ತುಮಕೂರು: ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ 2022-23ನೇ ಸಾಲಿಗೆ ಅರಿವು ಶೈಕ್ಷಣಿಕ ಸಾಲ ಯೋಜನೆ ಮತ್ತು ಸ್ವಯಂ ಉದ್ಯೋಗ ನೇರಸಾಲ ಯೋಜನೆಯಡಿ ಆರ್ಯವೈಶ್ಯ ಸಮುದಾಯದ ಜನರಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರಿವು ಶೈಕ್ಷಣಿಕ ಸಾಲ ಯೋಜನೆಯಲ್ಲಿ ಇಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ ಇತ್ಯಾದಿ ವೃತ್ತಿಪರ ಪದವಿ ಹಾಗೂ ಸ್ನಾತಕೋತ್ತರ ಪದವಿಗಳಲ್ಲಿ ಸಿ.ಇ.ಟಿ/ಎನ್.ಇ.ಇ.ಟಿ ಮೂಲಕ ಆಯ್ಕೆಯಾಗಿ ವೃತ್ತಿಪರ ಪಿ.ಹೆಚ್.ಡಿ. ಕೋರ್ಸ್ನಲ್ಲಿ ವ್ಯಾಸಂಗ ಮಾಡುತ್ತಿರುವ ಆರ್ಯವೈಶ್ಯ ಸಮುದಾಯದ ವಿದ್ಯಾರ್ಥಿಗಳಿಗೆ ವಾರ್ಷಿಕ ಶೇ.2ರ ಬಡ್ಡಿ ದರದಲ್ಲಿ ವಾರ್ಷಿಕ ಗರಿಷ್ಠ ರೂ.1,00,000/-ಗಳ ಶೈಕ್ಷಣಿಕ ಸಾಲವನ್ನು ಮಂಜೂರು ಮಾಡಲಾಗುವುದು. ಸದರಿ ಯೋಜನೆಯಲ್ಲಿ ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಮತ್ತು ನಗರ ಪ್ರದೇಶದವರಿಗೆ ರೂ.6,00,000/-ಗಳ ಮಿತಿಯೊಳಗಿರಬೇಕು. ವಯೋಮಿತಿ 35 ವರ್ಷದ ಒಳಗಿರಬೇಕು. ವ್ಯಾಸಂಗ ಪೂರ್ಣಗೊಂಡ 04 ತಿಂಗಳ ವಿರಾಮ ಅವಧಿ ಇರುತ್ತದೆ. ನಂತರ ಸಾಲವನ್ನು 36 ಮಾಸಿಕ ಕಂತುಗಳಲ್ಲಿ ಮರುಪಾವತಿಸಬೇಕು. ಅರ್ಜಿ ಸಲ್ಲಿಸಬಯಸುವ ವಿದ್ಯಾರ್ಥಿಗಳು ಆಗಸ್ಟ್ 8 ರಿಂದ ಸೆಪ್ಟೆಂಬರ್ 11ರೊಳಗೆ ವೆಬ್ಸೈಟ್: kacdc.karnataka.gov.in ಮೂಲಕ ಸಲ್ಲಿಸಬೇಕು.
ಸ್ವಯಂ ಉದ್ಯೋಗ ನೇರಸಾಲ ಯೋಜನೆಯಡಿ ಅರ್ಜಿ ಸಲ್ಲಿಸಬಯಸುವವರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಮತ್ತು ನಗರ ಪ್ರದೇಶದವರಿಗೆ ರೂ.3,00,000/-ಗಳ ಒಳಗಿರಬೇಕು. ಅರ್ಜಿದಾರರ ವಯಸ್ಸು 10 ರಿಂದ 45 ವರ್ಷದ ಒಳಗಿರಬೇಕು. ಈ ಯೋಜನೆಯಲ್ಲಿ ಕನಿಷ್ಠ ರೂ. 50,000/-ಗಳಿಂದ ಗರಿಷ್ಠ ರೂ.1,00,000/-ಗಳ ಸಾಲ ಒದಗಿಸಲಾಗುವುದು. ಈ ಮೊತ್ತದಲ್ಲಿ ಶೇ.20ರಷ್ಟು ಸಹಾಯಧನ ಹಾಗೂ ಶೇ.80ರಷ್ಟು ಸಾಲವನ್ನು ವಾರ್ಷಿಕ ಶೇ.4ರ ಬಡ್ಡಿ ದರದಲ್ಲಿ ಮಂಜೂರು ಮಾಡಲಾಗುವುದು. 2 ತಿಂಗಳ ವಿರಾಮ ಅವಧಿ, 35 ಮಾಸಿಕ ಕಂತುಗಳಲ್ಲಿ ಮರುಪಾವತಿ ಮಾಡಬೇಕು. ನಮೂನೆ-ಜಿಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆದಿದ್ದು, ಚಾಲ್ತಿಯಲ್ಲಿರಬೇಕು. ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು. ಆಧಾರ್ಗೆ ಮೊಬೈಲ್ ಸಂಖ್ಯೆ ಜೋಡಣೆಯಾಗಿರಬೇಕು. ಆಧಾರ್ಗೆ ಬ್ಯಾಂಕ್ ಖಾತೆಯು ಜೋಡಣೆಯಾಗಿರಬೇಕು (Linking) ಮತ್ತು ಖಾತೆಯು ಆಧಾರ್ಗೆ ಸೀಡಿಂಗ್ (Seeding) ಆಗಿರಬೇಕು. ಸದರಿ ಯೋಜನೆಯಲ್ಲಿ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ ೧೧, ೨೦೨೨ ಕೊನೆಯ ದಿನವಾಗಿದ್ದು, ವೆಬ್ಸೈಟ್ www.kacdc.karnataka.gov.in ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರ ಕಛೇರಿ, ಜಿಲ್ಲಾ ಪಂಚಾಯತ್ ಕಛೇರಿ ಮುಂಭಾಗ, ಬಿ.ಹೆಚ್.ರೋಡ್, ತುಮಕೂರು. ಕಛೇರಿ ದೂರವಾಣಿ ಸಂಖ್ಯೆ 0816-2005008 ಅಥವಾ ನಿಗಮದ ಸಹಾಯವಾಣಿ 9448451111 ಅನ್ನು ಸಂಪರ್ಕಿಸಬಹುದಾಗಿದೆ ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.