ಸಾರ್ವಜನಿಕ ಗಣೇಶೋತ್ಸದ ವಿಸರ್ಜನೆಯ ವ್ಯವಸ್ಥೆಯನ್ನು ಆದರ್ಶ ರೀತಿಯಲ್ಲಿ ಮಾಡಲು ಕುಣಿಗಲ್ ಪುರಸಭೆಗೆ ಹಿಂದೂ ಜನಜಾಗೃತಿ ಸಮಿತಿಯಿಂದ ಮನವಿ !

ಕುಣಿಗಲ್ : ಗಣೇಶ ಚತುರ್ಥಿಯ ವೇಳೆ ಸಾರ್ವಜನಿಕ ಗಣೇಶೋತ್ಸವವನ್ನು ಬಹುದೊಡ್ಡ ಪ್ರಮಾಣದಲ್ಲಿ ಆಚರಿಸಲಾಗುತ್ತದೆ. ಸಡಗರ ಸಂಭ್ರಮದಿಂದ ಆಚರಣೆಯನ್ನು ಮಾಡುವ ಈ ಉತ್ಸವದಲ್ಲಿ, ಗಣೇಶನ ವಿಸರ್ಜನೆಯ ವಿಷಯ ಬಂದಾಗ, ನಮ್ಮಲ್ಲಿ ಧರ್ಮಶಾಸ್ತ್ರದಲ್ಲಿ ಹೇಳಿರುವಂತೆ ವಿಸರ್ಜನೆ ಮಾಡುವುದರ ಉತ್ತಮ ವ್ಯವಸ್ಥೆ ಇಲ್ಲದ ಕಾರಣ, ಗಣೇಶನ ಅಪಮಾನವನ್ನು ಸಹ ನೋಡಬೇಕಾಗುತ್ತದೆ. ಈ ವ್ಯವಸ್ಥೆಯನ್ನು ಬದಲಿಸಿ ಶಾಸ್ತ್ರದಲ್ಲಿ ಹೇಳಿದಂತೆ ಗಣೇಶ ವಿಸರ್ಜನೆಗೆ ಉತ್ತಮ ಮತ್ತು ಸುರಕ್ಷಿತ ವ್ಯವಸ್ಥೆ ಮಾಡಿಕೊಡಬೇಕೆಂದು ಉದ್ದೇಶಿಸಿ ಕುಣಿಗಲ್ ಪುರಸಭೆಗೆ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಮನವಿ ನೀಡಲಾಯಿತು !

ಈ ಮನವಿಯಲ್ಲಿ ಹಿಂದೂ ಧರ್ಮಶಾಸ್ತ್ರದಂತೆ ಗಣೇಶನ ಮೂರ್ತಿಯ ವಿಸರ್ಜನೆಯನ್ನು ಹರಿಯುವ ನೀರಿನಲ್ಲಿ ಮಾಡಬೇಕೆಂದಿದೆ. ಆದರೆ ಕೆಲವರು ಇದರ ಬಗ್ಗೆ ಪರಿಸರ ಮಾಲಿನ್ಯದ ನೆಪವೊಡ್ಡಿ ಹರಿಯುವ ನೀರಿನಲ್ಲಿ ವಿಸರ್ಜಿಸುವ ಬದಲು ಕೆರೆ ಮತ್ತು ಸರೋವರಗಳಲ್ಲಿ ಹಾಗೂ ಕೃತಕ (ಮೊಬೈಲ) ಟ್ಯಾಂಕ್ ವ್ಯವಸ್ಥೆಯನ್ನು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮಾಡಲಾಗುತ್ತದೆ. ಸರಕಾರವು ಇದರ ಬಗ್ಗೆ ಗಮನವಹಿಸಿ ಹರಿಯುವ ನೀರಿನಲ್ಲಿ ಗಣೇಶ ವಿಸರ್ಜನೆಯ ವ್ಯವಸ್ಥೆ ಮಾಡಿಕೊಡಬೇಕು ಜೊತೆಗೆ ಈ ವೇಳೆಯಲ್ಲಿ ಅಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಗಮನಹರಿಸಬೇಕು. ಮೂರ್ತಿಕಾರರಿಗೆ ಪ್ಲಾಸ್ಟರ್ ಆಫ್ ಪ್ಯಾರೀಸ್ ನ ಮೂರ್ತಿ ಮಾಡದೇ ಮಣ್ಣಿನ ಮೂರ್ತಿಯನ್ನೇ ಮಾಡುವಂತೆ ಪ್ರೇರೇಪಿಸಿ ಅದಕ್ಕಾಗಿ ಅವರಿಗೆ ಸರಕಾರದ ವತಿಯಿಂದ ಅನುದಾನ ನೀಡಬೇಕು ಎಂದು ಆಗ್ರಹಿಸಲಾಯಿತು.

ಈ ವೇಳೆ ಕುಣಿಗಲ್ ಪುರಸಭೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀ. ಪಿ. ಶಿವಪ್ರಸಾದ್ ರವರಿಗೆ ಪುರಸಭೆಯ ಸದಸ್ಯರಾದ ಶ್ರೀ. ಸುರೇಶ್, ಬಜರಂಗದಳದ ಶ್ರೀ. ಗಿರೀಶ್ ಹಾಗೂ ವಾಹನ ಚಾಲಕ ಸಂಘದ ಶಿವು, ಶ್ರೀ ರಮೇಶ್, ಓಂ ಯುವಸೇನೆಯ ಶ್ರೀ. ಮಂಜುನಾಥ್ ಹಿಂದೂ ಜನಜಾಗೃತಿ ಸಮಿತಿಯ ಶ್ರೀ ಅರುಣ್ ಗೌಡ, ಶಶಿಧರ್ ಆಚಾರ್ಯ ಹಾಗೂ ಪ್ರತಿಭಾ ಸುಧಾಕರ್ ಮತ್ತು ಧರ್ಮಪ್ರೇಮಿಗಳಾದ ಶ್ರೀ. ಮಂಜುನಾಥ್ ಇವರು ಮನವಿ ನೀಡಿದರು.

Leave a Reply

Your email address will not be published. Required fields are marked *

error: Content is protected !!