ಯಾವ ವಿಷಯದ ಬಗ್ಗೆ ಮನುಷ್ಯನಿಗೆ ಪ್ರೇಮವಿರುತ್ತದೆಯೋ ಆ ವಿಷಯದ ಅನುಸಂಧಾನವು ಸಹಜವಾಗಿಯೇ ಉಳಿಯುತ್ತದೆ . ಅದು ಎಷ್ಟು ಉಳಿಯುತ್ತದೆಂದರೆ ಆ ಅನುಸಂಧಾನ ನನಗೆ ಇರಬೇಕೆಂಬ ಅರಿವು ಕೂಡ ಉಳಿಯುವದಿಲ್ಲ . *”ಅನುಸಂಧಾನ ಇಡುತ್ತೇನೆ ”* ಎನ್ನುವಾಗ ನಾನು ಅದರಿಂದ ಬೇರೆಯಾಗಿರುತ್ತೇನೆ . ಆದರೆ ಪ್ರೇಮದ ಅನುಸಂಧಾನದಲ್ಲಿ ನಾನು ಅದರೊಂದಿಗೆ ಏಕರೂಪವಾಗಿಬಿಡುತ್ತೇನೆ . ನಾವು ಎಷ್ಟೇ ಅವಸರದಲ್ಲಿದ್ದರೂ ದಾರಿಯಲ್ಲಿ ಹೋಗುವಾಗ ಯಾರಾದರೂ ನಮ್ಮ ಹೆಸರಿನಿಂದ ಕರೆದರೆ ನಾವು ಹಿಂದೆ ತಿರುಗಿ ನೋಡುತ್ತೇವೆ . ಇದೇ ನಮ್ಮ ಅನುಸಂಧಾನವಾಗಿರುತ್ತದೆ . ಏಕೆಂದರೆ ನಮಗೆ ಈ ದೇಹದ ಮೇಲೆ ಎಷ್ಟು ಪ್ರೇಮವಿರುತ್ತದೆಂದರೆ ನಾವು ಇದಕ್ಕಿಂತ ಬೇರೆ ಆಗಿರುವದೇ ಇಲ್ಲ . ಈ ರೀತಿಯಾಗಿ ದೇಹದ ಅನುಸಂಧಾನವನ್ನು ಹೇಗೆ ಇಟ್ಟುಕೊಳ್ಳಬೇಕೆಂದು ಹೇಳಬೇಕಾಗುವುದೇ ಇಲ್ಲ . ‘ *ದೇಹವನ್ನು ಮರೆಯಿರಿ* ‘ ಎಂದು ಹೇಳಬೇಕಾಗುತ್ತದೆಯೇ ಹೊರತು ದೇಹದ ಸ್ಮರಣೆ ಮಾಡಿರಿ ಎಂದು ಹೇಳಬೇಕಾಗುವದಿಲ್ಲ .
ನಮಗೆ ಭಗವಂತನ ಅನುಸಂಧಾನವನ್ನಿಟ್ಟುಕೊಳ್ಳಬೇಕಾಗಿದೆ . ಇದು ಒಂದು ಪ್ರಕಾರದ ಅಭ್ಯಾಸವಾಗಿರುತ್ತದೆ . ಭಗವಂತನ ಪ್ರೇಮ ಬೆಳೆದರೆ ಅನುಸಂಧಾನವು ಉಳಿಯುತ್ತದೆ . ಪರೀಕ್ಷೆಯಲ್ಲಿ ಉತ್ತೀರ್ಣವಾಗುವದಕ್ಕಾಗಿ ಅಭ್ಯಾಸ ಮಾಡಬೇಕಾಗುತ್ತದೆ . ಅದರಂತೆ ಭಗವಂತನ ಪ್ರೇಮ ಬೆಳೆಸುವದಕ್ಕಾಗಿ ಅಭ್ಯಾಸ ಮಾಡುವದು ಅವಶ್ಯವಿರುತ್ತದೆ . ಇದಕ್ಕಾಗಿ ನಾನು ಮಾಡುವದೆಲ್ಲವನ್ನೂ ಭಗವಂತನ ಸಾಕ್ಷಿತ್ವದಲ್ಲಿಯೇ ಮಾಡುತ್ತೇನೆಂಬ ಅರಿವನ್ನು ಇಟ್ಟುಕೊಂಡು ಮಾಡಬೇಕಾಗುತ್ತದೆ . ಇದೆಲ್ಲವನ್ನು ಮಾಡುವಾಗ ಭಗವಂತನ ಸ್ಮರಣೆ ಇಟ್ಟುಕೊಂಡು ಮಾಡುವದು ನಮ್ಮ ನಿಜವಾದ ಕರ್ತವ್ಯವಾಗಿರುತ್ತದೆ .
ನಾವು ಸರ್ಕಸ್ಸಿನಲ್ಲಿ ಹುಲಿ , ಸಿಂಹ , ಕುದುರೆ , ಆನೆ ಮುಂತಾದ ಪ್ರಾಣಿಗಳೆಲ್ಲ ಆಟವಾಡುವದನ್ನು ನೋಡುತ್ತೇವೆ . ” *ಕುದುರೆ ಎಷ್ಟು ಸುಂದರವಾಗಿ ಕುಣಿಯುತ್ತದೆ .* ” ಅನ್ನುತ್ತೇವೆ . ಆದರೆ ಆ ಕುದುರೆಯ ಗಮನವು ಪ್ರೇಕ್ಷಕರ ಕಡೆಗೆ ಇರುವುದಿಲ್ಲ , ಆ ಕುದುರೆಯಾಗಲಿ , ಹುಲಿಯದಾಗಲಿ ಅಥವಾ ಆನೆಯದಾಗಲಿ ಸಂಪೂರ್ಣ ಲಕ್ಷ್ಯವು ಕೈಯಲ್ಲಿ ಚಬಕ ಹಿಡಿದುಕೊಂಡು ನಿಂತಿರುವ ಮನುಷ್ಯನ ಕಡೆಗೆ ಇರುತ್ತದೆ . ಅವು ಪ್ರೇಕ್ಷಕರು ಏನೆನ್ನುತ್ತಾರೆ ಎನ್ನುವದರ ಕಡೆಗೆ ನೋಡುವದಿಲ್ಲ . ಅದರಂತೆ ನಾವು ಭಗವಂತನು ಏನನ್ನುತ್ತಾನೆ ಎನ್ನುವದರ ಕಡೆಗೆ ನೋಡುವದಿಲ್ಲ . ಜಗತ್ತು ಏನೆನ್ನುತ್ತದೆ ಅನ್ನುವದರ ಕಡೆಗೆ ನೋಡುತ್ತೇವೆ . ನಾವು ಈ ಪ್ರವೃತ್ತಿಯನ್ನು ಬಿಟ್ಟಿದ್ದಾದರೆ ಮಾತ್ರ ಭಗವಂತನಿಗೆ ಏನು ಬೇಕಾಗಿದೆ ಎಂಬುದು ನಮಗೆ ಸರಿಯಾಗಿ ತಿಳಿಯುತ್ತದೆ . ಭಗವಂತನ ಸ್ಮರಣೆಯಲ್ಲಿ ಕರ್ಮ ಮಾಡುವದರಿಂದ ಅವನಿಗೆ ಬೇಕಾದದ್ದೇ ನಮ್ಮಿಂದ ಆಗುತ್ತದೆ . ಅವನ ಸಂಧಾನವನ್ನು ಬಿಡದೇ ಕರ್ಮ ಮಾಡುವದೇ ಅನುಸಂಧಾನದ ಲಕ್ಷಣವಾಗಿರುತ್ತದೆ . ಇದು ಹೇಗೆ ಸಾಧಿಸುತ್ತದೆ ? ಅತ್ಯಂತ ಪ್ರೇಮದಿಂದ ಸಾಧಿಸುತ್ತದೆ .
ಒಬ್ಬ ಹೆಣ್ಣುಮಗಳು ತನ್ನ ಚಿಕ್ಕಮಗುವನ್ನು ತೊಟ್ಟಿಲದಲ್ಲಿ ಮಲಗಿಸಿ ಮನೆಯ ಹಿತ್ತಲದಲ್ಲಿ ಪಾತ್ರೆ ತೊಳೆಯುತ್ತಿದ್ದಳು . ಆ ಮಗುವು ಎಚ್ಚರವಾಗಿ ಸ್ವಲ್ಪ ಅಳಹತ್ತಿತು . ಮನೆಯಲ್ಲಿ ಬಹಳಷ್ಟು ಜನರಿದ್ದರು . ಆ ಮಗುವಿನ ಅಳುವು ಯಾರಿಗೂ ಕೇಳಿಸಲಿಲ್ಲ . ಅಷ್ಟರಲ್ಲಿ ಆ ಮಗುವಿನ ತಾಯಿ ಓಡುತ್ತ ತೊಟ್ಟಿಲ ಹತ್ತಿರ ಬಂದು ” *ಮಗು ಎದ್ದಂತೆ ಕಾಣುತ್ತದೆ* ” ಎಂದಳು . ಕೆಲಸ ಮಾಡುವಾಗಲೂ ಅವಳ ಕಿವಿಗಳು ತೊಟ್ಟಿಲದ ಕಡೆಗೇ ಇದ್ದವು . ಅದರಂತೆ ಪ್ರಪಂಚ ಮಾಡುವಾಗಲೂ ನಮ್ಮ ಲಕ್ಷ್ಯವು ಭಗವಂತನ ಕಡೆಗೆ ಇರಬೇಕು , ಇದಕ್ಕೆ ಅನುಸಂಧಾನವೆನ್ನುತ್ತಾರೆ .
ಮುಖದಲ್ಲಿ ಅಖಂಡ ರಾಮನಾಮ , ಅಂತಃಕರಣದಲ್ಲಿ ಇರಬೇಕು ಅನುಸಂಧಾನ ಹಾಗೂ ದೇಹದಿಂದ ಮಾಡಬೇಕು ಪ್ರಪಂಚದ ಕರ್ಮ
ಜೈ ಜೈ ರಘುವೀರ ಸಮರ್ಥ
ಶ್ರೀ ನಾರಾಯಣ ಗೌಡ ಬೆಂಗಳೂರು
9972928619