ತುಮಕೂರು; ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಪಾದಯಾತ್ರೆ ಶನಿವಾರ ಬೆಳಗ್ಗೆ ತುಮಕೂರು ಜಿಲ್ಲೆಯನ್ನು ಪ್ರವೇಶಿಸಿದೆ.
ಇಂದು ಬೆಳಗ್ಗೆ 6.30ಕ್ಕೆ ತುರುವೇಕೆರೆ ವಿಧಾನಸಭಾ ಕ್ಷೇತ್ರದ ಮಾಯಸಂದ್ರದ ಪೊಲೀಸ್ ಠಾಣೆ ಬಳಿಯಿಂದ ಆರಂಭವಾದ ಪಾದಯಾತ್ರೆ ಬೆಳಗ್ಗೆ 11 ಗಂಟೆ ವೇಳೆಗೆ ಹರಳೀಕೆರೆ ಪಾಳ್ಯದ ಕಾಸೋಪಾಲಿಟನ್ ಕ್ಲಬ್ ಬಳಿ ವಿಶ್ರಾಂತಿ ಪಡೆದಿದೆ.
ಭಾರತ್ ಜೋಡೋ ಯಾತ್ರೆಯ ಯಶಸ್ಸು ನೋಡಿ ಬಿಜೆಪಿಯವರಿಗೆ ಉರಿ ಶುರುವಾಗಿದೆ: ಪರಮೇಶ್ವರ್
ನಂತರ ಸಂಜೆ ನಾಲ್ಕು ಗಂಟೆಗೆ ಭೋಜನ ವಿರಾಮದ ಬಳಿಕ ಯಾತ್ರೆ ಪುನಾರಂಭವಾಗಲಿದೆ.
ರಾತ್ರಿ 7 ಗಂಟೆಗೆ ಹರಿದಾಸನಹಳ್ಳಿಗೆ ತಲುಪಲಿರುವ ಯಾತ್ರೆಯು ಕಾರ್ನರ್ ಮೀಟಿಂಗ್ ಮುಗಿದ ಬಳಿಕ ಬಾಣಸಂದ್ರದ ವಿಎಸ್ಎಸ್ ಜೂನಿಯರ್ ಕಾಲೇಜ್ ಬಳಿ ವಾಸ್ತವ್ಯ ಮಾಡಲಿದೆ.
ಈ ವೇಳೆಗೆ ಒಟ್ಟು 23 ಕಿ.ಮೀವರೆಗೆ ರಾಹುಲ್ ಗಾಂಧಿ ಹೆಜ್ಜೆ ಹಾಕಲಿದ್ದಾರೆ.
ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಪಾದಯಾತ್ರೆಯಲ್ಲಿ ಗುಬ್ಬಿ ಕ್ಷೇತ್ರದ ಜೆಡಿಎಸ್ ನಿರ್ಗಮಿತ ಶಾಸಕ ಎಸ್.ಆರ್ ಶ್ರೀನಿವಾಸ್ ಕೂಡ ಹೆಜ್ಜೆ ಹಾಕಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿದೆ, ಅಲ್ಲದೇ ಎಸ್.ಆರ್.ಶ್ರೀನಿವಾಸ್ ಕಾಂಗ್ರೆಸ್ ಸೇರುವುದು ಖಚಿತವಾಗಿದ್ದು, ಮುಂದಿನ ದಿನಗಳಲ್ಲಿ ತಮ್ಮ ತಂದೆಯವರಿದ್ದ ಪಕ್ಷಕ್ಕೆ ಮರಳಿ ಹೋಗುತ್ತಿರುವುದಕ್ಕೆ ಅವರಲ್ಲಿ ಸಂತಸ ಮೂಡಿದೆ ಎಂದು ಅವರ ಅಭಿಮಾನಿಗಳು ಹೇಳುತ್ತಿದ್ದಾರೆ.
ಇನ್ನು ಇಂದಿನ ಯಾತ್ರೆಯಲ್ಲಿ ಕಾಂಗ್ರೆಸ್ ಮುಖಂಡರಾದ ಡಾ. ಜಿ.ಪರಮೇಶ್ವರ್, ಕೆ.ಎನ್.ರಾಜಣ್ಣ, ಬೆಮೆಲ್ ಕಾಂತರಾಜು, ಹಾಗೂ ಇನ್ನಿತರರು ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿಗೆ ಜೊತೆಯಾದರು.