ವಿಶ್ವ ವಿಖ್ಯಾತ ಭಾರತ ದೇಶದ ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಗುಬ್ಬಿಯ ಹೆಸರಾಂತ ಸುಜ್ಞಾನ ಸಂಸ್ಥೆ ಚಿದಂಬರಾಶ್ರಮ. ಚಿದಂಬರಾಶ್ರiದ ಸಂಸ್ಥಾಪಕರು ನಿಷ್ಕಾಮ ಕರ್ಮಯೋಗಿ ಶ್ರೀ ಶ್ರೀ ಚಿದಂಬರ ಸ್ವಾಮಿಗಳು.
ಇವರ ಗರಡಿಯಲ್ಲಿ ಅರಳಿದ ತ್ಯಾಗಮೂರ್ತಿಗಳೂ, ಸದ್ವಿಚಾರಿಗಳೂ, ಧಾರ್ಮಿಕ ಚಿಂತಕರೂ, ಉತ್ತಮ ವಾಗ್ಮಿಗಳೂ, ಶಿಕ್ಷಕರೂ, ಬಹುಭಾಷಾ ವಿದ್ವಾಂಸರೂ, ಸಂಸ್ಕೃತ – ವೇದ ವಿದ್ವಣ್ಮಣಿಗಳೂ, ಕೃಷಿಕರೂ, ಗೋಸೇವಾ ನಿರತರೂ, ಸಮಾಜ ಸುಧಾರಕರೂ, ಅನೇಕರಿಗೆ ಉದ್ಯೋಗದಾತರೂ, ಯುವ ಪೀಳಿಗೆಗೆ ಆದರ್ಶಪ್ರಾಯರೂ, ಸೇವಾ ಹಿ ಪರಮೋ ಧರ್ಮಃ ಎಂಬ ಧ್ಯೇಯವಾಕ್ಯದಂತೆ ಚಿದಂಬರಾಶ್ರಮದ ವಿಶ್ವಸ್ಥ ಸಮಿತಿಯ ಅಧ್ಯಕ್ಷರಾಗಿದ್ದಂತಹ ಮೇರು ಚೇತನ ನನ್ನ ಗುರುವಾಗಿದ್ದಂತಹ ಪರಮ ಪೂಜ್ಯ ಶ್ರೀ.ಶಿವಚಿದಂಬರ ಶರ್ಮರು.
ಪರಮ ಪೂಜ್ಯರು ಸಹಸ್ರಾರು ವಿದ್ಯಾರ್ಥಿಗಳಿಗೆ ಸಂಸ್ಕೃತ- ವೇದ, ಲಕ್ಷಾಂತರ ವಿದ್ಯಾರ್ಥಿಗಳಿಗೆ ಸಾಮಾನ್ಯ ಶಿಕ್ಷಣ ವನ್ನು ನೀಡಿದ್ದಾರೆ. ಇವರ ಶಿಷ್ಯರನೇಕರು ಐ.ಎ.ಎಸ್, ಐ.ಪಿಎಸ್, ಐ.ಆರ್.ಎಸ್ ಅಧಿಕಾರಿಗಳಾಗಿದ್ದಾರೆ, ಅನೇಕ ವಿದ್ಯಾರ್ಥಿಗಳು ನಮ್ಮ ದೇಶದಲ್ಲಿ ಮತ್ತು ಹೊರ ದೇಶಗಳಲ್ಲಿ ಇಂಜಿನಿಯರ್, ರಾಷ್ಟ್ರ, ರಾಜ್ಯ ಪ್ರಶಸ್ತಿ ವಿಜೇತ ಉತ್ತಮ ಶಿಕ್ಷಕರೂ,ಕೈಗಾರಿಕೋದ್ಯಮಿಗಳೂ, ಸ್ವ-ಉದ್ಯೋಗಿಗಳೂ, ಅನೇಕ ಪ್ರತಿಷ್ಠಿತ ಕಂಪನಿಗಳ ಸಂಸ್ಥಾಪಕರೂ, ಪ್ರಖ್ಯಾತ ಚಲನಚಿತ್ರ ಕಲಾವಿದರೂ, ನಿರ್ಮಾಪಕರೂ, ನಿರ್ದೇಶಕರೂ, ಸಂಗೀತ ವಿದ್ವಾಂಸರೂ, ವೇದ ವಿದ್ವಾಂಸರೂ, ಸಂಸ್ಕೃತ ವಿದ್ವಾಂಸರೂ, ಗಮಕ ವಾಚಕರೂ, ಯೋಗ ಪಟುಗಳೂ, ಲೆಕ್ಕ ಪರಿಶೋಧಕರೂ, ಬ್ಯಾಂಕ್ ಮ್ಯಾನೇಜರ್, ವೈದ್ಯರೂ, ವಕೀಲರೂ, ಪ್ರಖ್ಯಾತ ನಳಪಾಕ ಪ್ರವೀಣರೂ, ಪತ್ರಿಕೋದ್ಯಮಿಗಳೂ, ವಿಜ್ಞಾನಿಗಳೂ ಹಾಗೂ ಕರ್ನಾಟಕ ರಾಜ್ಯದ ಶಾಸಕರೂ, ಮಂತ್ರಿಗಳೂ ಆಗಿದ್ದಾರೆ.
ಗುರುಗಳನ್ನು ಭೇಟಿಯಾದವರಿಗೆಲ್ಲಾ ಕೆಲವೊಂದು ಮಾತನ್ನು ಹೇಳುತ್ತಿದ್ದರು ಅದುವೇ:
೧. ನ ಹಿ ಜ್ಞಾನೇನ ಸದೃಶಮ್
೨. ಪರೋಪಕಾರಾರ್ಥಮ್ ಇದಂ ಶರೀರಮ್
೩. ದುಡಿಮೆಯ ಒಂದಂಶ ಧರ್ಮಕ್ಕಿರಲಿ
೪. ಚಿದಂಬರಾಶ್ರಮಕ್ಕೆ ಬಂದವರಿಗೆಲ್ಲಾ ದತ್ತಾಂಜನೇಯರ, ಚಿದಂಬರ ಸದ್ಗುರುಗಳ ದರ್ಶನ ಮಾಡಿ, ಪ್ರಸಾದ ಸ್ವೀಕರಿಸಿ ಎನ್ನುತ್ತಿದ್ದರು.
ಗುರುಗಳು 07-01-2023 ರಂದು ತಮ್ಮ 94 ವರ್ಷದ ಸುದೀರ್ಘ ಪ್ರಯಾಣವನ್ನು ದತ್ತನ ಚರಣಾರವಿಂದಗಳಲ್ಲಿ ಸಮರ್ಪಿಸಿದರು, ತದನಿಮಿತ್ತ 13-01-2022 ರ ಸಂಜೆ ಗುರು ನಮನ ಕಾರ್ಯಕ್ರಮವನ್ನು ಕೆ.ಆರ್.ಎಸ್. ಸಂಸ್ಕೃತ ಮತ್ತು ವೇದಾಧ್ಯಯನ ಅಕಾಡೆಮಿ,ತುಮಕೂರು ಹಾಗೂ ಜಿ.ಆರ್.ಎಸ್. ಸಂಸ್ಕೃತ ವೇದ ಪಾಠಶಾಲಾ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಕೆ.ಆರ್.ಎಸ್. ಸಂಸ್ಥೆಯ ಶ್ರೀ.ಡಾ.ನರೇಂದ್ರ ಕುಮಾರ್, ಚಿದಂಬರಾಶ್ರಮದ ಹಿತೈಷಿಗಳು, ಗುರು ಬಂಧುಗಳಾದ ಅಳಿಲಘಟ್ಟದ ರಾಜು, ವಿದ್ವಾನ್.ಕಡಬ ಶೇಷಾದ್ರಿ, ವಿದ್ವಾನ್.ಡಾ.ಅನಂತ ಭಟ್, ವಿದ್ವಾನ್.ರಘು, ಶ್ರೀಮತಿ.ಡಾ. ಲಕ್ಷ್ಮೀ, ವಿದ್ಯಾರಂಜಕ ಪತ್ರಿಕೆಯ ಉಪ-ಸಂಪಾದಕರಾದ ಶ್ರೀ.ವಿನಯ್ ಬಾಬು, ಸಿ.ಎಸ್.ಪುರದ ಸತ್ಯನಾರಾಯಣ, ಹಿರಿಯ ವಿದ್ಯಾರ್ಥಿಗಳಾದ ಡಾ.ಸುಧಾಕರ, ಡಾ.ಅನಂತಕೃಷ್ಣ, ಸುಬ್ರಮಣ್ಯ ಮುಂತಾದವರು ಭಕ್ತಿ ಪೂರ್ವಕ ನಮನಗಳನ್ನು ಅರ್ಪಿಸಿದರು.