ತುಮಕೂರು : ನಾನು ತುಂಬಾ ಕಡುಬಡತನದಲ್ಲಿ ಸಿದ್ದಗಂಗಾ ಮಠದಲ್ಲಿ ವಿದ್ಯಾಭ್ಯಾಸ ಮಾಡಿದ್ದೇನೆ, ಹತ್ತು ರೂಪಾಯಿ ಸಂಪಾದನೆ ಮಾಡಿದರೆ ಐದು ರೂಪಾಯಿಮಕ್ಕಳಿಗೆ,ಬಡವರಿಗೆ, ಸಮಾಜಸೇವೆಗೆ ವಿನಿಯೋಗ ಮಾಡುತ್ತಿದ್ದೇನೆ,ಗ್ರಾಮಾಂತರ ಕ್ಷೇತ್ರದ ಸುಮಾರು ಎರಡು ಸಾವಿರ ಹೆಣ್ಣು ಮಕ್ಕಳಿಗೆ ಅನುಕೂಲವಾಗಲೆಂದು ಹತ್ತು ಕೋಟಿ ವೆಚ್ಚದಲ್ಲಿ ಗಾರ್ಮೆಂಟ್ಸ್ ಕಾರ್ಖಾನೆ ಮಾಡುತ್ತಿದ್ದು ಮಾರ್ಚ್ ವೇಳೆಗೆ ಪ್ರಾರಂಭವಾಗಲಿದೆ ಎಂದು ಸಮಾಜ ಸೇವಕ ಹಾಗೂ ಗೂಳೂರು ಜಿಲ್ಲಾ ಪಂಚಾಯ್ತಿ ಉಸ್ತುವಾರಿ ಅಧ್ಯಕ್ಷ ಜಿ ಪಾಲನೇತ್ರಯ್ಯ ತಿಳಿಸಿದರು.
ಅವರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿ ಹರಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹರಳೂರು ಗ್ರಾಮದ ಶ್ರೀ ವೀರಭದ್ರಸ್ವಾಮಿ ಗ್ರಾಮಾಂತರ ಪ್ರೌಢಶಾಲೆಯಲ್ಲಿ ನಡೆದ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಸಿದ್ದಗಂಗಾ ಮಠದಲ್ಲಿ ವಿದ್ಯಾಭ್ಯಾಸ ಮಾಡಿದ ಕಾರಣ ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರ ಹೆಸರಿನಲ್ಲಿ ಗಾರ್ಮೆಂಟ್ಸ್ ಕಾರ್ಖಾನೆ ಪ್ರಾರಂಭ ಮಾಡಲಾಗುತ್ತಿದೆ.ಇದರ ಉಪಯೋಗವನ್ನು ಗ್ರಾಮಾಂತರ ಕ್ಷೇತ್ರದ ಹೆಣ್ಣು ಮಕ್ಕಳು ಪಡೆದುಕೊಳ್ಳಲಿ ಎಂದು ಹೇಳಿದರು. ಗೂಳೂರು ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಶಾಲೆಗಳ ಹಾಗೂ ದೇವಸ್ಥಾನಗಳ ಅಭಿವೃದ್ಧಿಗೆ ನನ್ನ ಸ್ವಂತ ದುಡಿಮೆಯ ಒಂದಷ್ಟು ಭಾಗ ಹಣವನ್ನು ಬಳಸುತ್ತಿದ್ದೇನೆ ನಾನು ಮಾಡುತ್ತಿರುವಸಮಾಜಸೇವೆಯಲ್ಲಿ ರಾಜಕೀಯ ಮಾಡಬೇಡಿ ಎಂದು ಮನವಿ ಮಾಡಿದರು.
ಶ್ರೀ ವೀರಭದ್ರಸ್ವಾಮಿ ಗ್ರಾಮಾಂತರ ಪ್ರೌಢಶಾಲೆಯ ಮಕ್ಕಳ ಊಟಕ್ಕೆ ಪ್ರತಿ ವರ್ಷ ಸುಮಾರು 15 ಸಾವಿರ ವೆಚ್ಚದಲ್ಲಿ ಸಾಂಬರು ಪುಡಿ, ಪ್ರಸ್ತುತ ವರ್ಷ ಎಲ್ಲಾ ಶಾಲಾ ಮಕ್ಕಳಿಗೆ ಬಿಳಿ ಶಾಲಾ ಸಮವಸ್ತ್ರಗಳನ್ನು ನೀಡಿದ್ದಾರೆ. ನೀರಿನ ಸಮಸ್ಯೆ ಎದುರಾಗಬಾರದೆಂದು ಸುಮಾರು 2.48 ಲಕ್ಷ ವೆಚ್ಚದಲ್ಲಿ ಕೊಳವೆಬಾವಿ ಕೊರೆಸಿ ನೀರಿನ ಬವಣೆ ನೀಗಿಸಿದ ಜೆಡಿಎಸ್ ಉಸ್ತುವಾರಿ ಪಾಲನೇತ್ರಯ್ಯ ಹಾಗೂ ಹರಳೂರು ಗ್ರಾಮ ಪಂಚಾಯತಿ ಸದಸ್ಯೆ ವಿಜಯಕುಮಾರಿ ಪಾಲನೇತ್ರಯ್ಯ ಅವರನ್ನು ಶಾಲಾಆಡಳಿತಮಂಡಳಿಯಿಂದ ಅಭಿನಂದಿಸಿದರು.
ಶಾಲಾ ವಾರ್ಷಿಕ ಕ್ರೀಡಾಕೂಟದಲ್ಲಿ ವಿಜೇತರಾದ ಮಕ್ಕಳಿಗೆ ಪಾಲನೇತ್ರಯ್ಯ ಬಹುಮಾನ ವಿತರಿಸಿದರು.
ಈ ವೇಳೆ ಹರಳೂರು ಗ್ರಾಮ ಪಂಚಾಯತಿ ಅಧ್ಯಕ್ಷ ಶಿವಕುಮಾರ್,ಸದಸ್ಯೆ ವಿಜಯಕುಮಾರಿ ಪಾಲನೇತ್ರಯ್ಯ, ನಿವೃತ್ತ ಶಿಕ್ಷಕರು,ಶಿಕ್ಷಕರು,ಹಲವು ಗಣ್ಯರು,ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.