ತುಮಕೂರು: ನಗರದ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಮತ್ತು ಕ್ಯಾತ್ ಲ್ಯಾಬ್ ಸ್ಥಾಪಿಸಲಾಗಿದೆ. ಕ್ಯಾತ್ಲ್ಯಾಬ್ನಲ್ಲಿ ಹೃದ್ರೋಗಕ್ಕೆ ಪತ್ತೆ ಮತ್ತು ಚಿಕಿತ್ಸೆಗೆ ಆಂಜಿಯೋಗ್ರಾಂ ಮತ್ತು ಆಂಜಿಯೋಪ್ಲಾಸ್ಟಿ ಯಂತಹ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗುವುದು ಎಂದು ಶ್ರೀದೇವಿ ಶಿಕ್ಷಣ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಡಾ.ಎಂ.ಆರ್. ಹುಲಿನಾಯ್ಕರ್ ರವರು ತಿಳಿಸಿದರು.
ನಗರದ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಆಸ್ಪತ್ರೆಯ ಆವರಣದಲ್ಲಿ ನೂತನ ಅತ್ಯಾಧುನಿಕ ಹೃದಯ ರೋಗಕ್ಕೆ ಸಂಬಂಧಿಸಿದ ಸುಸಜ್ಜಿತ ಕ್ಯಾತ್ಲ್ಯಾಬ್ನ್ನು ಉದ್ಘಾಟಿಸಲಾಗಿತ್ತು.
ಶ್ರೀದೇವಿ ವೈದ್ಯಕೀಯ ನಿರ್ದೇಶಕರಾದ ಡಾ.ರಮಣ್ ಆರ್ ಹುಲಿನಾಯ್ಕರ್ರವರು ಮಾತನಾಡುತ್ತಾ ವೈದ್ಯಕೀಯ ಶಿಕ್ಷಣ ದಿನದಿಂದ ದಿನಕ್ಕೆ ಬದಲಾವಣೆ ಹೊಂದುತ್ತಿದ್ದು ಈ ಬದಲಾವಣೆಗೆ ಆಧುನಿಕ ಯಂತ್ರೋಪಕರಣಗಳು ಕಾರಣವಾಗಿದೆ. ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳು ಗುರುತಿಸುವ ಹಾಗೂ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಅತ್ಯಾಧುನಿಕ ಉಪಕರಣಗಳನ್ನು ಒಳಗೊಂಡ ನೂತನ ವಿಭಾಗಗಳನ್ನು ಶ್ರೀದೇವಿ ಆಸ್ಪತ್ರೆಯಲ್ಲಿ ಪ್ರಾರಂಭಿಸಿ ಹೃದ್ರೋಗಿಗಳಿಗೆ ಚಿಕಿತ್ಸೆ ದೊರೆಯುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. ಈ ಅತ್ಯಾಧುನಿಕ ಚಿಕಿತ್ಸೆಯು ತುಮಕೂರು ಜಿಲ್ಲೆಯ, ವಿಶೇಷವಾಗಿ ಗ್ರಾಮೀಣ ಭಾಗದ ಜನರಿಗೆ ವರದಾನವಾಗಿದೆ.
ಇದೇ ಸಂದರ್ಭದಲ್ಲಿ ಶ್ರೀದೇವಿ ಆಸ್ಪತ್ರೆಯ ಹೃದಯ ರೋಗ ಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ.ಎಸ್.ಸುರೇಶ್ರವರು ಮಾತನಾಡುತ್ತಾ ಪದವಿ ಮತ್ತು ವೈದ್ಯಕೀಯ ಶಿಕ್ಷಣ ಹಾಗೂ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣದ ಸೌಲಭ್ಯಗಳಿಂದ ಇದರ ಜೊತೆಗೆ ವಿಶೇಷ ತಜ್ಞತೆ ಹೊಂದಿದ ನೂತನ ವಿಭಾಗಗಳನ್ನು ಪ್ರಾರಂಭಿಸಲಾಗಿದೆ. ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ವಿಶೇಷ ತರಬೇತಿ ಹೊಂದಿದ ನುರಿತ ತಜ್ಞ ವೈದ್ಯರನ್ನು ನಿಯೋಜಿಸಿಕೊಂಡು ಪ್ರಯೋಗಾಲಯ ಮತ್ತು ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗೆ ಸಂಬಂಧಪಟ್ಟ ವಿಶೇಷ ಉಪಕರಣಗಳನ್ನು ಅಳವಡಿಸಲಾಗಿದೆ. ಹೃದಯ ರೋಗ ಚಿಕಿತ್ಸಾ, ಅತ್ಯಾಧುನಿಕ ಕ್ಯಾತ್ಲ್ಯಾಬ್, ಸುಸಜ್ಜಿತ ಸಿಸಿಯು ಘಟಕವನ್ನು ಹೊಂದಿದೆ. ದಿನದ ೨೪ ಗಂಟೆಯೂ ಚಿಕಿತ್ಸೆಗೆ ಲಭ್ಯವಿದೆ. ತುಮಕೂರಿನ ಗ್ರಾಮೀಣ ಪ್ರದೇಶದ ರೋಗಿಗಳಿಗೆ ಅತಿ ಕಡಿಮೆ ವೆಚ್ಚದಲ್ಲಿ ಹೃದಯ ರೋಗಕ್ಕೆ ಸಂಬಂಧ ಸಂಬಂಧಿಸಿದ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಆರೋಗ್ಯ ಕರ್ನಾಟಕ, ಆಯುಷ್ಮಾನ್ ಭಾರತ್, ಹಾಗೂ ಬಿ.ಪಿ.ಎಲ್. ಪಡಿತರ ಚೀಟಿ ಹೊಂದಿರುವ ರೋಗಿಗಳಿಗೂ ಸಹ ಶ್ರೀ ದೇವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಶ್ರೀದೇವಿ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕರಾದ ಎಂ.ಎಸ್.ಪಾಟೀಲ್, ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯದ ಉಪಪ್ರಾಂಶುಪಾಲರಾದ ಡಾ.ರೇಖಾ ಗುರುಮೂರ್ತಿ, ಶ್ರೀದೇವಿ ಆಸ್ಪತ್ರೆ ನೇತ್ರತಜ್ಞರಾದ ಡಾ.ಲಾವಣ್ಯ, ಡಾ.ಮನೋನ್ಮಣಿ, ಹೃದಯ ರೋಗ ಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ.ಎಸ್.ಸುರೇಶ್, ಶ್ರೀದೇವಿ ವೈದ್ಯಕೀಯ ಅಧೀಕ್ಷಕರಾದ ಡಾ.ಚೆನ್ನಮಲ್ಲಯ್ಯ, ಶ್ರೀದೇವಿ ಮ್ಯಾರ್ಕೆಟಿಂಗ್ ಮ್ಯಾನೇಜರ್ ಪಿ.ಸತೀಶ್, ಶ್ರೀದೇವಿ ಶುಶ್ರೂಷಕ ಅಧೀಕ್ಷಕರಾದ ಆರ್.ಆನಂದ್, ಬಯೋಮೆಡಿಕಲ್ ಇಂಜಿನಿಯರ್ ಕಾಂತರಾಜು, ಹಾಗೂ ವಿವಿಧ ವಿಭಾಗದ ಮುಖ್ಯಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.