ಗೂಳೂರು ಗ್ರಾಮ ಪಂಚಾಯಿತಿಯನ್ನು ಜೆಡಿಎಸ್ ತೆಕ್ಕೆಗೆ ಸೆಳೆಯುವಲ್ಲಿ ಯಶಸ್ವಿಯಾದ ಜಿ.ಪಾಲನೇತ್ರಯ್ಯ

ಕಳೆದ ಹಲವಾರು ವರ್ಷಗಳಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಹಿಡಿತದಲ್ಲಿದ್ದ ಗೂಳೂರು ಗ್ರಾಮ ಪಂಚಾಯಿತಿಯನ್ನು ಜೆಡಿಎಸ್ ಪಕ್ಷದ ಗೂಳೂರು ಜಿಲ್ಲಾ ಪಂಚಾಯಿತಿ ಉಸ್ತುವಾರಿ ಜಿ.ಪಾಲನೇತ್ರಯ್ಯರವರು ತಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಅಧ್ಯಕ್ಷರಾಗಿ ರೇಣುಕಮ್ಮ, ಉಪಾಧ್ಯಕ್ಷರಾಗಿ ನವೀನ್ ಗೌಡ್ರು ಆಯ್ಕೆಯಾಗಿದ್ದು ಇಬ್ಬರೂ ಸಹ ಜೆಡಿಎಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳಾಗಿದ್ದಾರೆ. ಚುನಾವಣೆಯ ಬಳಿಕ ಪಂಚಾಯಿತಿ ಕಚೇರಿಯ ಮುಂಭಾಗದಲ್ಲಿ ನೂತನ ಅಭ್ಯರ್ಥಿಗಳಿಗೆ ಅಭಿನಂದನೆಯನ್ನು ಸಲ್ಲಿಸಿ ಮಾತನಾಡಿದ ಜಿ.ಪಾಲನೇತ್ರಯ್ಯರವರು ಈ ಭಾಗದಲ್ಲಿ ನಮ್ಮ ಪಕ್ಷದ ವತಿಯಿಂದ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ನೆರವೇರಿಸಿದ್ದೇವೆ, ಜೊತೆಗೆ ಈ ಭಾರಿ ನಮ್ಮ ಡಿ.ಸಿ.ಗೌರಿಶಂಕರ್‌ರವರು ಸೋತಿರಬಹುದು ಆದರೆ ಅವರು ಮಾಡಿರುವ ಜನಪರ ಕಾರ್ಯಗಳು ಇನ್ನು ಜನರ ಮನದಲ್ಲಿ ಉಳಿದಿವೆ ಅದರ ಫಲವಾಗಿಯೇ ನಾವು ಇಂದು ಗೂಳೂರು ಗ್ರಾಮ ಪಂಚಾಯಿತಿಯನ್ನು ಜೆಡಿಎಸ್ ತೆಕ್ಕೆಗೆ ತೆಗೆದುಕೊಂಡಿದ್ದೇವೆಂದರು. ಇನ್ನು ಈ ಪಂಚಾಯಿತಿ ವ್ಯಾಪ್ತಿಯಲ್ಲಿ ನೂತನವಾಗಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಾಗಿರುವವರಿಗೆ ನಾನು ಹೇಳುವ ಕಿವಿ ಮಾತು ಎಂದರೆ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಜನರ ಕಷ್ಟ, ನಷ್ಟಗಳಿಗೆ ಸ್ಪಂದಿಸಿ, ಅವರಿಗೆ ನೆರವಾಗಿ ನಿಂತು ಪಂಚಾಯಿತಿಯನ್ನು ಮತ್ತಷ್ಟು ಅಭಿವೃದ್ಧಿ ಪಥದ ಕಡೆಗೆ ತೆಗೆದುಕೊಂಡು ಹೋಗಿ ಎಂದಷ್ಟೇ ಹೇಳುತ್ತೇನೆಂದರು. ಈ ಸಂದರ್ಭದಲ್ಲಿ ಮುಖಂಡರುಗಳಾದ ಕೃಷ್ಣೇಗೌಡರು, ಮೋಹನ್ ಸೇರಿದಂತೆ ನೂತನ ಸದಸ್ಯರುಗಳು ಭಾಗಿಯಾಗಿದ್ದರು.

 

 

Leave a Reply

Your email address will not be published. Required fields are marked *

error: Content is protected !!