ತುಮಕೂರು ಗ್ರಾಮಾಂತರ ಗೂಳೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಹರಳೂರು ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವ ಸಮಾರಂಭ ವಿಜೃಂಭಣೆಯಿಂದ ನೆರವೇರುವುದರ ಜೊತೆಗೆ ಹೊಸ ಇತಿಹಾಸ ಸೃಷ್ಟಿಗೆ ಸಾಕ್ಷಿಯಾಯಿತು.
ಹರಳೂರು ಗ್ರಾಮದ ಶ್ರೀ ಮಹಾನಾಯಕ ಗೆಳೆಯರ ಬಳಗ ಹಾಗೂ ಜಿ ಪಾಲನೇತ್ರೆಯ ಅಭಿಮಾನಿ ಬಳಗದಿಂದ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ 5,000ಕ್ಕೂ ಹೆಚ್ಚು ಜನ ಭಾಗವಹಿಸಿ ಕನ್ನಡ ಅಭಿಮಾನ ಮೆರೆದರು, ಜನಪ್ರಿಯ ಶಾಸಕರಾದ ಡಿಸಿ ಗೌರಿಶಂಕರ್ ರವರ ಹಾಗೂ ಗೂಳೂರು ಜಿಲ್ಲಾ ಪಂಚಾಯತ್ ಉಸ್ತುವಾರಿ ಅಧ್ಯಕ್ಷರಾದ ಜಿ ಪಾಲನೇತ್ರಯ್ಯ ಅವರ 55 ನೇ ಜನ್ಮದಿನ ಒಂದೇ ವೇದಿಕೆಯಲ್ಲಿ ಆಚರಿಸುವ ಮೂಲಕ ಗ್ರಾಮಸ್ಥರು ಅದ್ದೂರಿಯಾಗಿ ಶುಭ ಕೋರಿದರು.
ಜನಪ್ರಿಯ ಶಾಸಕರಾದ ಡಿಸಿ ಗೌರಿಶಂಕರ್ ರವರ ಹಾಗೂ ಗೂಳೂರು ಜಿಲ್ಲಾ ಪಂಚಾಯತಿ ಉಸ್ತುವಾರಿ ಜಿ ಪಾಲನೇತ್ರಯ್ಯ ಅವರ ಜನ್ಮದಿನದ ಸವಿ ನೆನಪಿಗಾಗಿ ಹರಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಶೇ 85 ಕ್ಕೂ ಹೆಚ್ಚು ಅಂಕ ಪಡೆದ 100 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಿ ನಗದು ಬಹುಮಾನ ನೀಡಿ ಶಾಸಕ ಡಿ ಸಿ ಗೌರಿಶಂಕರ್ ಹಾಗೂ ಜಿ ಪಾಲನೇತ್ರಯ್ಯ ಅಭಿನಂದಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ಡಿಸಿ ಗೌರಿಶಂಕರ್ ರವರು ಮಾತನಾಡಿ ಮಾಜಿ ಶಾಸಕರೇ ನೀವು 10 ವರ್ಷ ಗ್ರಾಮಾಂತರದಲ್ಲಿ ಶಾಸಕರಾಗಿ ಅಧಿಕಾರ ನಿರ್ವಹಿಸಿದ್ದೀರಾ ಈ ಅವಧಿಯಲ್ಲಿ ಅಮಾಯಕರ ಮೇಲೆ 3000 ಕೇಸು ಹಾಕಿಸಿ ಕಾರ್ಯಕರ್ತರನ್ನು ಅವಾಚ್ಯ ಶಬ್ದಗಳಿಂದ ಅಮ್ಮ,ಅಕ್ಕ ಎಂದು ನಿಂದಿಸಿರುವುದೇ ನಿಮ್ಮ ಸಾಧನೆ ಶಾಸಕನಾಗಿ ನಾನು 4 ವರ್ಷದಲ್ಲಿ ಅಭಿವೃದ್ದಿ ಮಾಡಿರುವ ಬಗ್ಗೆ ಬಹಿರಂಗ ಚರ್ಚೆ ಗೆ ಸಿದ್ದ 10 ವರ್ಷದಲ್ಲಿ ಕ್ಷೇತ್ರದಲ್ಲಿ ನೀವು ಮಾಡಿರುವ ಅಭಿವೃದ್ದಿ ಬಗ್ಗೆ ಬಹಿರಂಗ ಚರ್ಚೆಗೆ ಬನ್ನಿ ಎಂದು ನೇರ ಪಥಾಹ್ವಾನ ನೀಡಿದರು.
ಸಾಮಾನ್ಯ ಶಾಸಕನಿಗೆ ರಾಷ್ಟ್ರೀಯ ನಾಯಕರಿಗೆ ನೀಡುವಂತ ಅದ್ದೂರಿ ಸ್ವಾಗತವನ್ನು ಹರಳೂರು ಜನತೆ ನೀಡಿದ್ದಾರೆ.
ಈ ಭಾಗದ ಜೆಡಿಎಸ್ ಉಸ್ತುವಾರಿ ಪಾಲನೇತ್ರಯ್ಯ ವ್ಯವಸ್ತಿತವಾಗಿ ಅದ್ದೂರಿ ಕಾರ್ಯಕ್ರಮ ಆಯೋಜಿಸಿದ್ದು ಅವರ ಅಭಿಮಾನಕ್ಕೆ ಚಿರಖುಣಿ ಎಂದರು.
ಮಾಜಿ ಶಾಸಕರು ಅಧಿಕಾರದಲ್ಲಿ ಇದ್ದ 10 ವರ್ಷ ಯಾವುದೇ ದೇವಸ್ತಾನಕ್ಕೂ 20 ಲಕ್ಷ ಹಣ ನೀಡಿಲ್ಲ, ಆದರೆ ಗೂಳೂರು ಜಿಲ್ಲಾ ಪಂಚಾಯ್ತಿ ಉಸ್ತುವಾರಿ ಪಾಲನೇತ್ರಯ್ಯ ತಮ್ಮ ಗ್ರಾಮದ ಯಲ್ಲಮ್ಮ ದೇವಿ ದೇವಾಲಯಕ್ಕೆ ಒಂದು ಕೋಟಿ ಹಣ ನೀಡಿದ್ದಾರೆ. ಪಾಲಣ್ಣ ಕಲಿಯುಗದ ದಾನಶೂರ ಕರ್ಣ ಎಂದರು.
ಗ್ರಾಮಾಂತರಕ್ಕೆ ವೃಷಭಾವತಿ ನೀರು ಹರಿಸಲು ಸರ್ಕಾರದ ಅನುಮತಿ ದೊರೆತಿದೆ ಟೆಂಡರ್ ಪ್ರಕ್ರಿಯೆ ಚಾಲ್ತಿಯಲ್ಲಿದ್ದು ಎರಡು ಮೂರು ತಿಂಗಳಲ್ಲಿ ಯೋಜನೆಗೆ ಭೂಮಿ ಪೂಜೆ ನಡೆಯಲಿದೆ,ಆದರೆ ಮಾಜಿ ಶಾಸಕರು ಅನುದಾನ ಬಿಡುಗಡೆಗೊಳಿಸದಂತೆ ಸರ್ಕಾರಕ್ಕೆ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಕಿಡಿಕಾರಿದರು.
ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಜನಜೀವನ ಅಸ್ತವ್ಯಸ್ತವಾಗಿದೆ,ಬಡವರು ಬೀದಿಪಾಲಾಗುತ್ತಿದ್ದಾರೆ, ದುಭಾರಿ ಬೆಲೆಗಳಿಂದ ಜನ ಕಂಗೆಟ್ಟು ಹೋಗುತ್ತಿದ್ದಾರೆ,ಗ್ಯಾಸ್ ಹಾಗೂ ಪೆಟ್ರೋಲ್ ರೇಟ್ ಗಗನಕ್ಕೇರಿ ಜನಸಾಮಾನ್ಯರ ಜೇಬು ಸುಡುತ್ತಿದೆ, ಯುವಕರು ಉದ್ಯೋಗವಿಲ್ಲದೆ ಅಲೆದಾಡುತ್ತಿದ್ದಾರೆ,ಅಚ್ಚೇ ದಿನ್ ಯಾರಿಗೆ ಬಂದಿದೆ ಎಂಬುದಕ್ಕೆ ಜನರೇ ಉತ್ತರಿಸಬೇಕು ಅಚ್ಚೇ ದಿನದ ಜಪ ಮಾಡುವವರಿಗೆ ತಕ್ಕ ಪಾಠ ಕಲಿಸಬೇಕು ಎಂದರು.
ಗೂಳೂರು ಜಿಲ್ಲಾ ಪಂಚಾಯ್ತಿ ಉಸ್ತುವಾರಿ ಜಿ.ಪಾಲನೇತ್ರಯ್ಯ ಮಾತನಾಡಿ ಶಾಸಕರಾದ ಡಿ ಸಿ ಗೌರಿ ಶಂಕರ್ ಅವರು ಗ್ರಾಮಾಂತರ ಕ್ಷೇತ್ರಕ್ಕೆ 2000 ಕೋಟಿ ಅನುದಾನ ತಂದು ಗ್ರಾಮಾಂತರ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ದಿ ಪಡಿಸುತ್ತಿದ್ದಾರೆ,ಗೂಳೂರು ಹೋಬಳಿಗೆ 180 ಕೋಟಿ ರೂಗಳ ಅಭಿವೃದ್ದಿ ಕಾಮಗಾರಿಗಳಾಗಿವೆ,ಅದರಂತೆ ಎಲ್ಲಾ ಹೋಬಳಿಗಳಲ್ಲಿಯೂ ಸಮಗ್ರ ಅಭಿವೃದ್ದಿಯಾಗುತ್ತಿದೆ ಮುಂದಿನ 20 ವರ್ಷ ಗ್ರಾಮಾಂತರ ಕ್ಷೇತ್ರ ಜೆಡಿಎಸ್ ಭದ್ರಕೋಟೆಯಾಗಲಿದೆ,ಈ ಕೋಟೆ ಬೇದಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ನಮ್ಮ ಶಾಸಕರು ಭದ್ರವಾಗಿ ತಳಪಾಯ ಹಾಕಿ ಮನೆಕಟ್ಟಿದ್ದಾರೆ,ನಟ್ಟು ಬೋಲ್ಟ್ ಹಾಕಿ ಮನೆ ನಿರ್ಮಿಸಿಲ್ಲ,ನಿಮ್ಮ ಹಾರೈಕೆಯೇ ಅವರಿಗೆ ಶ್ರೀ ರಕ್ಷೆ ಕ್ಷೇತ್ರದ ಅಭಿವೃದ್ದಿಗೆ ಮತ್ತೊಮ್ಮೆ ಗೌರಿ ಶಂಕರ್ ಬೆಂಬಲಿಸಬೇಕೆಂದು ಮನವಿ ಮಾಡಿದರು.
ಇದೇ ವೇಳೆ ಗ್ರಾಮದ ಹಿರಿಯರಿಗೆ ಸನ್ಮಾನ ಸಮಾರಂಭ ನೆರವೇರಿಸಲಾಯಿತು. ಶಾಸಕ ಡಿ ಸಿ ಗೌರಿಶಂಕರ್ ರವರಿಗೆ ಬೃಹತ್ ಸೇಬಿನ ಹಾರ ಹಾಕಿ ದಾರಿಯುದ್ದಕ್ಕೂ ಹೂವಿನ ಸುರಿಮಳೆಗೈದು ಕಾರ್ಯಕ್ರಮಕ್ಕೆ ಶಾಸಕರನ್ನು ಹರಳೂರು ಗ್ರಾಮಸ್ತರು ಆಹ್ವಾನಿಸಿದರು.
ಈ ಸಂದರ್ಭದಲ್ಲಿ ತಾಲೂಕು, ಮತ್ತು ಗೂಳೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಮುಖಂಡರುಗಳು, ಗ್ರಾಮ ಪಂಚಾಯಿತಿ ಸದಸ್ಯರುಗಳು, ಕಾರ್ಯಕರ್ತ ಬಂಧುಗಳು, ಸುಮಾರು 5 ಸಾವಿರಕ್ಕೂ ಹೆಚ್ಚು ಸಾರ್ವಜನಿಕರುಗಳು ಉಪಸ್ಥಿತರಿದ್ದರು.