ತುಮಕೂರು : ಜನಸೇವೆ ಮಾಡಲು ಜನರಿಂದ ಚುನಾಯಿತರಾದ ಗ್ರಾಮಪಂಚಾಯ್ತಿ ಸದಸ್ಯರು ಜನಸೇವೆ ಮಾಡುವ ಬದಲು ಇಸ್ಪೀಟ್ ಆಡಿಸಲು ಹೋಗಿ ಪೊಲೀಸರ ಅತಿಥಿಯಾಗಿದ್ದಾರೆ.
ತುಮಕೂರು ತಾಲ್ಲೂಕು ಕೋರ ಹೋಬಳಿ ಓಬಳಾಪುರ ಗ್ರಾಮ ಪಂಚಾಯತಿ ಸದಸ್ಯರಾಗಿರುವ ವಿ.ಡಿ.ರಾಜಣ್ಣ, ಕುಮಾರ್ ಬಂಧನಕ್ಕೆ ಒಳಗಾಗಿರುವ ಗ್ರಾ.ಪಂ.ಸದಸ್ಯರು. ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ವಿ ಡಿ ರಾಜಣ್ಣ ವಿಧಾನಸಭೆ ಚುನಾವಣೆ ವೇಳೆ ಜೆಡಿಎಸ್ ಪಕ್ಷ ತೊರೆದು ಹಾಲಿ ಗೃಹಸಚಿವರಾದ ಡಾ.ಜಿ.ಪರಮೇಶ್ವರ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದರು.
ತಡರಾತ್ರಿ ಚಿಕ್ಕಕೊಡತಕಲ್ಲು ಗ್ರಾಮದಲ್ಲಿ ಇಸ್ಪೀಟ್ ಆಡುತ್ತಿದ್ದವರ ಮೇಲೆ ಪಿಎಸ್ಐ ಮೋಹನ್ ಕುಮಾರ್ ಅವರ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿನಿಧಿಸುವ ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿಯೇ ಗ್ರಾ.ಪಂ.ಸದಸ್ಯರು ಈ ರೀತಿ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿರುವುದು ಸಾರ್ವಜನಿಕರ ಟೀಕೆಗೆ ಕಾರಣವಾಗಿದೆ.