ತುಮಕೂರು: ನನಗಿರುವ ಮಾಹಿತಿ ಪ್ರಕಾರ ಕುಮಾರಸ್ವಾಮಿ ಮನೆಯವರೇ ನಾಟಕ ಮಾಡ್ತಿದ್ದಾರೆ. ನನ್ನನ್ನು ಮುಗಿಸಬೇಕು ಅಂತಾ ಹೇಳಿ ಅವರೇ ತಮಗೆ ಬೇಕಾದವರಿಂದ ಕ್ರಾಸ್ ವೋಟಿಂಗ್ ಮಾಡಿಸಿದ್ದಾರೆ ಎಂದು ಜೆಡಿಎಸ್ ನ ಅಸಮಾಧಾನಿತ ಶಾಸಕ ಶ್ರೀನಿವಾಸ್ ಹೇಳಿಕೆ ನೀಡಿದ್ದಾರೆ.
ಕ್ರಾಸ್ ವೋಟಿನ ವಿಚಾರವಾಗಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಾನು ಬ್ಯಾಲೆಟ್ ಪೇಪರ್ ತೋರಿಸುವಾಗ ಸರಿಯಾಗಿಯೇ ತೋರಿಸಿದ್ದೇನೆ, ಮೂರ್ನಾಲ್ಕು ನಿಮಿಷ ಹಿಡಿದುಕೊಂಡಿದ್ದೇನೆ. ಅದಾದ ಮೇಲೆ ಹೋಗಿ ವೋಟ್ ಹಾಕಿದ್ದೇನೆ. ಅವನೇನು ಕತ್ತೆ ಕಾಯುತ್ತಿದ್ದನಾ…? ಹೆಬ್ಬೆಟ್ಟು ತೆಗಿ ಅನ್ನಬೇಕಿತ್ತು. ನನಗಿರುವ ಮಾಹಿತಿ ಪ್ರಕಾರ ಕುಮಾರಸ್ವಾಮಿ ಮನೆಯವರೇ ನಾಟಕ ಮಾಡ್ತಿದ್ದಾರೆ ಎಂದು ಶ್ರೀನಿವಾಸ್ ಕುಮಾರಸ್ವಾಮಿ ವಿರುದ್ಧ ಏಕ ವಚನದಲ್ಲಿಯೇ ವಾಗ್ದಾಳಿ ನಡೆಸಿದರು.
ಕುಮಾರಸ್ವಾಮಿ ನನ್ನ ಮೇಲೆ ಗೂಬೆ ಕೂರಿಸುವ ಕೆಲಸ ಮಾಡ್ತಿದ್ದಾರೆ. ನನಗೂ, ಅವರಿಗೂ ಆಗೊಲ್ಲ ಅನ್ನೋದು ಗೊತ್ತು. ಈಗಾಗಲೇ ನನ್ನನ್ನು ಸೋಲಿಸಲೇ ಬೇಕು ಅಂತಾ ಷಡ್ಯಂತರ ಮಾಡಿದ್ದಾರೆ. ಇದು ಕೂಡ ಅದೇರೀತಿ ಷಡ್ಯಂತರ. ಇದೇ ಕುಮಾರಸ್ವಾಮಿ ಕ್ರಾಸ್ ವೋಟಿಂಗ್ ಮಾಡ್ಸಿ, ನನ್ನ ಮೇಲೆ ಹಾಕುತ್ತಿದ್ದಾರೆ. ಅವರಿಗೆ ಗೊತ್ತಿತ್ತು ತಮ್ಮ ಅಭ್ಯರ್ಥಿ ಗೆಲ್ಲಲ್ಲ ಅಂತಾ, ಹೀಗಾಗಿ, ನನ್ನ ಮೇಲೆ ಗೂಬೆ ಕೂರಿಸಿ ತೇಜೋವಧೆ ಮಾಡುವ ಪ್ರಯತ್ನ ಮಾಡಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ನಾನು ಇವನಿಗೆ ಹೆದರಿಕೊಂಡು ಅಥವಾ ಬೇರೆ ಯಾರಿಗೋ ಹೆದರಿಕೊಂಡು ಯಾರಿಗೂ ಕಚ್ಚೆ ಕಟ್ಟಲ್ಲ. ನನ್ನ ಮನಃಸಾಕ್ಷಿ ವಿರುದ್ಧ ನಾನು ನಡೆಯಲ್ಲ. ನಾಚಿಕೆ ಇಲ್ಲ, ಮಾನ, ಮರ್ಯಾದೆ ಇಲ್ಲ. ಘಳಿಗೆಗೊಂಡು, ಗಂಟೆಗೊಂದು ಹೇಳಿಕೊಂಡು ತಿರುಗುತ್ತಾನೆ. ಇವನನ್ನ ಯಾರಾದ್ರೂ ಲೀಡರ್ ಅಂತಾ ಹೇಳ್ತಾರಾ..? ನಾನು ಬಿಜೆಪಿಯನ್ನು ಪ್ರಾರಂಭದಿಂದಲೂ ವಿರೋಧ ಮಾಡಿಕೊಂಡು ಬಂದಿದ್ದೇನೆ. ಆಪರೇಷನ್ ಕಮಲ ನಿಲ್ಲಿಸಿದ್ದೆ ನಾನು. ಹಾಕಿದ್ರೆ ನಾನು ಕಾಂಗ್ರೆಸ್ ಗೆ ಹಾಕಿರುತ್ತೇನೆ. ನಾನೇನು ಇವನಿಗೆ ಹೆದರಿಕೊಳ್ಳಬೇಕಾ…? ನನ್ನ ವಿರುದ್ಧ ಅಭ್ಯರ್ಥಿಯನ್ನು ಹಾಕಿದ್ದ ಮೇಲೆ ಹೆದರಿಕೊಳ್ಳುವುದು ಹೇಗೆ ಬಂತು. ಕುಮಾರಸ್ವಾಮಿ ನಾನು ಹೆಬ್ಬೆಟ್ಟು ಇಟ್ಟುಕೊಂಡಿರೋದನ್ನ ನೋಡಿದ್ನಾ…? ಎಲ್ಲವನ್ನೂ ಕಲ್ಪನೆ ಮಾಡಿಕೊಂಡು ಹೇಳ್ತಾನೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಇವನು ಅನಿರೀಕ್ಷಿತವಾಗಿ ಮುಖ್ಯಮಂತ್ರಿ ಆದವನು. ಯೋಗ್ಯತೆಯಿಂದ ಮುಖ್ಯಮಂತ್ರಿ ಆದವನಲ್ಲ.ಇನ್ನೊಂದು ಜನ್ಮ ಎತ್ತಿಬಂದರೂ ಇವನ ಪಕ್ಷ ಬಹುಮತ ಬರಲ್ಲ. ಒಕ್ಕಲಿಗರನ್ನ ತುಳಿಯೋದೇ ಇವನ ಒನ್ ಪಾಯಿಂಟ್ ಅಜೆಂಡಾ. ಒಳ್ಳೆಯ ಕಾರು, ಒಳ್ಳೆಯ ಬಟ್ಟೆ ಹಾಕಿಕೊಂಡು ಹೋದ್ರೆ, ಅವರ ಕೆಂಗಣ್ಣಿಗೆ ಗುರಿಯಾಗಿ ಹೋಗ್ತೇವೆ. ಪಕೀರರು, ಪೇಪರ್ ಆಯೋರು ಇರ್ತಾರಲ್ಲ ಆ ತರಾ ಇರಬೇಕು. ಉಟ್ರೆ, ಬೈಟ್ರೆ ಅಂತಿದ್ರೆ ಕೊನೆಯ ತನಕಾ ಇಟ್ಕೊಂಡ್ತಾರೆ ಎಂದು ಅವರು ಗಂಭೀರ ಆರೋಪ ಮಾಡಿದರು.
ಇನ್ನು ಮುಂದೆ ನೋಡಲಿ, ಎಲ್ಲವನ್ನೂ ಬಿಚ್ಚಿಡುತ್ತೇವೆ. ಯಾವುದರಲ್ಲಿ ಪರಿಶುದ್ಧವಾಗಿ ಅವ್ನೆ, ಕಚ್ಚೆ ಸರಿಯಿಲ್ಲ. ಬಾಯಿ ಸರಿ ಇಲ್ಲ. ಏನು ನೈತಿಕತೆ ಇದೆ. ಇನ್ನೊಬ್ಬರ ಬಗ್ಗೆ ಮಾತನಾಡೋಕೆ. ಇವರದು ಏನು ಇದೆ ಅದನ್ನ ನೋಡಿಕೊಳ್ಳಬೇಕು. ಇವನ ವಿರುದ್ಧ ಹೋರಾಟ ಮಾಡೋದೆ ನನ್ನ ಮುಂದಿನ ನಡೆ. ನಾನು ಸೋತರೂ ಪರವಾಗಿಲ್ಲ. ಇವನ ಅಭ್ಯರ್ಥಿಯನ್ನು ಗೆಲ್ಲದೋಕೆ ಬಿಡೋಲ್ಲ. ಅವನೇ ಬಂದ್ರೂ ನಿಂತು ಗೆದ್ದುಬಿಡಲಿ, ನನ್ನ ಲೈಫ್‌ಲಾಂಗ್ ಅವರ ಮನೆಯಲ್ಲಿ ಕೂಲಿ ಮಾಡ್ತೇನೆ ಎಂದು ಸವಾಲು ಹಾಕಿದರು.