ತುಮಕೂರು : ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಕೃಷ್ಣಪ್ಪರವರು ದಿಢೀರ್ ಎಂದು ಮಂಗಳವಾರ ರಾತ್ರಿ ಚಿಕ್ಕನಾಯಕನಹಳ್ಳಿಯಲ್ಲಿರುವ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ವಾಸ್ತವ್ಯ ಹೂಡಿ ಮಾದರಿ ಅಧಿಕಾರಿಯಾಗಿದ್ದಾರೆ.
ವಿದ್ಯಾರ್ಥಿಗಳ ಜೊತೆಯಲ್ಲಿ ತಾನೂ ಸಹ ಒಬ್ಬ ವಿದ್ಯಾರ್ಥಿಯಂತೆ, ವಿದ್ಯಾರ್ಥಿಗಳ ಸಮಸ್ಯೆಯನ್ನು ಆಲಿಸಿದಲ್ಲದೇ, ಹಾಸ್ಟಲ್ನಲ್ಲಿ ಮೂಲಭೂತ ಸೌಕರ್ಯ, ಸ್ವಚ್ಛತೆ, ಊಟೋಪಚಾರ ಹಾಗೂ ಇನ್ನಿತರೆ ವ್ಯಾಸಂಗೇತರ ಚರ್ಚೆಗಳನ್ನು ಮಾಡಿ, ಉಭಯ ಕುಶಲೋಪರಿ ವಿಚಾರಿಸಿ, ಕೆಲವು ಸಲಹೆ, ಸೂಚನೆ, ಮಾರ್ಗದರ್ಶನವನ್ನು ವಿದ್ಯಾರ್ಥಿಗಳಿಗೆ ಸ್ನೇಹ ರೂಪದಲ್ಲಿ ಮಾಡಿ, ತಾನೂ ಸಹ ತಮ್ಮಲ್ಲಿ ಒಬ್ಬವ ಎಂದು ಬಿಂಬಿಸುವಂತೆ ಮಾಡಿದರಲ್ಲದೇ, ವಿದ್ಯಾರ್ಥಿಗಳು ತಮ್ಮ ತಮ್ಮ ಕೋಣೆಗಳನ್ನು ತಾವೇ ಸ್ವಚ್ಛವಾಗಿಟ್ಟುಕೊಳ್ಳುವುದು, ಬಾಲ್ಕನಿ, ಶೌಚಾಲಯ, ಅಡುಗೆ ಕೋಣೆ ಇನ್ನಿತರೆ ಹಾಸ್ಟಲ್ ಜಾಗಗಳನ್ನು ತಮ್ಮ ಸ್ವಂತ ಸ್ಥಳವನ್ನಾಗಿ ಪರಿವರ್ತನೆ ಮಾಡಿಕೊಂಡು ತಮ್ಮ ಹಾಸ್ಟಲ್ ತಮ್ಮ ಕೈಯಲ್ಲಿಯೇ ಇದೆ ಎಂಬುದರ ಕುರಿತು ಜಾಗೃತಿ ಮೂಡಿಸುವಂತೆ ಮಾಡಿದರು.
ಸರ್ಕಾರದಿಂದ ಬರುವ ಎಲ್ಲಾ ಸೌಲಭ್ಯ, ಸೌಕರ್ಯಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವಂತೆಯೂ ಯಾವುದೇ ವಿದ್ಯಾರ್ಥಿಗಳು ಅನೈತಿಕ ಚಟುವಟಿಕೆ, ಕಾನೂನು ಬಾಹಿರ ಕೃತ್ಯ ಒಳಗಾಗದಂತೆ ಹಾಗೂ ಸಮಯಪಾಲನೆಯನ್ನು ಶಿಸ್ತುಬದ್ಧವಾಗಿ ಮಾಡುವಂತೆ ಕಿವಿಮಾತು ಹೇಳಿದರು. ನೀವುಗಳು ಉತ್ತಮ ವ್ಯಾಸಂಗ ಮಾಡಿ ತಮ್ಮ ತಮ್ಮ ಪೋಷಕರಿಗೆ ಉತ್ತಮ ಮಕ್ಕಳಾಗಿ ಪರಿವರ್ತನೆಯಾಗುವುದಲ್ಲದೇ, ಸಮಾಜದಲ್ಲಿ ಉತ್ತಮ ಸ್ಥಾನಮಾನಗಳನ್ನು ಪಡೆದು, ಮುಂಬರುವ ಪೀಳಿಗೆಗೆ ತಾವುಗಳು ಮಾದರಿಯಾಗಬೇಕೆಂದು ಹೇಳಿದರು.
ಇನ್ನು ಹಾಸ್ಟಲ್ಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೂ ಸಹ ಸ್ವಚ್ಛತೆ, ಶಿಸ್ತುಪಾಲನೆ, ಕ್ರಮಬದ್ಧ ನಿರ್ವಹಣೆ ಹಾಗೂ ಹಾಸ್ಟಲ್ನಲ್ಲಿ ಯಾವುದೇ ರೀತಿಯಾದ ಕುಂದುಕೊರತೆ ಉಂಟಾಗದಂತೆ, ವಿದ್ಯಾರ್ಥಿಗಳೊಂದಿಗೆ ಸೌಜನ್ಯದಿಂದ ವರ್ತಿಸುವಂತೆಯೂ ಹಾಗೂ ಏನಾದರೂ ಅಗತ್ಯತೆವಿದ್ದಲ್ಲಿ ಕೂಡಲೇ ತಮ್ಮ ಇಲಾಖೆಯನ್ನು ಸಂಪರ್ಕಿಸಿ ಸೌಲಭ್ಯಗಳನ್ನು ಪಡೆಯಬೇಕೆಂದು ತಿಳಿಸಿದರು.
ಅಲ್ಲದೇ ಮಂಗಳವಾರ ರಾತ್ರಿ ಅದೇ ಹಾಸ್ಟಲ್ನಲ್ಲಿ ವಾಸ್ತವ್ಯವನ್ನೂ ಹೂಡಿ ಮಕ್ಕಳಂತೆಯೇ ಮಲಗಿ ಮಾದರಿ ಅಧಿಕಾರಿಯಾದರು.