ಕೊರೊನಾವೈರಸ್ ಹೊಸ ರೂಪಾಂತರ ಓಮಿಕ್ರಾನ್ ನಿಯಂತ್ರಿಸುವುದಕ್ಕೆ ಪ್ರತ್ಯೇಕ ಲಸಿಕೆ ಪತ್ತೆ ಮಾಡುತ್ತಿರುವುದರ ನಡುವೆ ಅಸ್ಟ್ರಾಜೆನೆಕಾ ತನ್ನ ಕೋವಿಡ್ -19 ಪ್ರತಿಕಾಯ ಕಾಕ್‌ಟೈಲ್ ಎವುಶೀಲ್ಡ್ ಕುರಿತು ಪ್ರಸ್ತಾಪಿಸಿದೆ. ಎವುಶೀಲ್ಡ್ ಔಷಧಿಯು ಓಮಿಕ್ರಾನ್ ರೂಪಾಂತರವನ್ನು ತಟಸ್ಥಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ ಎಂಬುದನ್ನು ಸಂಸ್ಥೆಯು ಕಂಡು ಕೊಂಡಿದೆ. ಇದು ಭವಿಷ್ಯದಲ್ಲಿ ಹೆಚ್ಚು ಬಳಕೆಯಾಗುವ ಭರವಸೆಯನ್ನು ತೋರಿಸುತ್ತಿದೆ.
ಯುಎಸ್ ಆಹಾರ ಮತ್ತು ಔಷಧೀಯ ಪ್ರಾಧಿಕಾರ ಸ್ವತಂತ್ರ್ಯ ಅಧ್ಯಯನಕಾರರು ಈ ಬಗ್ಗೆ ಅಧ್ಯಯನ ನಡೆಸಿದ್ದಾರೆ ಎಂದು ಕಂಪನಿಯು ತಿಳಿಸಿದೆ. ಓಮಿಕ್ರಾನ್ ವಿರುದ್ಧ ಎವುಶೀಲ್ಡ್ ಔಷಧಿ ಪರಿಣಾಮವನ್ನು ಅಳೆಯುವುದಕ್ಕೆ ಮತ್ತಷ್ಟು ಅಧ್ಯಯನಗಳನ್ನು ನಡೆಸಲಾಗುತ್ತಿದ್ದು, ಅಂಕಿ-ಅಂಶಗಳನ್ನು ಸಾಧ್ಯವಾದಷ್ಟು ಬೇಗ ಬಿಡುಗಡೆಗೊಳಿಸಲಾಗುವುದು ಎಂದು ಕಂಪನಿಯು ತಿಳಿಸಿದೆ.
ದೇಶದ ನಾಲ್ಕು ರಾಜ್ಯಗಳಲ್ಲಿ ಹೊಸ ಓಮಿಕ್ರಾನ್ ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 87ಕ್ಕೆ ಏರಿಕೆಯಾಗಿದೆ. ಗುರುವಾರ ಕರ್ನಾಟಕ, ತೆಲಂಗಾಣ, ಗುಜರಾತ್ ಮತ್ತು ದೆಹಲಿಯಲ್ಲಿ ಹೊಸ ಸೋಂಕಿತ ಪ್ರಕರಣಗಳು ವರದಿಯಾಗಿವೆ. ನವದೆಹಲಿಯಲ್ಲಿ 137 ದಿನಗಳ ನಂತರ ಮೊದಲ ಬಾರಿಗೆ ಒಂದೇ ದಿನ 85 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ.
ಭಾರತದಲ್ಲಿ ಗುರುವಾರ ಒಂದೇ ದಿನ 10 ಓಮಿಕ್ರಾನ್ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಕರ್ನಾಟಕದಲ್ಲಿ 5, ದೆಹಲಿಯಲ್ಲಿ 4 ಹಾಗೂ ಗುಜರಾತಿನಲ್ಲಿ 1 ಹೊಸ ಪ್ರಕರಣಗಳು ವರದಿಯಾಗಿವೆ. ಆ ಮೂಲಕ ಕರ್ನಾಟಕದಲ್ಲಿ ಓಮಿಕ್ರಾನ್ ಸೋಂಕಿತ ಪ್ರಕರಣಗಳ ಸಂಖ್ಯೆ 8ಕ್ಕೆ ಏರಿಕೆಯಾಗಿದ್ದು, ದೆಹಲಿಯಲ್ಲಿ ಈ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಗುಜರಾತಿನಲ್ಲಿ ಐದು ಓಮಿಕ್ರಾನ್ ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. ಮಹಾರಾಷ್ಟ್ರದಲ್ಲಿ ಇದುವರೆಗೆ ಅತಿಹೆಚ್ಚು ಒಮಿಕ್ರಾನ್ ಪ್ರಕರಣಗಳು 32, ರಾಜಸ್ಥಾನದಲ್ಲಿ 17, ಕರ್ನಾಟಕ 8, ಗುಜರಾತ್ 5, ಕೇರಳ 5, ತೆಲಂಗಾಣ 2, ತಮಿಳುನಾಡು 1 ಓಮಿಕ್ರಾನ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಇದರ ಜೊತೆಗೆ ಪಶ್ಚಿಮ ಬಂಗಾಳ 1, ಆಂಧ್ರಪ್ರದೇಶ 1, ಮತ್ತು ದೆಹಲಿಯ ಕೇಂದ್ರಾಡಳಿತ ಪ್ರದೇಶಗಳು, 10, ಚಂಡೀಗಢ 1 ಪ್ರಕರಣ ಪತ್ತೆಯಾಗಿತ್ತು. ಡಿಸೆಂಬರ್ 2ರಂದು ಮೊದಲ ಬಾರಿಗೆ ಕರ್ನಾಟಕದಲ್ಲಿ ಎರಡು ಓಮಿಕ್ರಾನ್ ಸೋಂಕಿತ ಪ್ರಕರಣಗಳು ದೃಢಪಟ್ಟಿದ್ದವು.
ಕೊರೊನಾವೈರಸ್ ಹೊಸ ರೂಪಾಂತರ ಓಮಿಕ್ರಾನ್ ಸೋಂಕು ವ್ಯಾಪಕ ಹಾಗೂ ವೇಗವಾಗಿ ಹರಡುತ್ತಿದ್ದು, ಮಹಾರಾಷ್ಟ್ರದಲ್ಲಿ ಹೊಸ ತಳಿಯ ಅಟ್ಟಹಾಸ ಹೆಚ್ಚಾಗುವ ಅಪಾಯವಿದೆ. ಜನವರಿ ತಿಂಗಳಿನಲ್ಲಿ ಮಹಾರಾಷ್ಟ್ರ ಅತಿಹೆಚ್ಚು ಓಮಿಕ್ರಾನ್ ಪ್ರಕರಣಗಳನ್ನು ವರದಿ ಮಾಡುವ ಸಾಧ್ಯತೆಯಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಓಮಿಕ್ರಾನ್ ಸೋಂಕು ರಾಜ್ಯದ ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೂ ಹರಡುತ್ತಿದೆ ಎಂದು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪ್ರದೀಪ್ ವ್ಯಾಸ ತಿಳಿಸಿದ್ದಾರೆ. ಮಹಾರಾಷ್ಟ್ರ ಹೊರತಾಗಿ, ಕರ್ನಾಟಕ, ರಾಜಸ್ಥಾನ, ಗುಜರಾತ್, ಆಂಧ್ರ ಪ್ರದೇಶ, ನವದೆಹಲಿ ಮತ್ತು ಚಂಡೀಗಢದಲ್ಲಿ ಓಮಿಕ್ರಾನ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯ ಪ್ರಕಾರ, ಓಮಿಕ್ರಾನ್ ಅಪಾಯವನ್ನು ಎದುರಿಸುತ್ತಿರುವ ರಾಷ್ಟ್ರಗಳಿಂದ ಆಗಮಿಸುವ ಪ್ರಯಾಣಿಕರಿಗೆ RT-PCR ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ. ಇದರ ಜೊತೆಗೆ ವೈದ್ಯಕೀಯ ಪರೀಕ್ಷೆಯ ಅಂತಿಮ ವರದಿಯ ಕೈ ಸೇರುವವರೆಗೂ ವಿಮಾನ ನಿಲ್ದಾಣದಿಂದ ಹೊರಡುವುದಕ್ಕೆ ಅನುಮತಿ ಇರುವುದಿಲ್ಲ.
ಭಾರತದ ಆರು ವಿಮಾನ ನಿಲ್ದಾಣಗಳಿಗೆ ಪ್ರಯಾಣಿಸಬೇಕಿದ್ದಲ್ಲಿ ಡಿಸೆಂಬರ್ 20ರೊಗಳೆ ಮುಂಗಡ ಟಿಕೆಟ್ ಬುಕ್ಕಿಂಗ್ ಮಾಡಿಕೊಂಡಿರಬೇಕು. ದೆಹಲಿ, ಮುಂಬೈ, ಕೋಲ್ಕತ್ತಾ, ಚೆನ್ನೈ, ಬೆಂಗಳೂರು ಮತ್ತು ಹೈದ್ರಾಬಾದ್ ವಿಮಾನ ನಿಲ್ದಾಣಗಳಲ್ಲಿ ಈ ನಿಯಮವನ್ನು ಜಾರಿಗೊಳಿಸಲಾಗುತ್ತಿದೆ. ಓಮಿಕ್ರಾನ್ ಅಪಾಯವನ್ನು ಎದುರಿಸುತ್ತಿರುವ ರಾಷ್ಟ್ರಗಳನ್ನು ಈಗಾಗಲೇ ಪಟ್ಟಿ ಮಾಡಲಾಗಿದೆ. ಯುಕೆ, ದಕ್ಷಿಣ ಆಫ್ರಿಕಾ, ಬ್ರೆಜಿಲ್, ಬೋಟ್ಸಾವಾನಾ, ಜಿಂಬಾಬ್ವೆ, ತಂಜಾನಿಯಾ, ಹಾಂಗ್ ಕಾಂಗ್, ಚೀನಾ, ಘಾನಾ, ಮಾರಿಷಸ್, ನ್ಯೂಜಿಲೆಂಡ್ ಮತ್ತು ಇಸ್ರೇಲ್ ರಾಷ್ಟ್ರಗಳು ಓಮಿಕ್ರಾನ್ ಅಪಾಯವನ್ನು ಎದುರಿಸುತ್ತಿರುವ ರಾಷ್ಟ್ರಗಳು ಎಂದು ಗುರುತಿಸಲಾಗಿದೆ.