ತುಮಕೂರು : ನಗರದ ಶ್ರೀ ಸಿದ್ಧಾರ್ಥ ವೈದ್ಯಕೀಯ ಆಸ್ಪತ್ರೆಯಲ್ಲಿ ಮೈಸೂರು ಮೂಲದ ಮೋಹನ್‌ಕುಮಾರಿ (55) ಮಹಿಳೆಯ ತೊಡೆಯಲ್ಲಿದ್ದ 6 ಕೆ.ಜಿ ಗಡ್ಡೆಯನ್ನು ಹೊರತೆಗೆಯುವಲ್ಲಿ ಶ್ರೀ ಸಿದ್ಧಾರ್ಥ ವೈದ್ಯಕೀಯ ಆಸ್ಪತ್ರೆಯ ಕೀಲು ಮತ್ತು ಮೂಳೆ ವಿಭಾಗದ ವೈದ್ಯ ಡಾ.ಕಿರಣ್ ಕಾಳಯ್ಯ ಅವರ ನೇತೃತ್ವದ ತಂಡ ಯಶಸ್ವಿಯಾಗಿದೆ.
ಮೈಸೂರಿನ (55) ವರ್ಷದ ಮೋಹನ್‌ಕುಮಾರಿ ಅವರು ಮೂರು ವರ್ಷದಿಂದ ಕಾಲು ನೋವು ಸಮಸ್ಯೆಯಿಂದ ಬಳಲುತ್ತಿದ್ದು, ಫ್ಯಾಮಿಲಿ ವೈದ್ಯರು ಹಾಗೂ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರೂ ಚಿಕಿತ್ಸೆ ಫಲಕಾರಿಯಾಗದ ಕಾರಣ ಶ್ರೀ ಸಿದ್ಧಾರ್ಥ ವೈದ್ಯಕೀಯ ಆಸ್ಪತ್ರೆಗೆ ತೆರಳಿ ವೈದ್ಯರ ಸಲಹೆ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಎಲ್ಲ ರೀತಿಯ ಪರೀಕ್ಷೆಗೊಳಪಡಿಸಿದ ಡಾ.ಕಿರಣ್ ಕಾಳಯ್ಯ ಅವರ ನೇತೃತ್ವದ ತಂಡ ಎರಡು ದಿನಗಳ ಕಾಲ ಎಲ್ಲ ರೀತಿಯ ಮುಂಜಾಗ್ರತೆ ಕ್ರಮಗಳೊಂದಿಗೆ ಶಸ್ತ್ರಚಿಕಿತ್ಸೆಗೊಳಪಡಿಸಿದಾಗ, ಕಾಲಿನಲ್ಲಿ ಗಡ್ಡೆ ಇರುವುದು ಕಂಡುಬಂದಿದ್ದು, ಗಡ್ಡೆಯ ಉದ್ದ ಅಳತೆ 35 ಸೆ.ಮಿ. ಸುತ್ತಳತೆ 36 ಸೆ.ಮಿ. ಇರುವುದು ದೃಢಪಟ್ಟಿದೆ. ಡಾ.ಕಿರಣ್ ಕಾಳಯ್ಯ ಅವರ ಮುಂದಳಾತ್ವದಲ್ಲಿ ಡಾ.ದಿವ್ಯ, ಡಾ.ಶ್ರೀಧರ್, ಡಾ.ರವಿಶಂಕರ್ ಜೆ, ಡಾ.ಗಂಗಾಧರಯ್ಯ, ಡಾ.ಪ್ರಕಾಶ್, ಡಾ.ಸ್ಮಿತಾ ಹಾಗೂ ಸಹಾಯಕರ ನೇತೃತ್ವದ ತಂಡದೊಂದಿಗೆ ಶಸ್ತ್ರಚಿಕಿತ್ಸೆ ನಡೆಸಿ ಯಶಸ್ವಿಯಾಗಿದೆ.
ಸುಸರ್ಜಿತ ಸಲಕರಣೆಗಳೊಂದಿಗೆ ನುರಿತ ವೈದ್ಯರ ತಂಡ ಕಾಲಿನಲ್ಲಿದ್ದ 6 ಕೆಜಿ ತೂಕದ ಗೆಡ್ಡೆಯನ್ನು ಶಸ್ತ್ರಚಿಕಿತ್ಸೆಯ ಮೂಲಕ ರಕ್ತನಾಳಗಳಿಗೆ ಹಾಗೂ ತೊಡೆಯ ಯಾವುದೆ ಭಾಗಕ್ಕೆ ತೊಂದರೆಯಾಗದಂತೆ ಗೆಡ್ಡೆಯನ್ನು ಯಶಸ್ವಿಯಾಗಿ ಹೊರತಗೆಯಲಾಗಿದ್ದು, ರೋಗಿಯು ಇದೀಗ ಗುಣಮುಖರಾಗಿದ್ದಾರೆ, ಇದೇ ಮೊದಲ ಬಾರಿಗೆ ದೊಡ್ಡ ಗಾತ್ರದ ಗಡ್ಡೆಯನ್ನು ಹೊರತೆಗೆಯಲಾಗಿದ್ದು, ಸಾರ್ವಜನಿಕರು ಇದರತ್ತ ಗಮನಹರಿಸಬೇಕು, ಪ್ರಾರಂಭದ ಹಂತದಲ್ಲಿಯೆ ಪ್ರತಿಯೊಂದಕ್ಕೂ ವೈದ್ಯರ ಸಲಹೆ ಸೂಚನೆ ಪಡೆಯಬೇಕು, ಇಲ್ಲವಾದಲ್ಲಿ ಕಾಯಿಲೆ ದೊಡ್ಡ ಹಂತಕ್ಕೆ ತಿರುಗಿ ತೀವ್ರವಾದ ನೋವು ಅನುಭವಿಸಬೇಕಾಗುತ್ತದೆ ಎಂದು ಡಾ.ಕಿರಣ್ ಕಾಳಯ್ಯ ಅಭಿಪ್ರಾಯ ತಿಳಿಸಿದರು.
ಎರಡು ದಿನಗಳ ಶಸ್ತ್ರಚಿಕಿತ್ಸೆಯ ಬಳಿಕ ರೋಗಿಯ ಆರೋಗ್ಯದ ಚೇತರಿಕೆಯನ್ನು ಗಮನಿಸಿ ರೋಗಿಯನ್ನು ಸೋಮವಾರ ಮನೆಗೆ ಕಳುಹಿಸಲಾಗಿದೆ. ಇದೇ ದೊಡ್ಡ ಗಾತ್ರದ ಗಡ್ಡೆಯು ಇದೇ ಮೊದಲ ಬಾರಿಗೆ ನೋಡಿದ್ದು, ಸಾರ್ವಜನಿಕರಿಗೆ ಅರಿವು ಮೂಡಿಸಲು ಮತ್ತು ಪ್ರಾರಂಭಿಕ ಹಂತದಲ್ಲಿಯೇ ವೈದ್ಯರನ್ನ ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳುವಂತೆ ಸಲಹೆ ನೀಡಿದರು.
ಶಸ್ತ್ರಚಿಕಿತ್ಸೆ ಪಡೆದ ಮೋಹನ್‌ಕುಮಾರಿ ಮಾತನಾಡಿ, ಮೂರು ವರ್ಷದ ನೋವಿಗೆ ಶ್ರೀ ಸಿದ್ಧಾರ್ಥ ವೈದ್ಯಕೀಯ ಆಸ್ಪತ್ರೆ ಪರಿಹಾರ ದೊರಕಿಸಿಕೊಟ್ಟಿದೆ. ಕಡಿಮೆ ಖರ್ಚಿನಲ್ಲಿ ಉತ್ತಮ ಚಿಕಿತ್ಸೆ ನೀಡಿದ್ದು, ಕಾಲಿನ ನೋವಿನ ಸಮಸ್ಯೆ ಸಂಪೂರ್ಣ ಕಡಿಮೆಯಾಗಿದೆ ನಾನು ಆರೋಗ್ಯವಾಗಿದ್ದೇನೆ. ಈ ಕಾರ್ಯಕ್ಕೆ ಸಹಕರಿಸಿದ ಡಾ.ಕಿರಣ್ ಕಾಳಯ್ಯ ಹಾಗೂ ಅವರ ತಂಡಕ್ಕೆ ಧನ್ಯವಾದಗಳು ಎಂದರು.
ಶ್ರೀ ಸಿದ್ಧಾರ್ಥ ವೈದ್ಯಕೀಯ ಆಸ್ಪತ್ರೆಯ ಕೀಲು ಮತ್ತು ಮೂಳೆ ವಿಭಾಗದ ತಜ್ಞರ ಈ ಕಾರ್ಯಕ್ಕೆ ಸಾಹೇ ವಿಶ್ವವಿದ್ಯಾನಿಲಯದ ಕುಲಾಧಿಪತಿ ಡಾ. ಜಿ. ಪರಮೇಶ್ವರ ಹಾಗೂ ರೋಗಿಯ ಕುಟುಂಬದವರು ವೈದ್ಯರ ನೇತೃತ್ವದ ತಂಡಕ್ಕೆ ಶುಭ ಹಾರೈಸಿದರು.
ವಿದೇಶಿ ತಂತ್ರಜ್ಞಾನ ಮತ್ತು ಆಧುನಿಕ ಸಲಕರಣೆಗಳನ್ನು ಉಪಯೋಗಿಸಿ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಗೊಳಿಸುವ ಮೂಲಕ ಮೆಡಿಕಲ್ ಕಾಲೇಜಿನ ವೈದ್ಯರು ಸಾಹಸಮಯ ಕಾರ್ಯಕ್ಕೆ ಮುಂದಾಗಿರುವುದು ತುಮಕೂರಿನಂತಹ ಗ್ರಾಮಾಂತರ ಪ್ರದೇಶದಲ್ಲಿಯೂ ಆರೋಗ್ಯ ಸೇವೆ ಸಿಗುತ್ತದೆ ಎಂಬುದಕ್ಕೆ ಖಾತರಿ ಒದಗಿಸುತ್ತದೆ ಎಂದು ಸಾಹೇ ವಿಶ್ವವಿದ್ಯಾನಿಲಯದ ಕುಲಾಧಿಪತಿ ಡಾ. ಜಿ. ಪರಮೇಶ್ವರ ಅವರು ವೈದ್ಯರ ನೇತೃತ್ವದ ತಂಡಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.