ತುಮಕೂರು : ವಿಧಾನಸಭೆಯ ಚುನಾವಣೆಯ ಹಿನ್ನಲೆಯಲ್ಲಿ ದಿನಾಂಕ 20-04-2023ರಂದು ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಿಂದ ಡಿ.ಸಿ.ಗೌರಿಶಂಕರ್ ಹಾಗೂ ತುಮಕೂರು ನಗರ ವಿಧಾನಸಭಾ ಕ್ಷೇತ್ರದಿಂದ ಎನ್.ಗೋವಿಂದರಾಜು ಇವರುಗಳು ಅಭ್ಯರ್ಥಿಗಳಾಗಿ ನಾಮಪತ್ರಗಳನ್ನು ಪ್ರತ್ಯೇಕವಾಗಿ ಸಲ್ಲಿಸುತ್ತಿದ್ದಾರೆ.
ಇನ್ನು ಕಳೆದ ಚುನಾವಣೆಯಲ್ಲಿ ಡಿ.ಸಿ.ಗೌರಿಶಂಕರ್ ರವರು ನಕಲಿ ಬಾಂಡ್ ಹಂಚಿಕೆ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ್ದ ಸುರೇಶ್ ಗೌಡರವರು ಹೈಕೋರ್ಟ್ ಮೆಟ್ಟಿಲಿರೇದ್ದರು, ಅದರಂತೆ ಹೈಕೋರ್ಟ್ ಸಹ ಮಾರ್ಚ್ 30 ರಂದು ಮಹತ್ತರವಾದ ತೀರ್ಪನ್ನು ನೀಡಲಾಗಿತ್ತು, ಅದನ್ನು ಪ್ರಶ್ನಿಸಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಡಿ.ಸಿ.ಗೌರಿಶಂಕರ್ ರವರು ಸುಪ್ರೀಂ ಕೋರ್ಟ್ ಗೆ ಅಪೀಲ್ ಸಲ್ಲಿಸಿದ್ದರು.
ಇಷ್ಟು ದಿನ ಕಾರ್ಯಕರ್ತರಲ್ಲಿ ಬಹಳಷ್ಟು ಗೊಂದಲಗಳಿದ್ದವು, ಡಿ.ಸಿ.ಗೌರಿಶಂಕರ್ ರವರು ಈ ಭಾರಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೋ ಇಲ್ಲವೋ ಎಂಬ ಹಲವಾರು ಸಂಶಯಗಳು ಮೂಡಿದ್ದವು, ಕಳೆದ ಸೋಮವಾರ 17-04-2023ರಂದು ಸುಪ್ರೀಂ ಕೋರ್ಟ್ ಗೌರಿಶಂಕರ್ ರವರು ಚುನಾವಣೆಯಲ್ಲಿ ಸ್ಪರ್ಧಿಸಲು ಯಾವುದೇ ರೀತಿಯಾದ ಅಡ್ಡಿಯಿಲ್ಲ, ಅವರು ಸಲ್ಲಿಸಿರುವ ಅಪೀಲ್ನ್ನು ಪುರಸ್ಕರಿಸಿ ಮುಂಬರುವ ಜುಲೈ ತಿಂಗಳ 17 ನೇ ತಾರೀಖಿಗೆ ಕೇಸ್ನ್ನು ಮುಂದೂಡಲಾಗಿದೆ ಎಂದು ಹೇಳಿರುವ ಹಿನ್ನಲೆಯಲ್ಲಿ ಗೌರಿಶಂಕರ್ ರವರು ನಾಮಪತ್ರವನ್ನು ಸಲ್ಲಿಸುತ್ತಿದ್ದಾರೆ.
ಮುಂದುವರೆದು ತುಮಕೂರು ನಗರ ಜೆಡಿಎಸ್ ಅಭ್ಯರ್ಥಿಯಾಗಿರುವ ಎನ್.ಗೋವಿಂದರಾಜು ಅವರ ಸ್ಪರ್ಧೆಯಲ್ಲಿಯೂ ಸಹ ಹಲವಾರು ಗೊಂದಲಗಳಿದ್ದವು, ಏಕೆಂದರೆ ಬಹುಕೋಟಿಗಳ ಸರದಾರನಾಗಿದ್ದ ಅಟ್ಟಿಕಾ ಬಾಬು @ ಬೊಮ್ಮನಹಳ್ಳಿ ಬಾಬು ನಾನೇ ಜೆಡಿಎಸ್ ಅಭ್ಯರ್ಥಿ ಎಂದು ಹೇಳಿಕೊಂಡು ತುಮಕೂರಿನಲ್ಲಿ ವ್ಯಾಪಕ ಪ್ರಚಾರವನ್ನು ಪಡೆದಿದ್ದರು, ತದನಂತರದ ದಿನಗಳಲ್ಲಿ ಅವರು ಕಾಂಗ್ರೆಸ್ ಕದ ತಟ್ಟಿದ್ದರು ಆದರೆ ಅವರಿಗೆ ಎಲ್ಲಿಯೂ ಟಿಕೇಟ್ ಸಿಗಲಿಲ್ಲ, ನಂತರ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದ ಸೊಗಡು ಶಿವಣ್ಣರವರು ಸಹ ಎಲ್ಲೋ ಒಂದೆರಡು ಕಡೆ ನಾನು ಜೆಡಿಎಸ್ ನಿಂದ ಸ್ಪರ್ಧಿಸಲು ಅಪೇಕ್ಷಿಸಿದ್ದೇನೆ, ಈ ಕುರಿತು ಮಾತುಕತೆ ಸಹ ಆಗಿದೆ ಎಂದು ಹೇಳಿಕೊಂಡಿದ್ದರೂ, ಆದರೆ ಅದು ಯಾವುದೂ ನಡೆಯದೇ ಇದೀಗ ಗೋವಿಂದರಾಜು ರವರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತಿದ್ದಾರೆ.
ಗ್ರಾಮಾಂತರ ಹಾಗೂ ನಗರ ಕ್ಷೇತ್ರಗಳ ಅಭ್ಯರ್ಥಿಗಳ ಗೊಂದಲಕ್ಕೆ ತೆರೆ ಬಿದಿದ್ದು ದಿನಾಂಕ 20-04-2023ರಂದು ಇಬ್ಬರೂ ಸಹ ನಾಮಪತ್ರಗಳನ್ನು ಸಲ್ಲಿಸಲಿದ್ದಾರೆ ಆದರೆ ಸಾಂಕೇತಿಕವಾಗಿ ಈಗಾಗಲೇ ಗೋವಿಂದರಾಜುರವರು ನಾಮಪತ್ರವನ್ನು ಸಲ್ಲಿಸಿದ್ದಾರೆ. ಇನ್ನುಳಿದಂತೆ ಜೆಡಿಎಸ್ ಪಕ್ಷದಿಂದ ತುಮಕೂರು ನಗರದಲ್ಲಿ ನಾಳೆ ಬೃಹತ್ ರಾಲಿಯನ್ನು ಹಮ್ಮಿಕೊಂಡಿದ್ದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಆಗಮಿಸುವ ನಿರೀಕ್ಷೆ ಇದೆ ಎಂದು ಜೆಡಿಎಸ್ ಕಾರ್ಯಕರ್ತರು ಹೇಳಿಕೊಂಡಿದ್ದಾರೆ.
ಒಟ್ಟಾರೆಯಾಗಿ ತುಮಕೂರು ನಗರ ಜೆಡಿಎಸ್ ಅಭ್ಯರ್ಥಿಯಾಗಿ ಎನ್.ಗೋವಿಂದರಾಜು ಹಾಗೂ ಗ್ರಾಮಾಂತರ ಜೆಡಿಎಸ್ ಅಭ್ಯರ್ಥಿಯಾಗಿ ಡಿ.ಸಿ.ಗೌರಿಶಂಕರ್ರವರುಗಳು ತಮ್ಮ ಶಕ್ತಿಪ್ರದರ್ಶನವನ್ನು ನಾಳೆ ಮಾಡಲಿದ್ದಾರೆ.