ತುಮಕೂರು: ಧ್ಯಾನಕ್ಕೆ ಏಕಾಗ್ರತೆ ಅತಿಮುಖ್ಯ. ಧ್ಯಾನವೆಂಬುದು ಮನುಷ್ಯನಿಗೆ ಮನಃಶಾಂತಿ ಮತ್ತು ಸಂತೋಷವನ್ನು ನೀಡುತ್ತದೆ. ಧ್ಯಾನಕ್ಕೆ ಕುಳಿತಾಗ ಮನುಷ್ಯನ ದೇಹ ಮತ್ತು ಮನಸ್ಸು ಒಂದೇ ರೀತಿಯಲ್ಲಿ ಇರಬೇಕು ಎಂದು ತುಮಕೂರು ವಿವಿಯ ಕುಲಪತಿಗಳಾದ ಪ್ರೊ. ಎಂ. ವೆಂಕಟೇಶ್ವರಲು ಅಭಿಪ್ರಾಯಪಟ್ಟರು.
ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶ (ಐಕ್ಯುಎಸಿ), ಬೈಲುಕುಪ್ಪೆಯ ಸೆರಾ ಜೆ ಮೊನಾಸ್ಟಿಕ್ ವಿವಿ ಸಹಯೋಗದಲ್ಲಿ ಧ್ಯಾನದ ಪರಿಚಯ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಮಂಗಳವಾರ ಆಯೋಜಿಸಿದ್ದವು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರೊ. ವೆಂಕಟೇಶ್ವರಲು, ಸೆರಾ ಜೆ ಮೊನಾಸ್ಟಿಕ್ ವಿಶ್ವವಿದ್ಯಾನಿಲಯದಲ್ಲಿರುವ ಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರತಿಯೊಂದು ವಿಶ್ವವಿದ್ಯಾನಿಲಯವೂ ಅಳವಡಿಸಿಕೊಳ್ಳಬೇಕಿದೆ. ಪ್ರತಿಯೊಬ್ಬರಿಗೂ ಸಮಯಪಾಲನೆ, ಶಿಸ್ತು ಎಂಬುದು ಅತಿಮುಖ್ಯ ಎಂದು ತಿಳಿಸಿದರು.
ಸೆರಾ ಜೆ ಮೊನಾಸ್ಟಿಕ್ ವಿಶ್ವವಿದ್ಯಾನಿಲಯದ ಅಬೋಟ್ ಘೆಶೆ ತಾಶಿ ಸೆತರ್ ಅವರು ಮಾತನಾಡಿ, ಧ್ಯಾನವೆಂಬುದು ನಮ್ಮ ಭಾರತದ ಪುರಾತನ ಮನಃಶಾಸ್ತ್ರವಾಗಿದ್ದು, ಅದನ್ನು ಈ ಕಾಲಕ್ಕೆ ಅಳವಡಿಸಿಕೊಳ್ಳಬೇಕಿದೆ. ಧ್ಯಾನ ಸಂಸ್ಕೃತಿಯನ್ನು ಹೆಚ್ಚಿಸುತ್ತದೆ. ಹಾಗೆಯೇ ಜ್ಯಾತ್ಯತೀತ ಮನೋಭಾವವನ್ನು ವೃದ್ಧಿಸುತ್ತದೆ. ಹಿಂಸೆಯನ್ನು ಹೋಗಲಾಡಿಸಿ, ಅಹಿಂಸೆ ಮತ್ತು ಸ್ನೇಹಯುತ ಬದುಕನ್ನು ಕಟ್ಟಿಕೊಡುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ಮುಖ್ಯಸ್ಥರಾದ ಪ್ರೊ. ಕೆ.ಜಿ. ಪರಶುರಾಮ, ಪ್ರಾಧ್ಯಾಪಕ ಪ್ರೊ. ಬಿ. ರಮೇಶ್, ಸೆರಾ ಜೆ ಮೊನಾಸ್ಟಿಕ್ ವಿಶ್ವವಿದ್ಯಾನಿಲಯದ ಘೆಶೆ ನ್ಯಾಮ ತಾಶಿ, ನವಾಂಗ್ ಜಂಗ್‌ಚುಪ್ ಮತ್ತಿತರರು ಉಪಸ್ಥಿತರಿದ್ದರು.