ತುಮಕೂರು : 2023ರ ವಿಧಾನಸಭಾ ಚುನಾವಣೆಯ ತುಮಕೂರು ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾನೇ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಹಿರಿಯ ಮುಖಂಡ ಸೊಗಡು ಶಿವಣ್ಣ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಾನು 1975ರಿಂದ ಬಿಜೆಪಿ ಪಕ್ಷ ಕಟ್ಟಿಕೊಂಡು ಬಂದವನು, ನಾಲ್ಕು ಬಾರಿ ಗೆದ್ದು ಶಾಸಕನಾಗಿ ಸಚಿವನಾಗಿ ಕೆಲಸ ಮಾಡಿದ್ದೇನೆ, ನಾನು ಮಾಡಿದ ಅಭಿವೃದ್ಧಿ ಕೆಲಸಗಳೇ ನನಗೆ ಶ್ರೀರಕ್ಷೆ, ಪಕ್ಷದ ನಾಯಕರು, ತುಮಕೂರು ಜನತೆ ನನ್ನ ಪರವಾಗಿದ್ದಾರೆ, ಎಲ್ಲವನ್ನೂ ಪಕ್ಷ ಮತ್ತು ಜನತೆಯ ಮುಂದೆ ಇಡುತ್ತೇನೆ ಎಂದರು.
ಈ ಬಾರಿ ಯಾರು ಏನೇ ಹೇಳಿಕೊಂಡರೂ ನಾನು ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಚಿತ, ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಹೇಳಿದ ಶಿವಣ್ಣನವರು, ನನ್ನ ಅಭಿಮಾನಿಗಳು, ಹಿತೈಶಿಗಳೇ ನನ್ನನ್ನು ಚುನಾವಣೆಗೆ ನಿಲ್ಲುವಂತೆ ಒತ್ತಾಯಿಸಿದ್ದು, ಈ ಹಿಂದಿನ ನಾಲ್ಕು ಬಾರಿಯ ಅವಧಿಯಲ್ಲಿನ ಶಾಂತಿ ಮಂತ್ರ ಮತ್ತು ಕಾಯಕ ಮಂತ್ರವೇ ನನಗೆ ಶ್ರೀರಕ್ಷೆ ಎಂದರು.
ಸಧ್ಯದಲ್ಲೇ ತುಮಕೂರು ನಗರದಎನ್.ಆರ್.ಕಾಲೋನಿಯಿಂದ ಜೋಳಿಗೆ ಹಿಡಿದು ಮತ ಭಿಕ್ಷೆಯನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದ ಅವರು, ನನ್ನ ಚುನಾವಣೆಯ ಎಲ್ಲಾ ಖರ್ಚು-ವೆಚ್ಚವನ್ನು ನನ್ನ ಬೆಂಬಲಿಗರೆ ಭರಿಸಲಿದ್ದಾರೆ, ಹಾಗೆಯೇ ಮತವನ್ನು ನೀಡಲಿದ್ದಾರೆ ಎಂದು ಹೇಳಿದರು.
ಚಿಕ್ಕನಾಯಕನಹಳ್ಳಿಯ ಮಾಜಿ ಶಾಸಕ ಕೆ.ಎಸ್.ಕಿರಣ್‍ಕುಮಾರ್ ಕಾಂಗ್ರೆಸ್ ಸೇರ್ಪಡೆಗೊಂಡಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಕೆಲವರು ರಾಜಕೀಯ ಆಸೆ-ಅಕಾಂಕ್ಷೆಗಳನ್ನಿಟ್ಟುಕೊಂಡು ಪಕ್ಷಾಂತರಿಗಳಾಗುತ್ತಾರೆ, ಅವರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ, ನನ್ನದು ಜನಸಂಘದ ರಕ್ತ, ಆದ್ದರಿಂದ ಯಾವ ಆಮಿಷಗಳಿಗೆ ಒಳಗಾಗಿ ಪಕ್ಷಾಂತರ ಮಾಡುವುದಿಲ್ಲ, ನಾನು ಕೊನೆಯವರಿಗೂ ಬಿಜೆಪಿಯಲ್ಲೇ ಇರುತ್ತೇನೆ ಎಂದು ಸ್ಪಷ್ಟಪಡಿಸಿದರು.
ಇನ್ನು ಮಾಜಿ ಸಚಿವ ಸೊಗಡು ಶಿವಣ್ಣ ಹಾಗೂ ಹಾಲಿ ಶಾಸಕ ಜ್ಯೋತಿ ಗಣೇಶ್ ನಡುವೆ ತುಮಕೂರು ನಗರ ವಿಧಾನಸಭಾ ಕ್ಷೇತ್ರಕ್ಕೆ ಟಿಕೆಟ್ ಗಾಗಿ ತೀವ್ರ ಪೈಪೋಟಿ ನಡೆಸುತ್ತಿರುವುದು ಕಂಡುಬಂದಿದ್ದು ಬಿಜೆಪಿ ಪಕ್ಷದ ಹೈ ಕಮಾಂಡ್ ಹಾಗೂ ಹಿರಿಯ ಮುಖಂಡರಿಗೂ ಸಹ ತೀವ್ರ ತಲೆನೋವು ಉಂಟುಮಾಡಿದೆ.
ಕಳೆದ ಎರಡು ದಿನದ ಹಿಂದೆ ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್ ರವರು ಪತ್ರಿಕಾಗೋಷ್ಠಿ ನಡೆಸಿ ಬಿಜೆಪಿ ಪಕ್ಷದಿಂದ ಅಭ್ಯರ್ಥಿ ನಾನೇ ಇದರಲ್ಲಿ ಯಾವುದೇ ಗೊಂದಲ ಬೇಡ ಎಂದು ಹೇಳಿಕೆ ನೀಡಿದ್ದ ಬೆನ್ನಲ್ಲೇ ಇಂದು ಮಾಜಿ ಸಚಿವ ಸೊಗಡು ಶಿವಣ್ಣ ಪತ್ರಿಕಾಗೋಷ್ಠಿ ನಡೆಸಿ ತಾನು ಸಹ ಪಕ್ಷದ ಪ್ರಬಲ ಆಕಾಂಕ್ಷಿಯಾಗಿದ್ದು ಪಕ್ಷದಿಂದ ನನಗೆ ಟಿಕೆಟ್ ಸಿಗುವ ವಿಶ್ವಾಸ ಇದೆ ಎನ್ನುವ ಮೂಲಕ ಹಾಲಿ ಶಾಸಕರಿಗೆ ಟಾಂಗ್ ಕೊಟ್ಟಿದ್ದಾರೆ.
ಅದೇನೇ ಇರಲಿ ಮುಂಬರುವ ಚುನಾವಣೆಗೆ ತುಮಕೂರು ನಗರ ಬಿಜೆಪಿ ಪಕ್ಷದಿಂದ ಮಾಜಿ ಸಚಿವರು ಹಾಗೂ ಹಾಲಿ ಶಾಸಕರ ನಡುವೆ ಟಿಕೆಟ್ಗಾಗಿ ತೀವ್ರ ಪೈಪೋಟಿ ನಡೆಯುತ್ತಿದ್ದು ಪಕ್ಷದ ಹೈಕಮಾಂಡ್ ಯಾರಿಗೆ ಮಣೆ ಹಾಕಲಿದೆ ಎನ್ನುವುದೇ ಯಕ್ಷಪ್ರಶ್ನೆ…?
ಸಾರ್ವಜನಿಕರೊಂದಿಗೆ ನಿಕಟ ಸಂಪರ್ಕ ಸಾಧನೆ.
ಇನ್ನು ಮಾಜಿ ಸಚಿವ ಸೊಗಡು ಶಿವಣ್ಣ ರವರು ಪ್ರತಿನಿತ್ಯ ತುಮಕೂರು ನಗರದ ಹಲವರು ನಾಯಕರು ಸಾರ್ವಜನಿಕರೊಂದಿಗೆ ನಿಕಟ ಸಂಪರ್ಕ ಹೊಂದುತ್ತಾ ಪ್ರತಿನಿತ್ಯ ಸಾರ್ವಜನಿಕರೊಂದಿಗೆ ಸಮಾಲೋಚನೆ ಮಾಡುತ್ತಾ ಮುಂದಿನ ಚುನಾವಣೆಗೆ ಟಿಕೆಟ್ ಸಿಗಲಿದೆ ಹಾಗಾಗಿ ಎಲ್ಲರೂ ನನ್ನನ್ನ ಬೆಂಬಲಿಸಿ ಎನ್ನುವ ಮೂಲಕ ನಗರದಲ್ಲೀ ಪ್ರಚಾರವನ್ನು ಸಹ ಶುರು ಮಾಡಿದ್ದು ಹಾಲಿ ಶಾಸಕ ಜ್ಯೋತಿ ಗಣೇಶ್ ರವರಿಗೂ ಸಹ ತೀವ್ರ ಸಂಕಷ್ಟ ತಂದಿದ್ದು ಹಾಲಿ ಹಾಗೂ ಮಾಜಿ ನಡುವೆ ಟಿಕೆಟ್ಗಾಗಿ ಕಾದಾಟ ಸಿದ್ಧವಾಗಿದ್ದು ಟಿಕೆಟ್ ಯಾರಿಗೆ ಸಿಗಲಿದೆ ಎಂದು ಕಾದು ನೋಡಬೇಕಿದೆ.
ಪತ್ರಿಕಾಗೋಷ್ಠಿಯಲ್ಲಿ ಶಾಂತಕುಮಾರ್, ಜಯಸಿಂಹ, ಜಯಪ್ರಕಾಶ್,ನವೀನ್ ಮುಂತಾದವರಿದ್ದರು.