ತುಮಕೂರು_2023ರ ಚುನಾವಣೆ ಸಮೀಪಿಸುತ್ತಿದ್ದು ಎಲ್ಲಾ ರಾಜಕೀಯ ಪಕ್ಷಗಳು ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಹೇಗಾದರೂ ಮಾಡಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನ ಗೆಲ್ಲಿಸಿಕೊಳ್ಳುವ ಸಲುವಾಗಿ ರಾಜ್ಯಾದ್ಯಂತ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದಿಂದ ಹಲವಾರು ಯಾತ್ರೆ ಸಮಾವೇಶಗಳು ನಡೆಯುತ್ತಿವೆ.
ಇತ್ತೀಚೆಗೆ ತುಮಕೂರು ನಗರದಲ್ಲಿ ಕಳೆದ ವಾರ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ರವರ ನೇತೃತ್ವದಲ್ಲಿ ಪಂಚರತ್ನ ಯಾತ್ರೆ ಅದ್ದೂರಿಯಾಗಿ ನಡೆದಿದ್ದು ಇನ್ನೂ ಯಾತ್ರೆ ವೇಳೆಯಲ್ಲಿ ತುಮಕೂರು ನಗರಕ್ಕೆ ಜೆಡಿಎಸ್ ಪಕ್ಷದಿಂದ ಎನ್ ಗೋವಿಂದರಾಜು ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದರು.
ಇನ್ನು ಏಕಾಏಕಿ ಪಕ್ಷದ ಅಭ್ಯರ್ಥಿಯ ಹೆಸರು ಪಂಚರತ್ನ ಯಾತ್ರೆಯ ವೇಳೆ ಘೋಷಣೆಯಾಗುತ್ತಿದ್ದಂತೆ ಜೆಡಿಎಸ್ ಪಾಳಯದಲ್ಲಿ ಹಲವಾರು ವರ್ಷದಿಂದ ಪಕ್ಷಕ್ಕಾಗಿ ದುಡಿದ ನಿಷ್ಠಾವಂತ ಕಾರ್ಯಕರ್ತರು ಹಾಗೂ ಚುನಾವಣಾ ಆಕಾಂಕ್ಷಿಗಳಿಗೆ ತೀವ್ರ ಬೇಸರ ತರಿಸಿತ್ತು.
ಇದರ ಮುಂದುವರಿದ ಭಾಗವಾಗಿ ತುಮಕೂರು ನಗರ ಜೆಡಿಎಸ್ ಅಭ್ಯರ್ಥಿ ಎನ್ ಗೋವಿಂದರಾಜು ರವರು ಎರಡು ಬಾರಿ ಚುನಾವಣೆಯಲ್ಲಿ ಪರಾಭವ ಗೊಂಡಿದ್ದರು ಇನ್ನು ಮುಂಬರುವ 2023ರ ಚುನಾವಣೆಯಲ್ಲಿ ಹೇಗಾದರೂ ಮಾಡಿ ಚುನಾವಣೆಯಲ್ಲಿ ಗೆಲ್ಲಲೇ ಬೇಕು ಎಂದು ಹಠಕ್ಕೆ ಬಿದ್ದಿರುವ ಅಭ್ಯರ್ಥಿ ಭಾನುವಾರ ತುಮಕೂರು ತಾಲೂಕಿನ ಗೂಳೂರು ಹೋಬಳಿಯ ಎತ್ತೇನಹಳ್ಳಿ ಮಾರಮ್ಮ ದೇವಾಲಯಕ್ಕೆ ತುಮಕೂರು ನಗರದ ಸ್ಥಳೀಯ ಮುಖಂಡರು ಹಾಗೂ ಪಕ್ಷದ 500 ಕ್ಕೂ ಕಾರ್ಯಕರ್ತರನ್ನ ದೇವಾಲಯಕ್ಕೆ ಕರೆದುಕೊಂಡು ಹೋಗಿ ಆಣೆ ಪ್ರಮಾಣಕ್ಕೆ ಮುಂದಾಗಿದ್ದಾರೆ ಎನ್ನುವ ಗಂಭೀರ ಆರೋಪ ಪಕ್ಷದ ವಲಯದಲ್ಲಿ ಕೇಳಿ ಬರುತ್ತಿದೆ.
ಐದಕ್ಕೂ ಹೆಚ್ಚು ಬಸ್ಗಳಲ್ಲಿ ಹಾಗೂ ಇತರೆ ವಾಹನಗಳಲ್ಲಿ ಬೃಹತ್ ಪ್ರಮಾಣದಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರನ್ನು ದೇವಾಲಯಕ್ಕೆ ಕರೆದುಕೊಂಡು ಹೋಗಿ ಆಣೆ ಪ್ರಮಾಣಕ್ಕೆ ಮುಂದಾಗಿರುವ ಫೋಟೋ ವಿಡಿಯೋಗಳು ಲಭ್ಯವಾಗಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ.