ಬೆಂಗಳೂರು, ಜ. 28: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮೊಮ್ಮಗಳು ಡಾ. ಸೌಂದರ್ಯ ಅವರು ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡಾ. ಸೌಂದರ್ಯ ಸಾವಿನ ಸುದ್ದಿ ಕೇಳಿ ಬಿ.ಎಸ್.ಯಡಿಯೂರಪ್ಪ ಕುಟುಂಬ ಆತಂಕಕ್ಕೆ ಒಳಗಾಗಿದೆ. ಕೌಟುಂಬಿಕ ಕಲಹದಿಂದ ಸೌಂದರ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾತು ಕೇಳಿ ಬರುತ್ತಿದ್ದು, ಪೊಲೀಸ್ ತನಿಖೆಯಲ್ಲಿ ಸಂಗತಿ ಬೆಳಕಿಗೆ ಬರಬೇಕಿದೆ.
2018 ರಲ್ಲಿ ಡಾ. ಅಬ್ಬಿಗೆರೆ ನಿವಾಸಿ ಡಾ. ನೀರಜ್ ಎಂಬುವರನ್ನು ಸೌಂದರ್ಯ ಮದುವೆಯಾಗಿದ್ದರು. ನೀರಜ್ ಕೂಡ ವೈದ್ಯರಾಗಿದ್ದು ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ರೇಡಿಯಾಲಜಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದಂಪತಿಗೆ 9 ತಿಂಗಳ ಮಗು ಕೂಡ ಇದೆ.
ಸೌಂದರ್ಯ ಹಾಗೂ ನೀರಜ್ ಮೌಂಟ್ ಕಾರ್ಮಲ್ ಶಾಲೆ ಸಮೀಪದ ಫ್ಲಾಟ್‌ನಲ್ಲಿ ವಾಸವಾಗಿದ್ದರು. ಇಬ್ಬರು ಅನೋನ್ಯವಾಗಿದ್ದರು. ಕೌಟುಂಬಿಕವಾಗಿ ಯಾವುದೇ ಭಿನ್ನಾಭಿಪ್ರಾಯ ಇರಲಿಲ್ಲ. ಕಳೆದ ಎರಡು ವರ್ಷದಿಂದ ವಸಂತನಗರ ಫ್ಲಾಟ್‌ನಲ್ಲಿಯೇ ದಂಪತಿ ವಾಸವಾಗಿದ್ದರು.
ಬೆಳಗ್ಗೆ ಎಂದಿನಂತೆ ನೀರಜ್ ಎಂಟು ಗಂಟೆ ಸುಮಾರಿಗೆ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ತೆರಳಿದ್ದಾರೆ. ಇದಾದ ಬಳಿಕ ಮನೆ ಕೆಲಸದವರು ಬಂದು ಮನೆ ಕೆಲಸ ಮುಗಿಸಿದ್ದಾರೆ. ತಿಂಡಿ ಕೊಡಲೆಂದು ಡಾ. ಸೌಂದರ್ಯ ಅವರನ್ನು ಎಬ್ಬಿಸಲು ಪ್ರಯತ್ನಿಸಿದ್ದಾರೆ. ಎಷ್ಟೊತ್ತಾದರೂ ಡಾ. ಸೌಂದರ್ಯ ಬಾಗಿಲು ತೆಗೆದಿಲ್ಲ. ಆ ಬಳಿಕ ಪಕ್ಕದ ಫ್ಲಾಟ್ ಬಾಲ್ಕನಿ ಮೂಲಕ ಹೋಗಿ ನೋಡಿದಾಗ ಸೌಂದರ್ಯ ಆತ್ಮಹತ್ಯೆ ಮಾಡಿಕೊಂಡಿರುವ ಸಂಗತಿ ಬೆಳಕಿಗೆ ಬೆಳಕಿಗೆ ಬಂದಿದೆ. ಕೂಡಲೇ ಪತಿ ನೀರಜ್‌ಗೆ ವಿಷಯ ತಿಳಿಸಿದ್ದು, ಅವರು ಮನೆಗೆ ಆಗಮಿಸಿ ನೋಡಿದಾಗ ಕೊಠಡಿಯಲ್ಲಿ ಫ್ಯಾನಿಗೆ ನೇಣು ಹಾಕಿಕೊಂಡಿರುವ ಸಂಗತಿ ಗೊತ್ತಾಗಿದೆ. ಕೂಡಲೇ ಮೃತ ದೇಹವನ್ನು ಸಮೀಪದ ಮಲ್ಲಿಗೆ ಆಸ್ಪತ್ರೆಗೆ ದಾಖಲಿಸಿದ್ದು, ಅಷ್ಟರಲ್ಲಿ ಸೌಂದರ್ಯ ಮೃತಪಟ್ಟಿರುವುದು ದೃಡಪಟ್ಟಿದೆ. ಆ ಬಳಿಕ ಮೃತ ದೇಹವನ್ನು ಬೌರಿಂಗ್ ಆಸ್ಪತ್ರೆಗೆ ರವಾನಿಸಿದ್ದು, ಅಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಸೌಂದರ್ಯ ಅವರ ಅಂತಿಮ ದರ್ಶನ ಪಡೆಯಲು ರಾಜಕೀಯ ಗಣ್ಯರು ಭೇಟಿ ಕೊಟ್ಟಿದ್ದಾರೆ. ಇನ್ನು ಹೈಗ್ರೌಂಡ್ಸ್ ಪೊಲೀಸರು ಈ ಸಂಬಂಧ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಸೌಂದರ್ಯ ಯಾವತ್ತೂ ತಾನು ಬಿ.ಎಸ್. ಯಡಿಯೂರಪ್ಪ ಅವರ ಮೊಮ್ಮಗಳು ಎಂದು ಹೇಳಿಕೊಳ್ಳುತ್ತಿರಲಿಲ್ಲ. ತುಂಬಾ ಸೌಮ್ಯ ಸ್ವಭಾವದವರು. ಎಂಬಿಬಿಎಸ್ ಪದವಿ ಹಾಗೂ ಎಂಡಿ ವೈದ್ಯಕೀಯ ಪದವಿಯನ್ನು ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿಯೇ ಪೂರೈಸಿದ್ದರು. ಆವರ ಆತ್ಮಹತ್ಯೆ ಸುದ್ದಿ ಕೇಳಿ ಅರಗಿಸಿಕೊಳ್ಳಲಾಗುತ್ತಿಲ್ಲ ಎಂದು ಡಾ. ಸೌಂದರ್ಯ ಅವರಿಗೆ ಪಾಠ ಮಾಡಿದ್ದ ಎಂ.ಎಸ್. ರಾಮಯ್ಯ ಆಸ್ಪತ್ರೆ ವೈದ್ಯರು ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.
ಡಾ. ನೀರಜ್ ಅವರ ಅಬ್ಬಿಗೆರೆ ನಿವಾಸದ ಸಮೀಪ ಡಾ. ಸೌಂದರ್ಯ ಅಂತ್ಯಕ್ರಿಯೆ ನಡೆಸಲು ಸಕಲ ಸಿದ್ಧತೆ ನಡೆಸಲಾಗುತ್ತಿದೆ. ನೀರಜ್ ಅವರ ನಿವಾಸಕ್ಕೆ ಸೋಲದೇವನಹಳ್ಳಿ ಪೊಲೀಸರ ಬಿಗಿ ಭದ್ರತೆ ಕಲ್ಪಿಸಿಲಾಗಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಹ ಕುಟುಂಬ ಸಮೇತ ಅಬ್ಬಿಗೆರೆ ನೀರಜ್ ನಿವಾಸಕ್ಕೆ ತೆರಳಿದ್ದಾರೆ. ಡಾ. ಸೌಂದರ್ಯ ಆತ್ಮಹತ್ಯೆ ಸುದ್ದಿ ಕೇಳಿದ ಕೂಡಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಯಡಿಯೂರಪ್ಪರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ಸಚಿವರು, ಶಾಸಕರು ಬಿ.ಎಸ್. ವೈ. ಅವರನ್ನು ಭೇಟಿ ಮಾಡಿದ್ದಾರೆ. ಗಣ್ಯರ ದಂಡೇ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಡಾ. ನೀರಜ್ ಕುಟುಂಬ ಆರ್ಥಿಕವಾಗಿ ಸದೃಢವಾಗಿದ್ದರು. ಡಾ. ಸೌಂದರ್ಯ ಕೂಡ ವೃತ್ತಿಯಲ್ಲಿ ವೈದ್ಯೆ. ಡಾ. ನೀರಜ್ ಕೂಡ ವೈದ್ಯರಾಗಿದ್ದು, ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಉತ್ತಮ ಹೆಸರು ಗಳಿಸಿದ್ದಾರೆ. ಹೀಗಾಗಿ ಡಾ. ಸೌಂದರ್ಯ ಯಾಕೆ ಆತ್ಮಹತ್ಯೆ ಮಾಡಿಕೊಂಡರು ಎಂಬ ವಿಚಾರ ಚರ್ಚೆಗೆ ನಾಂದಿ ಹಾಡಿದೆ. ಡಾ. ಸೌಂದರ್ಯ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದರೇ? ಅಥವಾ ಕೌಟುಂಬಿಕ ಕಲಹಗಳು ಇತ್ತೇ? ಕೌಟುಂಬಿಕ ಕಲಹ ಇದ್ದರೂ, ಅದನ್ನು ಕುಟುಂಬದ ಗಮನಕ್ಕೆ ತರುತ್ತಿದ್ದರು. ಹೀಗಾಗಿ ಸೌಂದರ್ಯ ಆತ್ಮಹತ್ಯೆ ಕಾರಣ ಸದ್ಯದ ಮಟ್ಟಿಗೆ ನಿಗೂಢವಾಗಿದ್ದು, ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬರಬೇಕಿದೆ. ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಸೌಂದರ್ಯ ತೆಗೆದುಕೊಳ್ಳುವ ಪ್ರಮಾದ ಏನಾಗಿತ್ತು ಎಂಬ ಪ್ರಶ್ನೆ ಮೂಡಿದೆ.