ಹಿಂದಿ ದಿವಸ್ ಆಚರಣೆಯನ್ನು ವಿರೋಧಿಸಿ ತುಮಕೂರು ಜಿಲ್ಲಾ ಜೆಡಿಎಸ್ ವತಿಯಿಂದ ಪ್ರತಿಭಟನೆ

ತುಮಕೂರು ಜಿಲ್ಲಾ ಜೆಡಿಎಸ್ ಪಕ್ಷದ ವತಿಯಿಂದ ಹಿಂದಿ ದಿವಸ್ ಆಚರಣೆಯನ್ನು ವಿರೋಧಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸುವುದರ ಮೂಲಕ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷರಾದ ಆರ್.ಸಿ.ಆಂಜಿನಪ್ಪರವರು ಮಾತನಾಡುತ್ತಾ ನಮ್ಮ ಭಾರತ ಸರ್ಕಾರವು ಯಾವುದೋ ಒಂದು ಕುತಂತ್ರದಿಂದ ಸೆಪ್ಟೆಂಬರ್ 14ರ ದಿನವನ್ನು ಹಿಂದಿ ದಿವಸ್ ಎಂಬ ಆಚರಣೆಯನ್ನು ಸೃಷ್ಠಿಸಿ, ದೇಶದ ಸಾವಿರಾರು ಪ್ರಾದೇಶಿಕ ಭಾಷೆಗಳಿಗೆ ಮೋಸ ಮಾಡುತ್ತಾ ಬಂದಿದೆ, 400 ವರ್ಷಗಳ ಇತಿಹಾಸವಿರುವ ಹಿಂದಿ ಭಾಷೆಗೆ ಹಬ್ಬ ಮಾಡುವ ಇವರಿಗೆ 2500 ವರ್ಷಗಳ ಇತಿಹಾಸವಿರುವ ಕನ್ನಡದ ನೆನಪು ಬರುವುದಿಲ್ಲ ಎಂದರು.


ಅಲ್ಲದೇ ಕರ್ನಾಟಕ ರಾಜ್ಯವು ಕನ್ನಡ, ಕೊಂಕಣಿ, ತುಳು, ಕೊಡವ ಸೇರಿದಂತೆ ಹತ್ತಾರು ಭಾಷೆಗಳ ತವರೂರು, ವೈವಿಧ್ಯಮಯ ಸಂಸ್ಕೃತಿ ಹೊಂದಿರುವ ಈ ರಾಜ್ಯವೇ ಒಂದು ಅದ್ಭುತ ಪ್ರಪಂಚ, ಇಂತಹ ಪುಣ್ಯಭೂಮಿಯಲ್ಲಿ ನಮಗೆ ಸಂಬಂಧವೇ ಇಲ್ಲದ ಭಾಷೆಯ ಆಚರಣೆ ಎನ್ನುವುದು ಘೋರ ಅನ್ಯಾಯವಾಗಿದೆ ಎಂದು ತಿಳಿಸಿದರು.


ಈ ಹಿಂದಿ ದಿವಸ ಭಾಷಿಕ ರಾಜ್ಯಗಳಿಗೆ ಸೀಮಿತವಾಗಲಿ, ನಮಗೆ ಅದರ ಅವಶ್ಯಕತೆ ಇಲ್ಲ, ಹೊರಗಿನವರ ದಾಳಿ ಪ್ರಯತ್ನಕ್ಕೆ ಕನ್ನಡಿಗರು ಹಿಂದಿನಿಂದಲೂ ಸರಿಯಾದ ಉತ್ತರ ಕೊಡುತ್ತಾ ಬಂದಿದ್ದಾರೆ. ಈಗಲೂ ಸಹ ಈ ಬಲವಂತ ಹೇರಿಕೆಯನ್ನು ವಿರೋಧಿಸುತ್ತಾ, ಈ ಆಚರಣೆಯಲ್ಲಿ ಪಾಲ್ಗೊಳ್ಳದಂತೆ ಮತ್ತು ಯಾವುದೇ ಉದ್ದೇಶಿತ ಬೆಂಬಲ ನೀಡದಂತೆ ನಮ್ಮ ಪಕ್ಷವು ಆಗ್ರಹಿಸುತ್ತದೆ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷರಾದ ಆರ್.ಸಿ.ಆಂಜಿನಪ್ಪ, ಪಕ್ಷದ ಕಾರ್ಯಕರ್ತರುಗಳಾದ ಟಿ.ಆರ್.ನಾಗರಾಜು, ಬೆಳ್ಳಿಲೋಕೇಶ್, ನರಸಿಂಹಮೂರ್ತಿ, ಪ್ರೆಸ್ ರಾಜಣ್ಣ, ತಾಹೇರಾ ಖುಲ್ಸುಮ್ ಹಾಗೂ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!