ಚೀನಾದಲ್ಲಿ ಕೋವಿಡ್ ಮರಣ ಮೃದಂಗವನ್ನೇ ಬಾರಿಸುತ್ತಿದೆ. ಚೀನಾ ರಾಜಧಾನಿ ಬೀಜಿಂಗ್ ಸೇರಿದಂತೆ ದೇಶದೆಲ್ಲೆಡೆ ಬಿಎಫ್.7 ವೈರಾಣು ಆರ್ಭಟಿಸುತ್ತಿದೆ. ಇದೇ ವೈರಾಣು ಇದೀಗ ಭಾರತದಲ್ಲೂ ಪತ್ತೆಯಾಗಿದೆ. ಹಾಗೆ ನೋಡಿದ್ರೆ, ಮೊದಲ ಕೇಸ್ 2 ತಿಂಗಳ ಹಿಂದೆಯೇ ಭಾರತದಲ್ಲಿ ಪತ್ತೆಯಾಗಿತ್ತಾದರೂ, 2ನೇ ಹಾಗೂ 3 ನೇ ಕೇಸ್‌ಗಳು ಇದೀಗ ದೃಢಪಟ್ಟಿವೆ. ಈ ಮೂಲಕ ಭಾರತ ದೇಶ ಕೂಡಾ ಸರ್ವ ಸನ್ನದ್ಧವಾಗಿರಬೇಕು ಎಂಬ ಎಚ್ಚರಿಕೆಯನ್ನು ಕೊರೊನಾ ಮಹಾ ಮಾರಿ ರವಾನಿಸಿದೆ!
ಚೀನಾದಲ್ಲಿ ಸದ್ಯ ಅಬ್ಬರಿಸುತ್ತಿರುವ ಕೊರೊನಾ ವೈರಸ್ ಓಮಿಕ್ರಾನ್ ಹೊಸ ರೂಪಾಂತರಿ ತಳಿ ಬಿಎಫ್.7 ವೈರಾಣು ಭಾರತದಲ್ಲೂ ಪತ್ತೆಯಾಗಿದೆ. ಅದೂ ಕೂಡಾ 3 ಪ್ರತ್ಯೇಕ ಪ್ರಕರಣಗಳು ಭಾರತದಲ್ಲಿ ವರದಿಯಾಗಿವೆ ಎಂದು ಸರ್ಕಾರದ ಅಧಿಕೃತ ಮೂಲಗಳು ಮಾಹಿತಿ ನೀಡಿವೆ.
ಬಿಎಫ್.7 ವೈರಾಣುವಿನ ಮೊದಲ ಪ್ರಕರಣ ಅಕ್ಟೋಬರ್‌ನಲ್ಲೇ ಪತ್ತೆಯಾಗಿತ್ತು. ಗುಜರಾತ್‌ನ ಜೈವಿಕ ತಂತ್ರಜ್ಞಾನ ಸಂಶೋಧನಾ ಕೇಂದ್ರದಲ್ಲಿ ಪತ್ತೆಯಾಗಿತ್ತು. ಮತ್ತೊಂದು ಬಿಎಫ್.7 ಸೋಂಕು ಪ್ರಕರಣ ಕೂಡಾ ಗುಜರಾತ್‌ನಲ್ಲೇ ಪತ್ತೆಯಾಗಿದೆ. ವಡೋದರಾದಲ್ಲಿ ಕೋವಿಡ್ ಸೋಂಕಿತರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎನ್‌ಆರ್‌ಐ ಮಹಿಳೆಗೆ ಈ ವೈರಾಣುವಿನಿಂದ ಸೋಂಕು ತಗುಲಿರೋದು ಇದೀಗ ದೃಢಪಟ್ಟಿದೆ. 3ನೇ ಪ್ರಕರಣ ಒಡಿಶಾ ರಾಜ್ಯದಲ್ಲಿ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಚೀನಾದಲ್ಲಿ ಕೋವಿಡ್ ತುರ್ತು ಪರಿಸ್ಥಿತಿ ಎದುರಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಅವರ ಸಾರಥ್ಯದಲ್ಲಿ ಆರೋಗ್ಯ ಕ್ಷೇತ್ರದ ತಜ್ಞರ ಸಬೆ ನಡೆಯಿತು. ದೇಶದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಕಡಿಮೆ ಇರೋದು ಸಮಾಧಾನಕರ ಸಂಗತಿ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯ್ತು. ಆದರೆ, ಚೀನಾದಲ್ಲಿ ಕೋವಿಡ್ ಮಹಾ ಸ್ಫೋಟ ಉಂಟಾಗಿರುವ ಹಿನ್ನೆಲೆಯಲ್ಲಿ ಭಾರತ ಕೂಡಾ ಸರ್ವ ರೀತಿಯಲ್ಲೂ ಸಜ್ಜಾಗಬೇಕಿದೆ. ಜೊತೆಗೆ ಜಿನೋಮ್ ಸೀಕ್ವೆನ್ಸಿಂಗ್ ಹೆಚ್ಚಳ ಸೇರಿದಂತೆ ಕೋವಿಡ್ ಸೋಂಕಿನ ಸ್ಥಿತಿಗತಿ ಮೇಲೆ ಕಣ್ಗಾವಲು ವಹಿಸುವ ಅಗತ್ಯತೆಯನ್ನು ಸಭೆಯಲ್ಲಿ ಪ್ರತಿಪಾದಿಸಲಾಯ್ತು.
ಚೀನಾದಲ್ಲಿ ಸದ್ಯ ಎದುರಾಗಿರುವ ಕೋವಿಡ್ ತುರ್ತು ಪರಿಸ್ಥಿತಿಗೆ ಕಾರಣವಾಗಿರೋದು ಓಮಿಕ್ರಾನ್‌ನ ಉಪ ರೂಪಾಂತರಿ ಬಿಎಫ್.7 ವೈರಸ್ ಎಂದು ಭಾರತ ಸರ್ಕಾರಕ್ಕೆ ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ. ಬೀಜಿಂಗ್ ಸೇರಿದಂತೆ ಚೀನಾ ದೇಶಾದ್ಯಂತ ಇದೇ ವೈರಾಣು ಭಾರೀ ಪ್ರಮಾಣದಲ್ಲಿ ಹರಡುತ್ತಿದೆ. ದೇಶಾದ್ಯಂತ ದಿಢೀರ್ ಸೋಂಕಿನಬ್ಬರ ಹೆಚ್ಚಾಗಲು ಇದೇ ವೈರಾಣು ಕಾರಣವಾಗಿದೆ ಎಂದು ತಿಳಿದು ಬಂದಿದೆ.
ಚೀನಾ ಜನತೆಯಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿದೆ. ಜೊತೆಗೆ ಈ ಹಿಂದಿನ ವೈರಾಣುವಿನಿಂದ ಸೋಂಕಿಗೆ ಒಳಗಾದವರಿಗೆ ಓಮಿಕ್ರಾನ್ ಬಿಎಫ್.7 ವೈರಾಣು ಮಾರಣಾಂತಿಕವಾಗಿದ್ದು ಅತಿ ವೇಗವಾಗಿ ಹರಡುವ ಸಾಮರ್ಥ್ಯವನ್ನು ಈ ವೈರಾಉ ಹೊಂದಿದೆ. ಎಲ್ಲಕ್ಕಿಂತಾ ಹೆಚ್ಚಾಗಿ ಚೀನಾದ ದೇಶೀಯ ಲಸಿಕೆ ಕೂಡಾ ನಿರೀಕ್ಷಿತ ಪ್ರಮಾಣದಲ್ಲಿ ಫಲ ನೀಡಿಲ್ಲ.