ತುಮಕೂರು : ಬೆಳಗುಂಬ ಪಂಚಾಯಿತಿ ವ್ಯಾಪ್ತಿಯಲ್ಲಿ 2013-14ನೇ ಸಾಲಿನ ಎಸ್.ಸಿ.ಪಿ / ಟಿ.ಎಸ್.ಪಿ. ಯೋಜನೆಯಡಿಯಲ್ಲಿ ಅಂದಾಜು 95 ಲಕ್ಷ ರೂಪಾಯಿಗಳಲ್ಲಿ ನಿರ್ಮಾಣವಾಗಿರುವ ಈ ವಿದ್ಯಾರ್ಥಿ ನಿಲಯವು ವರ್ಷಗಳು ಕಳೆದರೂ ಇದಕ್ಕೆ ಉದ್ಘಾಟನೆ ಭಾಗ್ಯ ಸಿಗದೇ ಪಾಳು ಬೀಳುವಂತಹ ಸ್ಥಿತಿಗೆ ತಲುಪಿದೆ.
ಇದು ತುಮಕೂರು ತಾಲ್ಲೂಕಿನ ಬೆಳಗುಂಬ ಗ್ರಾಮದ ಸಿದ್ಧರಾಮೇಶ್ವರ ಬಡಾವಣೆಯಲ್ಲಿ ನಿರ್ಮಾಣಗೊಂಡ ಸುಸಜ್ಜಿತ ವಿದ್ಯಾರ್ಥಿ ನಿಲಯ. ಈ ಕಟ್ಟಡ ನಿರ್ಮಾಣವಾಗಿ ವರ್ಷಗಳೇ ಕಳೆದು ಹೋಗಿವೆ. ಆದ್ರೆ, ಯಾವ ಉದ್ದೇಶಕ್ಕೆ ಕಟ್ಟಲಾಗಿತ್ತೋ ಆ ಉದ್ದೇಶ ಈಡೇರದೆ ಇರುವುದು ಭ್ರಷ್ಟ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಂತೆ ಗೋಚರಿಸ್ತಿದೆ.
ಕಟ್ಟಡ ಕಾಮಗಾರಿಯ ಉದ್ದೇಶ ಈಡೇರಿದ್ದರೆ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ನಿಲಯದಲ್ಲಿ ಇದ್ದು ವ್ಯಾಸಂಗ ಮಾಡಬಹುದಾಗಿತ್ತು. ಆದರೆ ಉದ್ಘಾಟನೆಯಾಗದೇ ಪಾಳು ಬೀಳುವ ಸ್ಥಿತಿಗೆ ತಲುಪಿದೆ. ಕಟ್ಟಡದ ಸುತ್ತ ಪೊದೆಯಂತೆ ಬೆಳೆದಿರುವ ಗಿಡ-ಗಂಟೆಗಳು ಕಟ್ಟಡವನ್ನೇ ನುಂಗಿ ಹಾಕುವಂತೆ ಬೆಳೆಯುತ್ತಿವೆ. ಕಟ್ಟಡದ ಉದ್ಘಾಟನೆಯ ಮಾತಿರಲಿ. ಹಾಳೆತ್ತರಕ್ಕೆ ಬೆಳೆದು ನಿಂತಂತಹ ಪೊದೆಗಳನ್ನ ತೆಗೆದು ಸ್ವಚ್ಚಗೊಳಿಸುವ ಗೋಜಿಗೂ ಹೋಗ್ತಿಲ್ಲ ಸಂಬಂಧಪಟ್ಟ ಅಧಿಕಾರಿಗಳು.
ಜನಪ್ರತಿನಿಧಿಗಳಿಗೆ ಕಟ್ಟಡ ಕಟ್ಟಿಸುವಾಗ ಇರುವ ಕಾಳಜಿ ಲೋಕಾರ್ಪಣೆಗೊಳಿಸಿ ಸಾರ್ವಜನಿಕ ಉಪಯೋಗಕ್ಕೆ ತರುವ ಆಸಕ್ತಿ ಏಕಿಲ್ಲ ಎಂಬುದೇ ದೊಡ್ಡ ಯಕ್ಷ ಪ್ರಶ್ನೆಯಾಗಿದೆ. ಇವರಿಗೆ ಕಟ್ಟಡ ಕಟ್ಟಿಸುವಾಗ ಇರವ ಕಾಳಜಿ, ಕಾಮಗಾರಿ ಪೂರ್ಣಗೊಂಡ ನಂತರ ಏಕೆ ಕಾಳಜಿ ಬರುತ್ತಿಲ್ಲ ಇದಕ್ಕೆ ಉತ್ತರವೂ ಪ್ರಶ್ನೆಯಲ್ಲಿಯೇ, ಏನಪ್ಪಾ ಅಂತೀರಾ ಕಟ್ಟಡ ಕಟ್ಟಲು ಗುತ್ತಿಗೆ ನೀಡಿದರೆ ಗುತ್ತಿಗೆದಾರನಿಂದ ಅಮೇಥ್ಯ ಸ್ವೀಕರಿಸಬಹುದು, ಕಟ್ಟಡ ಪೂರ್ಣಗೊಂಡ ಮೇಲೆ ಏನೂ ಸಿಗುವುದಿಲ್ಲವೆಂಬ ಕಾರಣಕ್ಕೆ ಇದು ಲೋಕಾಪರ್ಣೆಯಾಗಿಲ್ಲವೇ? ಎಂಬುದು ಸ್ಥಳೀಕರ ಆಕ್ರೋಶ.
ಇನ್ನು, ಕಟ್ಟಡ ಕಟ್ಟಿ ವರ್ಷಗಳು ಕಳೆದರೂ ಈ ಕಟ್ಟಡವನ್ನು ನಿರುಪಯುಕ್ತವಾಗುತ್ತಿದ್ದು ಅಧಿಕಾರಿಗಳ ನಿರ್ಲಕ್ಷ್ಯ ಮನಸ್ಥಿತಿಯಿಂದ ಮದ್ಯ ವ್ಯಸನಿಗಳು ಮತ್ತು ಅನೈತಿಕ ಚಟುವಟಿಕೆಗಳ ತಾಣವಾಗಿ ಪರಿವರ್ತನೆ ಆಗುತ್ತಿದೆ ಜೊತೆಗೆ ಇಲ್ಲಿ ಬೆಳೆದಿರುವ ಪೊದೆಗಳು ವಿಷಜಂತುಗಳ ಆವಾಸ ಸ್ಥಾನವಾಗಿದೆ. ಇದನ್ನು ಹೀಗೆ ಬಿಟ್ಟರೇ ಇಲ್ಲಿ ಇನ್ನು ಏನೇನು ಆಗುತ್ತದೋ ಎಂಬುದು ಸ್ಥಳೀಯರ ಆಕ್ರೋಷವಾಗಿದೆ.
ಇನ್ನು ಕೆಲವರು ಕಷ್ಟ ಪಟ್ಟು ದುಡಿದು ಸರ್ಕಾರಕ್ಕೆ ಕಟ್ಟುತ್ತಿರುವ ಟ್ಯಾಕ್ಸ್ ಹಣವೂ ಈ ರೀತಿಯಾಗಿ ನಿಷ್ಕ್ರಯೋಜಕವಾಗುತ್ತಿದೆಂಬುದು ಕೆಲ ಸ್ಥಳೀಯ ಉದ್ಯಮಿಗಳು ಮತ್ತು ವರ್ತಕರ ಆಕ್ರೋಷವಾಗಿದೆ. ಈ ಕಟ್ಟಡ ಉದ್ಘಾಟನೆಯಾಗದೇ ಪಾಳು ಬಿದ್ದರೆ ಅದರ ದುರಸ್ಥಿಗೆ ಮತ್ತಷ್ಟು ಹಣ ಪೋಲಾಗುತ್ತದೆ ಆ ಹಣವೂ ಸಹ ಸಾರ್ವಜನಿಕರ ಹಣವಾಗಿರುತ್ತದೆ ಇದನ್ನು ಮೊದಲು ತಡೆ ಹಿಡಿದು ಉದ್ಘಾಟನೆ ಮಾಡಿ ವಿದ್ಯಾಭ್ಯಾಸ ಮಾಡುವ ನೂರಾರು ವಿದ್ಯಾರ್ಥಿಗಳಿಗೆ ಆಸರೆಯಾಗುವ ಗೂಡಾಗಲಿ ಎಂಬುದು ನಾಗರೀಕರ ಆಶಯ.
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತು ಗಮನಹರಿಸಿ ಇದರ ಕಾರ್ಯಕಲ್ಪಕ್ಕೆ ಮುಂದಾಗುತ್ತಾರಾ, ಕಾದು ನೋಡಬೇಕಿದೆ.