ತುಮಕೂರು; ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ವ್ಯಕ್ತಿಯೋರ್ವನ ಭೀಕರ ಕೊಲೆ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ತುಮಕೂರು ನಗರದ ಜಿ.ಸಿ.ಆರ್ ಕಾಲೋನಿಯ ಮುಬಾರಕ್ ಪಾಷಾ(35) ಎಂದು ಗುರ್ತಿಸಲಾಗಿದೆ.
ಈತ ಕಳೆದ ರಾತ್ರಿ ನಗರದ ಖಾಸಗಿ ಬಸ್ ನಿಲ್ದಾಣಕ್ಕೆ ಬಂದಿದ್ದನು ಎನ್ನಲಾಗಿದೆ. ಈ ವೇಳೆ ಯಾರೋ ಅಪರಿಚಿತರು ಮಾರಾಕಾಸ್ತ್ರಗಳಿಂದ ಕೊಲೆ ಮಾಡಿದ್ದಾರೆಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದ್ದು.
ಕೊಲೆಯಾದ ವ್ಯಕ್ತಿ ನಗರದ ಗುಬ್ಬಿ ಗೇಟ್ ಬಳಿ ಹಲವಾರು ವರ್ಷಗಳಿಂದ ಹಮಾಲಿ ಕೆಲಸ ಮಾಡಿಕೊಂಡಿದ್ದನು. ಅಲ್ಲದೇ ಈತ ಹಲವಾರು ಜನರೊಂದಿಗೆ ನಿತ್ಯ ಗಲಾಟೆ ಮಾಡಿಕೊಳ್ಳುತ್ತಿದ್ದ ಎಂಬುದು ಸಹ ಅವನನ್ನು ಗುರುತಿಸಿದವರ ಬಾಯಿಂದ ಕೇಳಿ ಬರುತ್ತಿದೆ, ಕೊಲೆಗೆ ನಿಖರ ಕಾರಣ ಪೊಲೀಸ್ ಇಲಾಖೆಯ ನಿಷ್ಠ ತನಿಖೆಯಿಂದಷ್ಟೇ ಗೊತ್ತಾಗಬೇಕಿದೆ.
ಇನ್ನು ಕೊಲೆಯಾದ ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರ್ವಾಡ್, ಡಿವೈಎಸ್ಪಿ ಶ್ರೀನಿವಾಸ್, ನಗರ ಠಾಣೆಯ ಸಿಬ್ಬಂದಿಗಳು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.
ಬೆಚ್ಚಿ ಬಿದ್ದ ಸಾರ್ವಜನಿಕರು; ವಿವಿಧ ಕಾರ್ಯ ನಿಮಿತ್ತ ಇಂದು ಬೆಳಗ್ಗೆ ಖಾಸಗಿ ಬಸ್ ನಿಲ್ದಾಣಕ್ಕೆ ಬಂದ ಜನ ಬಸ್ ನಿಲ್ದಾಣದಲ್ಲಿ ಮೃತ ದೇಹ ನೋಡಿ ಬೆಚ್ಚಿ ಬಿದ್ದರು.