾಗೇಂದ್ರ, ನಾಗರಾಜು, ದೀಪಿಕಾ, ಕೃಷ್ಣಮೂರ್ತಿ ಹಾಗೂ ಇನ್ನಿತರೆ ಪದಾಧಿಕಾರಿಗಳು ಉಪಸ್ಥಿತರಿದ್ದರು.