ದಿಬ್ಬೂರಿನಲ್ಲಿರುವ ವಸತಿ ನಿಲಯದಲ್ಲಿರುವ ನಿವಾಸಿಗಳ ಸಾಲ ಮರುಪಾವತಿಗೆ ಸಮಯಾವಕಾಶ ನೀಡುವಂತೆ ಮನವಿ

ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅಧಿಕಾರಾವಧಿಯಲ್ಲಿ ರಾಜೀವ್ ಗಾಂಧಿ ಆವಾಜ್ ಯೋಜನೆಯಡಿಯಲ್ಲಿ ದಿಬ್ಬೂರಿನಲ್ಲಿ 1200 ಮನೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿ 2018 ರ ಆಗಷ್ಟ್ ತಿಂಗಳಲ್ಲಿ ಈ ವಸತಿ ಸಂಕೀರ್ಣವನ್ನು ಆಗಿನ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ರವರ ಅಮೃತ ಹಸ್ತದಿಂದ ಉದ್ಘಾಟನೆಗೊಂಡು ಹಾಗೂ ವಸತಿ ರಹಿತ ಬಡವರಿಗೆ ಈ ಮನೆಗಳನ್ನು ಹಂಚಿಕೆ ಮಾಡಲಾಗಿತ್ತು. ಸರ್ಕಾರದ ಮಾರ್ಗಸೂಚಿಯಂತೆ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ ಫಲಾನುಭವಿಗಳು ಸುಮಾರು 38750/- ರೂಪಾಯಿಗಳು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತ ಫಲಾನುಭವಿಗಳು ಸುಮಾರು 112700/- ರೂಪಾಯಿಗಳಂತೆ ಫಲಾನುಭವಿಗಳು ವಂತಿಗೆ ಕೊಟ್ಟು ಮನೆಗಳನ್ನು ಅವರ ಹೆಸರಿಗೆ ನೊಂದಣಿ ಮಾಡಿಕೊಳ್ಳುವಂತೆ ಉಲ್ಲೇಖಿಸಲಾಗಿತ್ತು.

ಆದರೆ ಈ ಬಡ ಸಾಮಾನ್ಯರು ತಮ್ಮ ವಂತಿಗೆ ಕಟ್ಟಲು ಸಾಧ್ಯವಾಗದೆ ಇರುವ ಹಿನ್ನೆಲೆಯಲ್ಲಿ ನನ್ನ ಬಳಿ ಬಂದು ಅವರ ಅಳಲನ್ನು ತೋಡಿಕೊಂಡಿದ್ದರು. ಈ ಫಲಾನುಭವಿಗಳಿಗೆ ತಮ್ಮ ವಂತಿಗೆ ಕಟ್ಟಲು ಸಾಧ್ಯವಾಗದಿರುವ ಹಿನ್ನೆಲೆ ಆಗಿನ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸನ್ಮಾನ್ಯ ಸಚಿವರಾಗಿದ್ದ ತನ್ವೀರ್ ಸೇಠ್ ರವರಿಗೆ ಮನವಿ ಮಾಡಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮ ಹಾಗೂ ಇತರೆ ಇಲಾಖೆಗಳಿಂದ ಸಾಲವನ್ನು ಪಡೆದು ಈ ಫಲಾನುಭವಿಗಳ ವಂತಿಗೆ ರೂಪದಲ್ಲಿ ಸರಿದೂಗಿಸಲಾಗಿತ್ತು. ಆದರೆ ಈ ಸಾಲದ ಮೊತ್ತವನ್ನು ಫಲಾನುಭವಿಗಳು ಮರು ಪಾವತಿ ಮಾಡಬೇಕಾಗಿದ್ದು ಈ ಎಲ್ಲಾ ಫಲಾನುಭವಿಗಳು ಅತ್ಯಂತ ಬಡಕುಟುಂಬದವರಾಗಿದ್ದು ಈ ಸಾಲದ ಕಂತುಗಳನ್ನು ಪಾವತಿ ಮಾಡಲು ಕಷ್ಟಕರವಾಗಿದೆ.

ಕಳೆದ 2 ವರ್ಷಗಳಿಂದ ಕೋವಿಡ್ ಸೋಂಕು ಹರಡುವಿಕೆಯ ಹಿನ್ನಲೆ ಅವರೆಲ್ಲರ ಉದ್ಯೋಗ ಮತ್ತು ದುಡಿಮೆ ಕಡಿತಗೊಂಡು ಜೀವನ ಸಾಗಿಸಲು ಪರದಾಡುವ ಪರಿಸ್ಥಿತಿಯಲ್ಲಿದ್ದಾರೆ. ಈ ಪರಿಸ್ಥಿತಿಯಲ್ಲಿ ಸಾಲದ ಕಂತುಗಳನ್ನು ಪಾವತಿ ಮಾಡಲು ಬಹಳ ತೊಂದರೆಯಾಗುತ್ತಿದೆ. ಆದ್ದರಿಂದ ತಾವು 2022-23 ಈ 2 ವರ್ಷಗಳನ್ನು MORATORIUM ಅವಧಿಯೆಂದು ಪರಿಗಣಿಸಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮ ಹಾಗೂ ಇತರೆ ಇಲಾಖೆಗಳಿಗೆ ಆದೇಶ ನೀಡಿ ಈ ಬಡ ಫಲಾನುಭವಿಗಳಿಗೆ ಕಂತು ಪಾವತಿ ಮಾಡಲು ಇನ್ನಷ್ಟು ಸಮಯಾವಕಾಶ ನೀಡಬೇಕೆಂದು ಹಾಗೂ ಮೇಲಿನ ಇಲಾಖೆಯ ಅಧಿಕಾರಿಗಳು ಈ ಫಲಾನುಭವಿಗಳಿಗೆ ಯಾವುದೇ ರೀತಿಯ ಒತ್ತಡ ಹೇರದಂತೆ ಸೂಚಿಸಬೇಕೆಂದು ಡಾ. ಎಸ್.ರಫೀಕ್ ಅಹ್ಮದ್ ರವರು ಮನವಿ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!