ತುಮಕೂರು ಜಿಲ್ಲೆ, ಕೊರಟಗೆರೆ ತಾಲ್ಲೂಕಿನಲ್ಲಿ ದಿನಾಂಕ 05-10-2022 ರಂದು ಅಪಘಾತವೊಂದು ಸಂಭವಿಸಿದ್ದು ಆ ಕುರಿತು ಆಸ್ಪತ್ರೆಗೆ ವರದಿ ಮಾಡಲು ತೆರಳಿದ್ದ ಪತ್ರಕರ್ತರ ಮೇಲೆ ಹಲ್ಲೆ ನಡೆಸಿರುವ ಕೊರಟಗೆರೆಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯರಾದ ಡಾ.ನವೀನ್ ಕೆ.ಎನ್. ರವರ ಮೇಲೆ ಈಗಾಗಲೇ ಪ್ರಕರಣ ದಾಖಲಾಗಿದ್ದು, ಇದುವರೆವಿಗೆ ಸಂಬಂಧಪಟ್ಟ ಪೊಲೀಸ್ ಇಲಾಖೆಯಿಂದ ಯಾವುದೇ ರೀತಿಯ ಕ್ರಮ ಜರುಗಿಸಿರುವುದಿಲ್ಲವೆಂದು ಆರೋಪಿಸುವುದರೊಂದಿಗೆ ಜಿಲ್ಲಾಧಿಕಾರಿಗಳ ಕಛೇರಿಯ ಬಳಿ ಪತ್ರಕರ್ತರಿಂದ ಬೃಹತ್ ಪ್ರತಿಭಟನೆಯನ್ನು ನಡೆಸಲಾಯಿತು.
ವೈದ್ಯ ನವೀನ್‌ರವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಶೀಘ್ರವಾಗಿ ಅವರನ್ನು ಸೇವೆಯಿಂದ ಅಮಾನತ್ತು ಮಾಡಿ ಬಂಧಿಸಬೇಕೆಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮನವಿಯನ್ನು ಸಲ್ಲಿಸಲಾಯಿತು.
ಇದರೊಂದಿಗೆ ಪತ್ರಕರ್ತರು ಈಗಾಗಲೇ ನೀಡಿರುವ ದೂರಿನ ಮೇಲೆ ಪ್ರಕರಣ ದಾಖಲಿಸದೇ ಪತ್ರಕರ್ತರ ಮೇಲೆಯೇ ದಬ್ಬಾಳಿಕೆ ನಡೆಸಿದ್ದ ಕೊರಟೆಗೆರೆ ಪೊಲೀಸ್ ಠಾಣೆಯ ಆರಕ್ಷಕ ಉಪ-ನಿರೀಕ್ಷಕರಾದ ನಾಗರಾಜುರವರ ಮೇಲೆಯೂ ಸಹ ಕ್ರಮ ಕೈಗೊಳ್ಳುವುದರೊಂದಿಗೆ ಅವರನ್ನೂ ಸಹ ಸೇವೆಯಿಂದ ಅಮಾನತ್ತು ಮಾಡಬೇಕೆಂದು ಒತ್ತಾಯಿಸಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಜಿಲ್ಲಾಧ್ಯಕ್ಷರಾದ ಪುರುಷೋತ್ತಮ್‌ರವರು ಮಾತನಾಡಿ ಈ ಕೂಡಲೇ ನಮ್ಮ ಮನವಿಯನ್ನು ಪುರಸ್ಕರಿಸಿ, ನಮಗೆ ನ್ಯಾಯ ದೊರಕಿಸಿಕೊಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನಮ್ಮ ಸಂಘವು ಈ ಕುರಿತು ರಾಜ್ಯಾದ್ಯಂತ ಪ್ರತಿಭಟನೆಯನ್ನು ನಡೆಸಲಾಗುವುದೆಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಕೆ.ಯು.ಡಬ್ಲ್ಯೂ.ಜೆ. ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ಜಿಲ್ಲೆಯ ಬಹುತೇಕ ಎಲ್ಲಾ ಪತ್ರಕರ್ತರು ಭಾಗಿಯಾಗಿ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು.