ಬೆಂಗಳೂರು : ಓಮಿಕ್ರಾನ್ ರೂಪಾಂತರ ತಳಿ ಬಗ್ಗೆ ತೀವ್ರ ಆತಂಕ ಬೇಡ. ರಾಜ್ಯದಲ್ಲಿ ಲಾಕ್ಡೌನ್ ಮಾಡುವ ಯಾವುದೇ ಪ್ರಸ್ತಾಪ ಇಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.
ಕೆಲವರು ಲಾಕ್ಡೌನ್ ಆಗಲಿದೆ ಎಂಬ ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹರಡುತ್ತಿದೆ. ಸಾರ್ವಜನಿಕರು ಇಂತಹ ಊಹಾಪೋಹಗಳಿಗೆ ಕಿವಿಗೊಡಬಾರದು. ಲಾಕ್ಡೌನ್ ಮಾಡುವ ಅಗತ್ಯವೇ ಇಲ್ಲ. ಸರ್ಕಾರದ ಮುಂದೆ ಅಂತಹ ಪ್ರಸ್ತಾಪವೂ ಇಲ್ಲ ಎಂದು ಅವರು ಸೋಮವಾರ ಸುದ್ದಿಗಾರರೊಂಧಿಗೆ ಮಾತನಾಡಿದರು.
ಇದನ್ನು ಮೂರನೇ ಅಲೆ ಎಂದು ಹೇಳಲು ಸಾಧ್ಯವಿಲ್ಲ. ಈ ಹಿಂದೆ ಕಂಡುಬಂದಿದ್ದ ಡೆಲ್ಟಾ ವೈರಾಣು ಒಂಭತ್ತು ತಿಂಗಳ ಕಾಳ ತೀವ್ರ ಕಾಟ ನೀಡಿತ್ತು. ಆದರೆ, ಅದಕ್ಕೆ ಹೋಲಿಸಿದರೆ ಓಮಿಕ್ರಾನ್ ಅಷ್ಟು ತೀವ್ರವಾಗಿಲ್ಲ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಇದರ ಬಗ್ಗೆ ಗೊಂದಲಮಯ ಸುದ್ದಿಗಳನ್ನು ಹರಡಬಾರದು ಎಂದು ಅವರು ಹೇಳಿದರು.
ಓಮಿಕ್ರಾನ್ ವೈರಸ್ ತಗುಲಿದಂತಹ ರೋಗಿಗಳನ್ನು ತಪಾಸಣೆ ಮಾಡಿದಾಗ ಅವರಲ್ಲಿ ತೀವ್ರತರಹದ ರೋಗಲಕ್ಷಣಗಳು ಕಂಡುಬಂದಿಲ್ಲ. ಈಗಾಗಲೇ ಈ ವೈರಸ್ ಕಂಡುಬಂದ ದೇಶಗಳಲ್ಲಿ ಆಸ್ಪತ್ರೆಗೆ ಬರುವವರು ಮತ್ತು ಐಸಿಯುಗಳಲ್ಲಿ ದಾಖಲಾಗುವ ಪ್ರಮಾಣವೂ ಕಡಿಮೆ ಇದೆ ಎಂದು ಹೇಳಿದರು.
ಮೊದಲು ಕಂಡುಬಂದ ಕೊರೊನಾ ವೈರಸ್ಗಳಲ್ಲಿ ರುಚಿ ಮತ್ತು ವಾಸನೆ ಹೊರಟುಹೋಗುತ್ತಿತ್ತು. ಆದರೆ, ಓಮಿಕ್ರಾನ್ ವೈರಸ್ ಬಂದವರಲ್ಲಿ ಇಂತಹ ಲಕ್ಷಣ ಇಲ್ಲ. ಕೇವಲ ವಾಂತಿ, ಪಲ್ಸ್ ರೇಟ್ ಹೆಚ್ಚಾಗುವುದು, ಸುಸ್ತು, ಆಯಾಸ ಇರುತ್ತದೆ. ಇಂತಹ ಸಾಧಾರಣ ಸಮಸ್ಯೆಗಳು ಮಾತ್ರ ಕಂಡುಬಂದಿವೆ ಎಂದು ವಿವರಿಸಿದರು. ಈಗಷ್ಟೇ ಚೇತರಿಕೆಯಾಗುತ್ತದೆ: ಈ ಹಿಂದಿನ ಲಾಕ್ಡೌನ್ಗಳಿಂದ ಜನರು ಸಾಕಷ್ಟು ತೊಂದರೆ ಆನುಭವಿಸಿದ್ದಾರೆ. ಕುಟುಂಬದವರನ್ನು ಕಳೆದುಕೊಂಡಿದ್ದಾರೆ, ಉದ್ಯೋಗ ಇಲ್ಲದಂತಾಗಿತ್ತು, ವ್ಯಾಪಾರ ವ್ಯವಹಾರದಲ್ಲಿ ನಷ್ಟವಾಗಿತ್ತು. ಈಗಷ್ಟೇ ಎಲ್ಲವೂ ಚೇತರಿಕೆಯಾಗುತ್ತಿದೆ. ಈ ಮಧ್ಯೆ ಮತ್ತೆ ಲಾಕ್ಡೌನ್ ಮಾಡಲಾಗುತ್ತದೆ ಎಂಬ ಸುದ್ದಿಯನ್ನು ಹರಡಿ ಅವರನ್ನು ಮತ್ತಷ್ಟು ಆತಂಕದತ್ತ ದೂಡಬಾರದು ಎಂದು ಅವರು ಮನವಿ ಮಾಡಿದರು.
ಸಾಮಾಜಿಕ ಜಾಲತಾಣ ಇರವುದು ಸತ್ಯಸುದ್ದಿಯನ್ನು ವೇಗವಾಗಿ ಹರಡುವುದಕ್ಕೆ. ಆದರೆ, ಕೊರೊನಾ ಲಾಕ್ಡೌನ್ ವಿಷಯದಲ್ಲಿ ಸುಳ್ಳು ಸುದ್ದಿ ಹರಡಲಾಗುತ್ತಿದೆ. ಜನ ಈಗಾಗಲೇ ಸಾಕಷ್ಟು ನೊಂದಿದ್ದಾರೆ. ಅವರನ್ನು ಮತ್ತೆ ಹೆದರಿಸುವ ಕೆಲಸ ಮಾಡಬಾರದು ಎಂದು ಹೇಳಿದರು.