ರಾಜ್ಯದಲ್ಲೇ ಮೊಟ್ಟ ಮೊದಲ ಬಾರಿಗೆ ಯುವಜನ ಗ್ರಾಮಸಭೆ ಪ್ರಾರಂಭ

ಶಿರಾ:- ತಾಲ್ಲೂಕಿನ ಸೀಬಿ ಅಗ್ರಹಾರ ಗ್ರಾಮ ಪಂಚಾಯಿತಿ, ಚಿಗುರು ಯುವಜನ ಸಂಘ ಹಾಗೂ ಪಂಚಾಯಿತಿ ವ್ಯಾಪ್ತಿಯ ಯುವಜನರ ಸಹಯೋಗದಲ್ಲಿ ರಾಷ್ಟ್ರೀಯ ಯುವ ಸಪ್ತಾಹ ಅಂಗವಾಗಿ ಯುವಜನ ಗ್ರಾಮಸಭೆ ಯನ್ನು ಮಾಡಲಾಯಿತು.
ಯುವಜನ ಗ್ರಾಮಸಭೆಯಲ್ಲಿ ಮಂಜುನಾಥ ಅಮಲಗೊಂದಿರವರು ಪ್ರಾಸ್ತಾವಿಕ ನುಡಿಗಳನ್ನಾಡಿ, ಕರ್ನಾಟಕದಲ್ಲಿ ಸುಮಾರು ೨ ಕೋಟಿಯಷ್ಟು ಯುವಜನರು ಇದ್ದೇವೆ,  ಅದರಲ್ಲಿಯೂ ಗ್ರಾಮೀಣ ಯುವಜನರು ಹೆಚ್ಚಾಗಿದ್ದೇವೆ. ಯುವಜನರು ಮತದಾರರಾಗಿದ್ದು, ಅವರೂ ಸಹ ಗ್ರಾಮ ಪಂಚಾಯತ್ ಕಾರ್ಯಚಟುವಟಿಕೆಗಳಲ್ಲಿ ಬಹುಮುಖ್ಯವಾಗಿ ತೊಡಗಿಕೊಳ್ಳಬೇಕಿದೆ. ಆದರೆ ಸ್ಥಳೀಯ ಸರ್ಕಾರಗಳಲ್ಲಿ ಯುವಜನರ ಪಾಲ್ಗೊಳ್ಳುವಿಕೆ ಕಡಿಮೆಯಿದೆ. ಈ ಬಾರಿ ರಾಷ್ಟ್ರೀಯ ಯುವ ಸಪ್ತಾಹದಲ್ಲಿ ನಮ್ಮ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳು ಕಡ್ಡಾಯವಾಗಿ ಜನವರಿ ೧೨ ಯುವಜನ ಗ್ರಾಮ ಸಭೆಯನ್ನು ಆಚರಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸುತ್ತೋಲೆಯನ್ನು ಹೊರಡಿಸಿದೆ. ಇದು ಬಹುದಿನಗಳ ಗ್ರಾಮೀಣ ಯುವಜನರ ಬಹುಬೇಡಿಕೆಯ ಅಂಶವಾಗಿತ್ತು, ಈ ದಿನದಂದು ಅನುಷ್ಠಾನವಾಗಿದ್ದು ತುಂಬಾ ಸಂತಸದ ವಿಚಾರ. ಇದರ ಭಾಗವಾಗಿ ಗ್ರಾಮೀಣ ಯುವಜನರಿಗೆ ಗ್ರಾಮಪಂಚಾಯಿತಿಯಿಂದ ಉದ್ಯಮಶೀಲತೆಗೆ ಮತ್ತು ಗುಡಿ ಕೈಗಾರಿಕೆಗಳಿಗೆ ಹೆಚ್ಚು ಹೆಚ್ಚು ಪ್ರೋತ್ಸಾಹವನ್ನು ನೀಡುವ ಮೂಲಕ ಯುವಜನರ ನಿರುದ್ಯೋಗ ಪ್ರಮಾಣವನ್ನು ತಗ್ಗಿಸಬೇಕಿದೆ. ಯುವಜನರಿಂದ ದೇಶದ ಅಭಿವೃದ್ದಿಯಾಗಬೇಕಾದರೆ ಮೊದಲು ಯುವಜನರ ಆರೋಗ್ಯ, ಶಿಕ್ಷಣ, ಉದ್ಯೋಗದ ಬಗ್ಗೆ ಸರ್ಕಾರಗಳು ಹೆಚ್ಚು ಹೊತ್ತು ನೀಡಬೇಕು. ಹಾಗೆಯೇ ಗ್ರಾಮೀಣ ಯುವಜನರು ನಮ್ಮ ಗ್ರಾಮ ಪಂಚಾಯಿತಿ ಸಮಸ್ಯೆಗಳ ಬಗ್ಗೆ ಮತ್ತು ತಮ್ಮ ಸುತ್ತಮುತ್ತಲಿನ ಪರಿಸರದ ಬಗ್ಗೆ ಹೆಚ್ಚು ಕಾಳಜಿವಹಿಸಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪರಿಸರವನ್ನು ಹೆಚ್ಚೆಚ್ಚು ರಕ್ಷಣೆ ಮಾಡಬೇಕಿದೆ. ಪ್ರತಿ ಹಳ್ಳಿಗಳಲ್ಲಿ ಒಂದೊಂದು ಯುವಜನ ಸಂಘಗಳನ್ನು ಮಾಡಿ, ಪಂಚಾಯತ್ ನಲ್ಲಿ ನೊಂದಣಿ ಮಾಡಿಕೊಳ್ಳಬೇಕು. ಈ ಮೂಲಕ ಅವರಿಗೆ ಯುವ ಸಂಸತ್, ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಯುವಜನರ ಅಭಿವೃದ್ದಿಗೆ ಶ್ರಮಿಸಬೇಕಿದೆ ಎಂದು ತಿಳಿಸಿದರು.


ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಲೋಕೇಶ್‌ರವರು ಮಾತನಾಡಿ, ಗ್ರಾಮ ಪಂಚಾಯಿತಿಯಲ್ಲಿ ಯುವಜನರ ಪಾಲ್ಗೊಳ್ಳುವಿಕೆ ಅತಿ ಮುಖ್ಯವಾಗಿರುತ್ತದೆ. ಸ್ವಾಮಿ ವಿವೇಕಾನಂದರ ಜಯಂತಿಯಂದು ಯುವಜನ ಗ್ರಾಮಸಭೆಯನ್ನು ನಮ್ಮ ಗ್ರಾಮ ಪಂಚಾಯಿತಿ ಮಾಡಲು ತುಂಬಾ ಖುಷಿ ವಿಚಾರವಾಗಿದೆ. ಗ್ರಾಮ ಪಂಚಾಯಿತಿಯಲ್ಲಿ ಯುವಜನರಿಗಾಗಿಯೇ ಅನೇಕ ಯೋಜನೆಗಳಿವೆ. ಯುವಜನರು ಗ್ರಾಮ ಪಂಚಾಯಿತಿಯಲ್ಲಿ ಪಾಲ್ಗೊಂಡು ಪ್ರತಿಯೊಂದು ಯೋಜನೆಯನ್ನು ಸಹ ಪಡೆದುಕೊಳ್ಳಬೇಕು. ನರೇಗಾ ಯೋಜನೆಯಲ್ಲಿ ಉದ್ಯೋಗ ಒದಗಿಸಲು, ಯುವಜನರಿಗೆ ಕೌಶಲ್ಯ ಅಭಿವೃದ್ಧಿ ಮಾಡಲು, ಉದ್ಯಮಶೀಲತೆಯನ್ನು ಹೆಚ್ಚಿಸಲು, ಕೃಷಿಯನ್ನು ಪ್ರೋತ್ಸಾಹಿಸಲು, ಗ್ರಾಮ ಪಂಚಾಯಿತಿಯಲ್ಲಿ ಅನೇಕ ಯೋಜನೆಗಳಲ್ಲಿ ಪ್ರಯೋಜನವನ್ನು ಪಡೆಯಬೇಕು ಎಂದು ಯೋಜನೆಗಳನ್ನು ವಿವರಿಸಿದರು.
ಜಲಜೀವನ್ ಮಿಷನ್ ತಾಲೂಕು ಅಧಿಕಾರಿಗಳಾದ ಮಧುರವರು ಭಾಗವಹಿಸಿ, ಗ್ರಾಮ ಪಂಚಾಯಿತಿಯಲ್ಲಿ ಯುವಜನ ಗ್ರಾಮಸಭೆಯನ್ನು ಆಯೋಜನೆ ಮಾಡಿರುವುದು ಅತ್ಯಂತ ಖುಷಿಯ ವಿಚಾರವಾಗಿದೆ. ಯುವಜನರು ನೀರಿ ಸಂರಕ್ಷಣೆ, ನೀರಿನ ಮಿತ ಬಳಕೆ ಮತ್ತು ನೀರಿನ ಮರು ಬಳಕೆಯ ಬಗ್ಗೆ ಹೆಚ್ಚಾಗಿ ಗಮನಹರಿಸಬೇಕೆಂದು ತಿಳಿಸಿದರು.  ಸ್ಪಾಟ್ಲೈಟ್ ಕನ್ನಡ ವೆಬ್‌ತಾಣದ ಸಂಪಾದಕರಾದ ಕೆಂಪರಾಜು ರವರು ಮಾತನಾಡಿ, ಯುವಜನ ಗ್ರಾಮಸಭೆ ಅನೇಕ ವರ್ಷಗಳ ಯುವಜನರ ಬೇಡಿಕೆಯಾಗಿದೆ. ಈ ವರ್ಷ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಯುವಜನ ಗ್ರಾಮಸಭೆಯನ್ನು ಆಯೋಜನೆ ಮಾಡಿರುವುದು ಯುವಜನರ ಹಕ್ಕುಗಳನ್ನು ಸರ್ಕಾರವು ಎತ್ತಿಹಿಡಿದಿರುವ ಸಂಕೇತವಾಗಿದೆ. ಯುವಜನ ಗ್ರಾಮಸಭೆಯಲ್ಲಿ ಯುವಜನರ ಆರೋಗ್ಯ, ಉದ್ಯೋಗ, ಶಿಕ್ಷಣ, ಯುವಜನರ ಪ್ರಸ್ತುತ ಸ್ಥಿತಿಗಳ ಬಗ್ಗೆ ಹೆಚ್ಚೆಚ್ಚು ಚರ್ಚೆಯಾಗಿ ಮತ್ತು ಗ್ರಾಮಪಂಚಾಯಿತಿಯಲ್ಲಿ ಯುವಜನರ ಈ ಎಲ್ಲಾ ಸಮಸ್ಯೆ ಸವಾಲುಗಳಿಗೆ ಇರುವ ಪರಿಹಾರೋಪಾಯಗಳ ಬಗ್ಗೆ ಚರ್ಚೆಗಳನ್ನು ಹೆಚ್ಚು ನಡೆಸಿ, ಸರ್ಕಾರಕ್ಕೆ ಯುವಜನ ಗ್ರಾಮಸಭೆಯ ಇರುವ ಮಹತ್ವವನ್ನು ಅರಿವು ಮಾಡಬೇಕು ಮತ್ತು ಗ್ರಾಮೀಣ ಸ್ಥಳೀಯ ಸರ್ಕಾರವನ್ನು ಮತ್ತು ಯುವಜನರನ್ನು ಒಂದುಗೂಡಿಸಿ ಗ್ರಾಮೀಣಾಭಿವೃದ್ಧಿ ಮಾಡಬೇಕು ಎಂದು ತಿಳಿಸಿದರು.


ಈ ಗ್ರಾಮಸಭೆಯಲ್ಲಿ ಯುವಜನರಿಗೆ ಇರುವ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಗೀತಾ ರವರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಸಭೆಯಲ್ಲಿ ಗ್ರಾಮ ಪಂಚಾಯಿತಿ ಸಿಬ್ಬಂದಿ ಕುಮಾರಸ್ವಾಮಿರವರು ಸರ್ವರನ್ನು ಸ್ವಾಗತಿಸಿದರು. ಸಭೆಯಲ್ಲಿ ಪಂಚಾಯಿತಿಯ ಸದಸ್ಯರಾದ ಮಮತ, ಕಮಲ, ಗಂಗಮ್ಮ, ಕಾಂತರಾಜು, ಗ್ರಾಮೀಣ ಅಂಗವಿಕಲರ ಪುನರ್ವಸತಿ ಕಾರ್ಯಕರ್ತೆಯಾದ ಲಲಿತಮ್ಮರವರು ಹಾಜರಿದ್ದರು. ಸಭೆಯಲ್ಲಿ ವಿಶೇಷಚೇತನರು, ಸ್ಥಳೀಯ ಯುವಜನರು ಹಾಗೂ ಪಂಚಾಯತ್ ಸಿಬ್ಬಂದಿಯವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!