ತುಮಕೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ತಂಟೆಗೆ ಬಂದರೆ ಇಡೀ ರಾಜ್ಯವೇ ಹೊತ್ತಿ ಉರಿಯುತ್ತದೆ ಎಂದು ನಗರದಲ್ಲಿ ಮಾಜಿ ಶಾಸಕ ಕೆ.ಎನ್. ರಾಜಣ್ಣ ಹೇಳಿದರು. ಅವರು ಮಾಜಿ ಸಿ.ಎಂ.ಸಿದ್ಧರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿ ಸಿದ್ಧರಾಮಯ್ಯನವರ ಕಾರಿನ ಮೇಲೆ ಕಿಡಿಗೇಡಿಗಳು ಮೊಟ್ಟೆ ಎಸೆದು ಸಣ್ಣತನ ಪ್ರದರ್ಶಿಸಿದ್ದಾರೆ. ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಲು ಹೋದ ನಾಯಕರಿಗೆ ಈ ರೀತಿ ಮಾಡುವುದು ಸರಿಯಲ್ಲ.
ನಮ್ಮ ಕಾರ್ಯಕರ್ತರೂ ಸಹ ಏನು ಬೇಕಾದರೂ ಮಾಡಬಲ್ಲರು, ಆದರೆ ಕಾನೂನು ಕೈಗೆತ್ತಿಕೊಳ್ಳಬಾರದೆಂಬ ಉದ್ದೇಶದಿಂದ ಸುಮ್ಮನಿದ್ದೇವೆ. ಇದನ್ನು ಬಿಜೆಪಿಯವರು ಮುಂದುವರೆಸಿದರೆ ರಾಜ್ಯದಾದ್ಯಂತ ಅವರು ಒಂದು ಕಾರ್ಯಕ್ರಮ ಮಾಡಲು ಬಿಡುವುದಿಲ್ಲ. ಈ ಪ್ರಕರಣವನ್ನು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದೇವೆ.
ಸಿದ್ದರಾಮಯ್ಯರ ಮೇಲೆ ಹಲ್ಲೆ ಮಾಡಲು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಕುಮ್ಮಕ್ಕು ಕೊಡುವುದು ಕಂಡು ಬಂದರೆ ಪ್ರತಿಭಟನೆ ಮಾಡುತ್ತೇವೆ. ಸಮಾನ ಮನಸ್ಕರು ಸೇರಿ ಏನು ಮಾಡಬೇಕು ಎಂದು ಕುಳಿತು ಚರ್ಚೆ ಮಾಡುತ್ತೇವೆ ಎಂದರು.
ಮಾಡಿರುವ ತಪ್ಪನ್ನು ತಿದ್ದಿಕೊಂಡು ಮುಂದೆ ಸರಿ ಹೋದರೆ ಸರಿ. ಇಲ್ಲದಿದ್ರೆ ಮೊಟ್ಟೆಯನ್ನೇ ಎಸೆಯುತ್ತೇವೆ ಎಂದರೆ ನಮ್ಮ ಕೈಗೆ ಏನು ಸಿಗುತ್ತದೆಯೋ ಅದನ್ನು ನಾವು ಎಸೆಯುತ್ತೇವೆ. ಕಲ್ಲು ಸಿಗುತ್ತದೆಯೋ, ಮತ್ತೊಂದು ಸಿಗುತ್ತದೆಯೋ ಅದರಲ್ಲೇ ಎಸೆಯುತ್ತೇವೆ ಎಂದು ಮಾಜಿ ಶಾಸಕ ಕೆ.ಎನ್ ರಾಜಣ್ಣ ಎಚ್ಚರಿಕೆ ನೀಡಿದರು.