ಬೆಂಗಳೂರು : ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ (ಐಸಿಎಐ)ಯ ವತಿಯಿಂದ 2022ನೇ ಸಾಲಿನ ಘಟಿಕೋತ್ಸವ ಸಮಾರಂಭವನ್ನು ನಗರದ ಡಾ. ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಆಯೋಜಿಸಲಾಗಿತ್ತು. ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಕೋರ್ಸ್ ಪಾಸಾಗಿ, ಸದಸ್ಯತ್ವ ಪಡೆದ ಸುಮಾರು 650 ಮಂದಿಗೆ ಘಟಿಕೋತ್ಸವದಲ್ಲಿ ಪದವಿ ಪ್ರಮಾಣ ಪತ್ರ ವಿತರಿಸಲಾಯಿತು.
ಸಂಸ್ಥೆಯು ವರ್ಷಕ್ಕೆ ಎರಡು ಬಾರಿ ಸಿಎ ಪರೀಕ್ಷೆ ನಡೆಸುತ್ತದೆ. ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಸದಸ್ಯತ್ವ ಪಡೆದವರಿಗೆ ಪ್ರಮಾಣಪತ್ರ ವಿತರಿಸಲಾಗುವುದು. ಕಳೆದ ಎರಡು ವರ್ಷಗಳಿಂದ ಕೋವಿಡ್ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ವಿತರಣೆಯಾಗಿರಲಿಲ್ಲ.
ಈ ವೇಳೆ ಐಸಿಎಐ ಬೆಂಗಳೂರು ಘಟಕದ ಅಧ್ಯಕ್ಷ ಬಿ.ಟಿ. ಶೆಟ್ಟಿ ಮಾತನಾಡಿ, “ಕೋವಿಡ್ ನಿಂದಾಗಿ ಕಳೆದ ಎರಡು ವರ್ಷಗಳಿಂದ ಘಟಿಕೋತ್ಸವ ನಡೆದಿರಲಿಲ್ಲ. ಅದರಲ್ಲೂ ಬೆಂಗಳೂರಿನಲ್ಲಿ ಕಳೆದ ಆರು ವರ್ಷಗಳಿಂದ ಘಟಿಕೋತ್ಸವ ನಡೆದಿರಲಿಲ್ಲ. ಇದೀಗ 2022ನೇ ಸಾಲಿನ ಘಟಿಕೋತ್ಸವವನ್ನು ಮಾಡಿದ್ದೇವೆ. ಕೋವಿಡ್ ಪ್ರಮಾಣ ಕಡಿಮೆಯಾದರೆ ಮುಂದಿನ ದಿನಗಳಲ್ಲಿ ಘಟಿಕೋತ್ಸವ ಎಂದಿನಂತೆ ನಡೆಯಲಿದೆ ಎಂದರು.
ಐಸಿಎಐ ಮಾಜಿ ಅಧ್ಯಕ್ಷ ಕೆ. ರಘು ಮಾತನಾಡಿ, ನೂತನ ಅರ್ಹ 600-650 ಲೆಕ್ಕಪರಿಶೋಧಕರಿಗೆ ಪ್ರಮಾಣ ಪತ್ರಗಳನ್ನು ನೀಡುತ್ತಿದ್ದೇವೆ. ಚಾರ್ಟಟ್ ಅಕೌಂಟೆಂಟ್ ಕೋರ್ಸ್ ಅತ್ಯಂತ ಬೇಡಿಕೆಯುಳ್ಳ ಹಾಗೂ ವಿಫುಲ ಉದ್ಯೋಗಾವಕಾಶಗಳನ್ನು ಒದಗಿಸುವ ಅತ್ಯುತ್ತಮ ಕೋರ್ಸ್ ಇದಾಗಿದೆ. ಬೆಂಗಳೂರು ಮಾತ್ರವಲ್ಲದೆ ರಾಷ್ಟ್ರ ಮತ್ತು ಹೊರರಾಷ್ಟ್ರಗಳಲ್ಲೂ ಉದ್ಯೋಗ ಹೊಂದಲು ಈ ಉದ್ಯಮ ಅತ್ಯಂತ ಬೇಡಿಕೆಯುಳ್ಳದ್ದಾಗಿದೆ. ಕೋರ್ಸ್ ಮಾಡ ಬಯಸುವವರು ಬೆಂಗಳೂರು ಐಸಿಎಐ ಸಂಸ್ಥೆಗೆ ಬಂದರೆ ಅಗತ್ಯ ಮಾಹಿತಿ ಸಿಗುತ್ತದೆ ಎಂದು ಸಿಎ ಮಾಡುವ ಆಸಕ್ತರಿಗೆ ತಿಳಿಸಿದರು.
ಘಟಿಕೋತ್ಸವದ ಸಂಚಾಲಕ ಸಿಎ ದಯಾನಿವಾಸ್ ಶರ್ಮಾ ಮಾತನಾಡಿ, 2020-21 ಹಾಗೂ 2021-22ನೇ ಸಾಲಿನ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಗುತ್ತಿದೆ. ನಾನಾ ವಿದ್ಯಾರ್ಥಿಗಳು ಕುಟುಂಬ ಸಮೇತರಾಗಿ ಭಾಗವಹಿಸಿರುವುದು ಸಂತೋಷದ ಸಂಗತಿ ಎಂದರು.
ಕಾರ್ಯಕ್ರಮದಲ್ಲಿ ಭಾರತೀಯ ಲೆಕ್ಕ ಪತ್ರ ಪರಿಶೋಧಕರ ಸಂಸ್ಥೆ (ಐಸಿಎಐ)ಯ ಸೆಂಟ್ರಲ್ ಕೌನ್ಸಿಲ್ ಸದಸ್ಯ ಕೋತಾ ಶ್ರೀನಿವಾಸ್, ಕಾರ್ಯದರ್ಶಿ ಎಸ್. ದಿವ್ಯಾ ಮತ್ತಿತರರು ಉಪಸ್ಥಿತರಿದ್ದರು.