ಕಲಬುರ್ಗಿ : ತೀವ್ರ ಅನಾರೋಗ್ಯದ ಚಿಕಿತ್ಸೆಗೆ ಹೈದರಾಬಾದ್ ಆಥವಾ ಬೆಂಗಳೂರಿನ ಆಸ್ಪತ್ರೆಗಳನ್ನು ಅವಲಂಬಿಸಬೇಕಾದ ಕಲ್ಯಾಣ ಕರ್ನಾಟಕದ ಜನರ ಪರಿಸ್ಥಿತಿಯಲ್ಲಿ ಆಮೂಲಾಗ್ರ ಸುಧಾರಣೆಯನ್ನ ತರುವ ನಿಟ್ಟಿನಲ್ಲಿ ಕಳೆದೊಂದು ದಶಕಗಳಿಂದ ಅತ್ಯುತ್ತಮ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಯುನೈಟೆಡ್ ಆಸ್ಪತ್ರೆಯ ಪಾತ್ರ ಪ್ರಮುಖವಾದದ್ದು. ಜನರ ಕೈಗೆಟಕುವ ರೀತಿಯಲ್ಲಿ ಅತ್ಯತ್ತಮ ವೈದ್ಯಕೀಯ ಸೇವೆಯನ್ನು ನೀಡುವ ಅವರ ಕಾರ್ಯಕ್ಕೆ ನಿರಂತರವಾಗಿ ಸಾಗಲಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹಾರೈಸಿದರು.
ಇಂದು ಕಲಬುರ್ಗಿ ನಗರದ ಸಿದ್ದಾರ್ಥ ಕಾನೂನು ಕಾಲೇಜಿನ ಎದುರಿಗೆ ನಿರ್ಮಿಸಲಾದ ಯುನೈಟೆಡ್ ಆಸ್ಪತ್ರೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು. ಕಲ್ಯಾಣ ಕರ್ನಾಟಕ ಭಾಗದಲ್ಲಿ ವೈದ್ಯಕೀಯ ಸೇವೆಯನ್ನು ಲಭ್ಯತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಗಳು ಇತ್ತೀಚಿನ ದಿನಗಳಲ್ಲಿ ಆದ್ಯತೆ ನೀಡುತ್ತಿವೆ. 2018 ರಲ್ಲಿ ಜಯದೇವ ಆಸ್ಪತ್ರೆಯ ಶಾಖೆಯನ್ನು ಸ್ಥಾಪಿಸಲಾಯಿತು. ಇದಕ್ಕೂ ಮುನ್ನ ಈ ಭಾಗದ ಜನರು ಹೃದ್ರೋಗ, ಕ್ಯಾನ್ಸರ್ ಹಾಗೂ ಸೂಪರ್ ಸ್ಪೆಷಾಲಿಟಿ ಚಿಕಿತ್ಸೆಗೆ ಹೈದರಾಬಾದ್ ಅಥವಾ ಬೆಂಗಳೂರನ್ನು ಅವಲಂಬಿಸಬೇಕಾಗಿತ್ತು. ಆದರೆ, ಈ ಪರಿಸ್ಥಿತಿಯಲ್ಲಿ ಆಮೂಲಾಗ್ರ ಸುಧಾರಣೆಯನ್ನು ತರುವಲ್ಲಿ ಯುನೈಟೆಡ್ ಆಸ್ಪತ್ರೆ ಮುಖ್ಯ ಪಾತ್ರ ವಹಿಸಿದೆ ಎನ್ನುವುದು ಸಂತಸದ ವಿಷಯ. ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡ ವೈದ್ಯಕೀಯ ಸೌಲಭ್ಯ ನೀಡುತ್ತಿರುವ ಯುನೈಟೆಡ್ ಆಸ್ಪತ್ರೆ ಡಾ. ವಿಕ್ರಂ ಸಿದ್ದಾರೆಡ್ಡಿ ಅವರ ನೇತೃತ್ವದ ಯುವ ವೈದ್ಯರ ತಂಡ ಕೋವಿಡ್ ಸಂಧರ್ಭದಲ್ಲಿ ಈ ಭಾಗದ ಜನರಿಗೆ ನೀಡಿದ ಸೇವೆ ಶ್ಲಾಘನೀಯ. ಇಂತಹ ಸೇವಾ ಮನೋಭಾವ ಎಲ್ಲಾ ಯುವಕರಿಗೂ ಅದರ್ಶಪ್ರಾಯ ಎಂದು ಹೇಳಿದರು.
ಮಾಜಿ ಸಚಿವರಾದ ಸಿ ಎಂ ಇಬ್ರಾಹಿಂ ಮಾತನಾಡಿ, ಕಲ್ಯಾಣ ಕರ್ನಾಟಕ ದಲ್ಲಿ ಡಾ. ಸಿದ್ದಾರೆಡ್ಡಿ ಅವರು ನೀಡಿದ ವೈದ್ಯಕೀಯ ಸೇವೆ ಬಹಳ ಮಹತ್ವದ್ದು. ಆಗಿನ ಕಾಲದಲ್ಲಿ ಸರಿಯಾದ ಸೌಲಭ್ಯಗಳಿಲ್ಲದ ಸಂಧರ್ಭದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಸಂಚರಿಸಿ ಅವರು ಸೇವೆ ಸಲ್ಲಿಸಿದ್ದಾರೆ. ಈಗ ಅವರ ಮಗ ವಿಕ್ರಂ ಸಿದ್ದಾರೆಡ್ಡಿ ಯುವಕ ವೈದ್ಯರ ತಂಡವನ್ನು ಕಟ್ಟಿಕೊಂಡು ಆ ಸೇವೆಯನ್ನು ಮುಂದುವರೆಸಿದ್ದಾರೆ. ಕಷ್ಟದ ದಿನಗಳಲ್ಲಿ ಅವರು ಇಲ್ಲಿನ ಜನತೆಗೆ ನೀಡಿದ ವೈದ್ಯಕೀಯ ಸೇವೆ ಅದರ್ಶಪ್ರಾಯ. ಕೋವಿಡ್ ಸಂಧರ್ಭದಲ್ಲಿ ಅತ್ಯಾಧುನಿಕ ಚಿಕಿತ್ಸೆ ಯನ್ನು ಅಳವಡಿಸಿಕೊಂಡು ಸಾವಿರಾರು ಜನರ ಜೀವವನ್ನು ಉಳಿಸಿದ್ದಾರೆ ಎಂದು ಹೇಳಿದರು.
ಥೈರೋಕೆರ್ ಸಂಸ್ಥಾಪಕ ಡಾ. ಆರೋಕಿಯಾಸ್ವಾಮಿ ವೇಲುಮಣಿ ಮಾತನಾಡಿ, 2040 ರ ಒಳಗಾಗಿ ರಾಜ್ಯದ ಪ್ರತಿಜಿಲ್ಲೆಯಲ್ಲೂ ಆಸ್ಪತ್ರೆಯನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಯೋಚಿಸಿ. ಸಣ್ಣ ಗ್ರಾಮದವನಾದ ನಾನು ಪರಿಶ್ರಮ ಹಾಗೂ ಹೊಸ ಆಲೋಚನೆಗಳ ಮೂಲಕ 5 ಸಾವಿರ ಕೋಟಿ ರೂಪಾಯಿ ಮೌಲ್ಯದ ಕಂಪನಿಯನ್ನು ಕಟ್ಟಿದ್ದೇನೆ. ದೊಡ್ಡದಾಗಿ ಯೋಚನೆ ಮಾಡುವುದರಿಂದ ಸಾಧನೆ ಸಾಧ್ಯ. ಈ ಹಿನ್ನಲೆಯಲ್ಲಿ ಯುನೈಟೆಡ್ ಆಸ್ಪತ್ರೆಯ ವ್ಯವಹಾರದ ಆಲೋಚನೆಗಳು ಬಹಳ ಗಟ್ಟಿಯಾಗಿದ್ದು, ಈ ಸಂಸ್ಥೆಯನ್ನು ಇನ್ನೂ ವಿಸ್ತಾರಕ್ಕೆ ಬೆಳೆಸಿ ಎಂದು ಸಲಹೆ ನೀಡಿದರು.
ಯುನೈಟೆಡ್ ಆಸ್ಪತ್ರೆಯ ಸಂಸ್ಥಾಪಕರು ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ. ವಿಕ್ರಂ ಸಿದ್ದಾರೆಡ್ಡಿ ಮಾತನಾಡಿ, ನೂತನ ಕಟ್ಟಡದಲ್ಲಿ ಅತ್ಯಾಧುನಿಕ ಕ್ಯಾಥ್ಲ್ಯಾಬ್, ಐಸಿಯು, ವೆಂಟಿಲೇಟರ್ ವ್ಯವಸ್ಥೆಯಿದ್ದು ಸುಪರ್ಸ್ಪೇಷಾಲಿಟಿ ವೈದ್ಯಕೀಯ ಸೇವೆಗಳ ಸೌಲಭ್ಯ ಲಭ್ಯವಿದೆ. ಅಪಘಾತ ಪ್ರಕರಣಗಳಿಗೆ ಅತ್ಯುತ್ತಮ ಚಿಕಿತ್ಸೆಯನ್ನು ಯುನೈಟೆಡ್ ಆಸ್ಪತ್ರೆ ನೀಡುತ್ತಾ ಬಂದಿದೆ. ಬಡ ರೋಗಿಗಳಿಗೂ ಕೈಗೆಟಕುವ ದರದಲ್ಲಿ ಅತ್ಯುತ್ತಮ ಚಿಕಿತ್ಸೆಯನ್ನು ನೀಡುವ ಬದ್ದತೆಯನ್ನು ನಾವು ಹೊಂದಿದ್ದು ಅದನ್ನು ಮುಂದುವರೆಸಿಕೊಂಡು ಹೋಗಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಗಳಖೋಡ-ಜಿಡಗಾ ಮಠದ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀ ಷಡಕ್ಷರಿ ಶಿವಯೋಗಿ ಮುರುಘರಾಜೇಂದ್ರ ಮಹಾಸ್ವಾಮಿಗಳು, ಯುನೈಡೆಟ್ ಆಸ್ಪತ್ರೆಯ ಅಧ್ಯಕ್ಷರಾದ ಶ್ರೀ. ಡಾ. ವಿಕ್ರಮ್ ಸಿದ್ದಾರೆಡ್ಡಿ, ನಿರ್ದೇಶಕಿ ಡಾ ಶ್ರೀಮತಿ ಡಾ. ವೀಣಾ ವಿಕ್ರಮ್ ಸಿದ್ಧಾರೆಡ್ಡಿ, ಡಾ. ಶಾಂತಕುಮಾರ್, ಟ್ರಾಮಾ ಸರ್ಜನ್ ಡಾ. ಮೊಹಮ್ಮದ್ ಅಬ್ದುಲ್ ಬಷೀರ್, ಆರ್ಥೋಪೆಡಿಕ್ ಸರ್ಜನ್ ಡಾ. ರಾಜು ಕುಲಕರ್ಣಿ, ಡಾ ಉಡುಪಿ ಕೃಷ್ಣ ಜೊಶಿ ಹಾಗೂ ಡಾ. ರಾಜೀವ್ ಬಶೆಟ್ಟಿ. ಜಿಲ್ಲೆಯ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.