ತುಮಕೂರು: ಶ್ರೀದೇವಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಆಸ್ಪತ್ರೆಯ ವತಿಯಿಂದ ಭಾನುವಾರ ತುಮಕೂರಿನ ಅಮಾನಿಕೆರೆಯಲ್ಲಿ ಉಚಿತ ಹೃದ್ರೋಗ ಚಿಕಿತ್ಸಾಲಯ ಶಿಬಿರವನ್ನು ಆಯೋಜಿಸಲಾಗಿತ್ತು. ಪದವಿ ವೈದ್ಯಕೀಯ ಶಿಕ್ಷಣ ಹಾಗೂ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣದ ಸೌಲಭ್ಯಗಳ ಜೊತೆಗೆ ವಿಶೇಷ ತಜ್ಞತೆ ಹೊಂದಿದ ನೂತನ ವಿಭಾಗಗಳನ್ನು ಪ್ರಾರಂಭಿಸಲಾಗಿದೆ. ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ವಿಶೇಷ ತರಬೇತಿ ಹೊಂದಿದ ನುರಿತ ತಜ್ಞ ವೈದ್ಯರಾದ ಡಾ.ಸುರೇಶ್.ಎಸ್.ರವರನ್ನು ನಿಯೋಜಿಸಿಕೊಂಡು ಪ್ರಯೋಗಾಲಯ ಮತ್ತು ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗೆ ಸಂಬಂಧಪಟ್ಟ ವಿಶೇಷ ಉಪಕರಣಗಳನ್ನು ಅಳವಡಿಸಲಾಗಿದೆ. ಇತ್ತೀಚಿಗೆ ಹೃದಯ ರೋಗ ಚಿಕಿತ್ಸೆಗಾಗಿ ಅತ್ಯಾಧುನಿಕ ಕ್ಯಾತ್ಲ್ಯಾಬ್, ಸುಸಜ್ಜಿತ ಸಿಸಿಯು ಘಟಕವನ್ನು ಸ್ಥಾಪಿಸಲಾಗಿದೆ. ದಿನದ ೨೪ ಗಂಟೆಯೂ ಚಿಕಿತ್ಸೆ ಲಭ್ಯವಿದೆ. ತುಮಕೂರಿನ ಗ್ರಾಮೀಣ ಪ್ರದೇಶದ ರೋಗಿಗಳಿಗೆ ಅತಿ ಕಡಿಮೆ ವೆಚ್ಚದಲ್ಲಿ ಹೃದಯ ರೋಗಕ್ಕೆ ಸಂಬಂಧಿಸಿದ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಆರೋಗ್ಯ ಕರ್ನಾಟಕ, ಆಯುಷ್ಮಾನ್ ಭಾರತ್, ಹಾಗೂ ಬಿ.ಪಿ.ಎಲ್. ಪಡಿತರ ಚೀಟಿ ಹೊಂದಿರುವ ರೋಗಿಗಳಿಗೂ ಸಹ ಶ್ರೀದೇವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯವಿದೆ ಎಂದು ಶ್ರೀದೇವಿ ಆಸ್ಪತ್ರೆಯ ಹೃದಯ ರೋಗ ಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ.ಸುರೇಶ್.ಎಸ್.ರವರು ತಿಳಿಸಿದರು.
ಹೃದ್ರೋಗ ಚಿಕಿತ್ಸಾಲಯ ಶಿಬಿರದಲ್ಲಿ ಮಾತನಾಡುತ್ತಾ ನೂತನ ವಿಭಾಗಗಳನ್ನು ಶ್ರೀದೇವಿ ಆಸ್ಪತ್ರೆಯಲ್ಲಿ ಪ್ರಾರಂಭಿಸಿ ಹೃದ್ರೋಗಿಗಳಿಗೆ ಚಿಕಿತ್ಸೆ ದೊರೆಯುವ ವ್ಯವಸ್ಥೆ ಮಾಡಲಾಗಿದೆ. ಚಿಕಿತ್ಸೆಗೆ ಆಂಜಿಯೋಗ್ರಾಂ ಮತ್ತು ಆಂಜಿಯೋಪ್ಲಾಸ್ಟಿ ಯಂತಹ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗುವುದು ಎಂದು ತಿಳಿಸಿದರು. ಈ ಹೃದ್ರೋಗ ಶಿಬಿರದಲ್ಲಿ ಸುಮಾರು 100 ಕ್ಕೂ ಹೆಚ್ಚು ಸಾರ್ವಜನಿಕರಿಗೆ ಉಚಿತವಾಗಿ ಹೃದ್ರೋಗ ತಪಾಸಣೆಗಳಾದ ಬಿ.ಪಿ. ರಕ್ತಪರೀಕ್ಷೆ ಇನ್ನೂ ಮುಂತಾದ ಚಿಕಿತ್ಸೆಗಳನ್ನು ಮಾಡಲಾಯಿತು.
ಹೃದಯರೋಗಕ್ಕೆ ಸಂಬಂಧಿಸಿದ ತೊಂದರೆಗಳ ಲಕ್ಷಣಗಳಾದ ಮೆಟ್ಟಿಲು ಹತ್ತುವಾಗ, ನಡೆಯುವಾಗ, ಆಟವಾಡುವಾಗ ಆಯಾಸವಾಗುವುದು, ಮೈ ಬೆವರುವುದು, ಉಸಿರಾಟದ ತೊಂದರೆ ಹಾಗೂ ಹೃದಯ ಸಂಬಂಧಿ ತೊಂದರೆಗಳಿಂದ ಬಳಲುತ್ತಿರುವವರು, ಹುಟ್ಟಿನಿಂದ ಹೃದಯ ಸಮಸ್ಯೆ, ಬೆಳವಣಿಗೆ ಕುಂಟಿತ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳು, ಹೆಚ್ಚು ದೇಹ ತೂಕ ಉಳ್ಳವರು, ಸಕ್ಕರೆ ಕಾಯಿಲೆಗಳಿಂದ ಬಳಲುತ್ತಿರುವವರು, ಪದೇ ಪದೇ ನೆಗಡಿ, ಜ್ವರ ಬರುವುದು, ಉಗುರು, ತುಟಿ ನೀಲಿಯಾಗುವುದು ಇತಂಹವರಿಗೆ ಉಚಿತ ಹೃದ್ರೋಗ ಶಿಬಿರವನ್ನು ಏರ್ಪಡಿಸಲಾಗಿತ್ತು. ಈ ತಪಾಸಣಾ ಶಿಬಿರದಲ್ಲಿ ಶ್ರೀದೇವಿ ಆಸ್ಪತ್ರೆಯ ಹೃದಯ ರೋಗ ಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ.ಎಸ್.ಸುರೇಶ್, ಶ್ರೀದೇವಿ ಆಸ್ಪತ್ರೆ ನೇತ್ರತಜ್ಞರಾದ ಡಾ.ಲಾವಣ್ಯ, ಡಾ.ಅಮೋಘ್.ಎಸ್, ಟೆಕ್ನಿಷಿಯನ್ ಎನ್.ಲಿಖಿತ್ಗೌಡ, ವಿಶ್ವನಾಥ್ ಹಾಗೂ ಗ್ರಾಮಸ್ಥರು, ಸಾರ್ವಜನಿಕರು ಶಿಬಿರದಲ್ಲಿ ಭಾಗವಹಿಸಿದರು.