ತುಮಕೂರು : ಮಕ್ಕಳನ್ನು ಮಾದಕ ವ್ಯಸನಗಳಿಂದ ದೂರ ಇರಿಸಲು ಪೋಷಕರ ಪಾತ್ರ ಅತ್ಯಗತ್ಯವೆಂದು ಕಾಂಗ್ರೆಸ್ ಮುಖಂಡರು, ಕೌಶಲ್ಯ ಅಭಿವೃದ್ಧಿ ಮಾಜಿ ಅಧ್ಯಕ್ಷರು ಆದ ಮುರಳೀಧರ ಹಾಲಪ್ಪರವರು ಕಿವಿ ಮಾತು ಹೇಳಿದ್ದಾರೆ.
ಭಗವಾನ್ ಪುಟ್ಟಪರ್ತಿ ಸಾಯಿ ಬಾಬಾರವರ ಜನ್ಮವರ್ಧಂತಿ ಮಹೋತ್ಸವ ಪ್ರಯುಕ್ತ ಡಾ. ರಾಧಾಕೃಷ್ಣ ರಸ್ತೆಯಲ್ಲಿರುವ ಶ್ರೀ ಸತ್ಯಸಾಯಿ ಧ್ಯಾನ ಮಂದಿರದಲ್ಲಿ ಏರ್ಪಡಿಸಲಾಗಿದ್ದ ವಿಶೇಷ ಸತ್ಸಂಗ ಮತ್ತು ಜನ್ಮ ವರ್ಧಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು.
ತಾವು ಸ್ವತಃ ಬಾಬಾ ಭಕ್ತರಾಗಿದ್ದು ತಮ್ಮ ಬಾಲ್ಯದ ಜೀವನದಲ್ಲಿ ಪ್ರತಿ ನಿತ್ಯ ಸಂಜೆ ಸಮಯದಲ್ಲಿ ತಮ್ಮ ಪೋಷಕರೊಡನೆ ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಮಾಡಿಕೊಂಡು ಬಂದು ಮನೆಯಲ್ಲಿ ಪಠ್ಯಗಳನ್ನು ಓದುವ ಕಾರ್ಯ ಮಾಡುತ್ತಿದ್ದೇವು, ಆದರೆ ಇತ್ತೀಚಿನ ದಿನಗಳಲ್ಲಿ ಮಕ್ಕಳನ್ನು ಪೋಷಕರು ದೇವಸ್ಥಾನಗಳಿಗೆ ಕರೆದುಕೊಂಡು ಹೋಗದೇ ಇರುವುದು ಕಾಣುತ್ತಿದ್ದೇವೆ ಎಂದರು.
ಇತ್ತಿಚಿನ ದಿನಗಳಲ್ಲಿ ಮಕ್ಕಳಿಗೆ ಆಧ್ಯಾತ್ಮಿಕ ಪರಿಕಲ್ಪನೆ ಇಲ್ಲದೇ ಇರುವುದು ಹೆಚ್ಚಾಗಿ ಕಾಣಸಿಗುತ್ತಿದೆ ಜೊತೆಗೆ ಇತ್ತೀಚಿನ ದಿನಗಳಲ್ಲಿ ಮಕ್ಕಳು ಮಾದಕ ದ್ರವ್ಯಗಳಿಗೆ (ಡ್ರಗ್ಸ್) ವ್ಯಸನರಾಗುತ್ತಿರುವುದನ್ನು ಹೆಚ್ಚಿನದಾಗಿ ಕಾಣುತ್ತಿದ್ದೇವೆ, ಏಕೆಂದರೆ ಶಾಲಾ ಮಟ್ಟದ ಹೆಚ್ಚಿನದಾಗಿ ಹೈಸ್ಕೂಲ್ ವಿದ್ಯಾರ್ಥಿಗಳು ಸಹ ಮಾದಕ ದ್ರವ್ಯಗಳಿಗೆ ವ್ಯಸನರಾಗುತ್ತಿದ್ದಾರೆ. ಇನ್ನೂ ಕಾಲೇಜು ಮಟ್ಟದ ವಿದ್ಯಾರ್ಥಿಗಳಲ್ಲಿ ಹೆಚ್ಚಿನದಾಗಿ ಕಾಣ ಸಿಗುತ್ತಿದೆ, ಈ ಮಾದಕ ವ್ಯಸನ ಇತ್ತೀಚನ ದಿನಗಳಲ್ಲಿ ಬಹಳಷ್ಟು ಹರಡಿದೆ, ಈ ಹಿಂದಿನ ದಿನಗಳಲ್ಲಿ ಮಧ್ಯ ವ್ಯಸನಿಗಳು, ಧೂಮಪಾನಕ್ಕೆ ದಾಸರಾಗುತ್ತಿದ್ದು, ಇತ್ತೀಚಿನ ಹೈಟೆಕ್ ದಿನಗಳಲ್ಲಿ ಮಾದಕ ವ್ಯಸನಗಳಿಗೆ ದಾಸರಾಗುತ್ತಿದ್ದಾರೆ.
ಇಂತಹ ಮಾದಕ ವ್ಯಸನಗಳಿಂದ ಮಕ್ಕಳನ್ನು ದೂರ ಇರಿಸುವಲ್ಲಿ ಪೋಷಕರ ಪಾತ್ರ ಅತ್ಯಂತ ಹಿರಿಯದಾಗಿರುತ್ತದೆ, ಏಕೆಂದರೆ ಮಕ್ಕಳ ದೈನಂದಿನ ಚಲನವಲನಗಳ ಮೇಲೆ ನಿಗಾ ವಹಿಸುವುದು ಪೋಷಕರ ಪಾತ್ರ ಮಹತ್ತರದ್ದಾಗಿರುತ್ತದೆ ಎಂದರು. ಇನ್ನು ಈಗಾಗಲೇ ಸ್ಥಳೀಯ ಜಿಲ್ಲಾಡಳಿತದಿಂದ ಅಂದರೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಪಾಲಿಕೆ ಆಯುಕ್ತರು, ಶಿಕ್ಷಣ ಇಲಾಖೆಯನ್ನೊಳಗೊಂಡ ತಂಡವನ್ನು ರಚಿಸಲಾಗಿದ್ದು, ಈ ಕುರಿತು ನಮ್ಮ ಸರ್ಕಾರ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.
ಮುಂದುವರೆದು ಮಾತನಾ ಡುತ್ತಾ ತಾವು ಸಹ ಸತ್ಯಸಾಯಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಯಾಗಿದ್ದು, ನಾನು ಒಬ್ಬ ಸಾಮಾನ್ಯ ಬಡ ಕುಟುಂಬದಿಂದ ಅದರಲ್ಲಿಯೂ ಇದೇ ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕು, ಮಿಡಿಗೇಶಿ ಗ್ರಾಮದಲ್ಲಿ ಹುಟ್ಟಿ ಪ್ರಾಥಮಿಕ ವ್ಯಾಸಂಗ ಇಲ್ಲೇ ಮಾಡಿ, ತದನಂತರ ಶ್ರೀ ಸತ್ಯಸಾಯಿ ವಿದ್ಯಾಸಂಸ್ಥೆಯಲ್ಲಿ ಉನ್ನತ ವ್ಯಾಸಂಗ ಮಾಡಿದ್ದೇನೆ, ನಾನು ಈ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿರುವುದಕ್ಕೆ ಅತ್ಯಂತ ಹೆಮ್ಮೆಯಿದೆ ಏಕೆಂದರೆ ಈ ಸಂಸ್ಥೆಯಲ್ಲಿ ಶಿಕ್ಷಣದೊಂದಿಗೆ, ಜೀವನದ ಮೌಲ್ಯಗಳು, ಸಾಮಾಜಿಕ ಜೀವನದಲ್ಲಿ ನಡೆದುಕೊಳ್ಳುವ ಮಾರ್ಗ ಸೇರಿದಂತೆ ಧಾರ್ಮಿಕ ವಿಚಾರಗಳನ್ನು ನಮ್ಮಲ್ಲಿ ಕಾರ್ಯಗತವಾಗಿರುವಂತೆ ರೂಪಿಸುತ್ತಾರೆ. ಅದರಂತೆ ನಾನು ಸಹ ಕರ್ನಾಟಕ ಸರ್ಕಾರದ ಕೌಶಲ್ಯ ಅಭಿವೃದ್ಧಿ ಸಂಸ್ಥೆಯ ಅಧ್ಯಕನಾಗಿ ಕೆಲಸ ಮಾಡಿ ಸಹಸ್ರಾರು ಯುವಕ-ಯುವತಿಯರಿಗೆ ಕೌಶಲ್ಯ ತರಬೇತಿ ಕಲ್ಪಿಸಿಕೊಡುವುದರೊಂದಿಗೆ ಸ್ವಾಲಂಭಿಗಳಾಗಿ ಜೀವನ ನಡೆಸಲು ಅನುವಾಗಿದ್ದೇನೆಂಬ ತೃಪ್ತಿ ನನ್ನಲ್ಲಿದೆ ನಾನಷ್ಟೇ ಅಲ್ಲದೇ ಈ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ ಹಲವಾರು ಜನರು ಐ.ಎ.ಎಸ್., ಐ.ಪಿ.ಎಸ್. ಅಧಿಕಾರಿಗಳಾಗಿ ಜನಪರ ಸೇವೆ ಸಲ್ಲಿಸುತ್ತಿದ್ದಾರಲ್ಲದೇ, ರಾಜಕೀಯ ಕ್ಷೇತ್ರದಲ್ಲಿಯೂ ನನ್ನನ್ನೊಳಗೊಂಡು ಇನ್ನೂ ಹಲವಾರು ಜನರು ಶಾಸಕರು, ಸಚಿವರು ಹಾಗೂ ಕೆಲವು ನಿಗಮ ಮಂಡಳಿಗಳಲ್ಲಿ ಸೇವೆ ಸಲ್ಲಿಸುತ್ತಾ ತಮ್ಮ ಸೇವೆಯನ್ನು ಜನರ ಅನುಕೂಲತೆಗಳಿಗಾಗಿ ಮೀಸಲಿಟ್ಟಿದ್ದಾರೆ ಎಂದರು.
ಮುಂದುವರೆದು ತಾವು ಪ್ರಸ್ತುತ ಇದೇ ತುಮಕೂರಿನ ಜಯನಗರದಲ್ಲಿ ತಮ್ಮ ಕಛೇರಿ ಮತ್ತು ನಿವಾಸವಿದ್ದು, ನನ್ನಿಂದ ತಮಗೆ ಯಾವುದೇ ರೀತಿಯಲ್ಲಿ ಶಿಕ್ಷಣ, ಆರೋಗ್ಯ, ಅಭಿವೃದ್ಧಿ ಹಾಗೂ ಇನ್ನಿತರೆ ಕೆಲಸ ಕಾರ್ಯಗಳಿಗೆ ತಮ್ಮ ಮನೆಯ ಬಾಗಿಲು ಸದಾ ತೆರೆದಿರುತ್ತದೆ, ತಾವು ನನ್ನನ್ನು ಭೇಟಿಯಾಗಬಹುದು ಎಂದು ಹೇಳಿದರಲ್ಲದೇ, ತಮ್ಮ ಸಮಸ್ಯೆಗಳಿಗೆ ತನ್ನ ಶಕ್ತಿ ಮೀರಿ ತಮ್ಮ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಶ್ರಮವಹಿಸಿ ತಮಗಾಗಿ ಸೇವೆಯನ್ನು ಸಲ್ಲಿಸಲು ಸದಾ ಸಿದ್ಧನಿದ್ದೇನೆ ಎಂದು ಹೇಳಿದರು.
ಇನ್ನು ಇದೇ ಸಂದರ್ಭದಲ್ಲಿ ಸಾಯಿಬಾಬಾ ರವರ ಜನ್ಮವರ್ಧಂತಿಯ ಶುಭದಿನ ಇಂದು ಈ ಪವಿತ್ರ ಸನ್ನಿಧಾನ ದಲ್ಲಿ ತಮ್ಮಗಳನ್ನು ಭೇಟಿ ಮಾಡಿ ವಿಚಾರ ವಿನಿಮಯ ಮಾಡಿಕೊಳ್ಳಲು ಬಾಬಾ ಪ್ರೇರಣೆಯೇ ಎಂದು ತಮ್ಮ ಭಾವನಾತ್ಮಕ ವಿಷಯವನ್ನು ಹೊರಹಾಕಿದರು, ನಂತರ ಸ್ವತಃ ತಾವೇ ಸಾಯಿಬಾಬಾರವರಿಗೆ ಆರತಿ ನೆರವೇರಿದರು, ಈ ಸಂದರ್ಭದಲ್ಲಿ ಭಕ್ತವೃ ಂದದವರು ಮುರಳೀಧರ ಹಾಲಪ್ಪರವರಿಗೆ ಬಾಬಾ ಭಾವಚಿತ್ರ ನೀಡಿ ಸನ್ಮಾನಿಸಿದರು.