ಅತ್ಯಂತ ಶ್ರೇಷ್ಠ ವಿದ್ವಾಂಸರೂ, ಲೇಖಕರು, ಭಾರತೀಯ ತತ್ವ ಶಾಸ್ತ್ರಗಳ ನಿಷ್ಣಾತರು, ವೇದ ವಾರಿಧಿಗಳು, ವೇದಾಂತದ ಅನುಪಮ ಸಾಧಕರು, ಅನುಷ್ಠಾನ ಪರರು, ನಿರ್ಭೀತಿಯಿಂದ ಸಾವಿರ ಜನದ ಮಧ್ಯದಲ್ಲೂ ಸತ್ಯ ಹೇಳುತ್ತಿದ್ದ ಮಹಾತ್ಮರು, ಭಾರತದ ರಾಷ್ಟ್ರೀಯವಾದಿಗಳು, ಇಂಗ್ಲೀಷ್ ಭಾಷೆಯ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದವರು, ಭರತ ಖಂಡದ ಜನರಿಗೆ ಮತ್ತು ಸಾವಿರಾರು ಪಾಶ್ಚಿಮಾತ್ಯರಿಗೆ ಸ್ಫೂರ್ತಿಯಾಗಿದ್ದವರು ಆದ ಶ್ರೀ ಕೆ.ಎಸ್. ನಾರಾಯಣಾಚಾರ್ಯರು ಇಂದು ಬೆಳಿಗ್ಗೆ ಎರಡು ಗಂಟೆಯ ಸುಮಾರಿಗೆ ಆಚಾರ್ಯ ತಿರುವಡಿಗಳ ಮೂಲಕ ಶ್ರೀಮನ್ನಾರಾಯಣ ಸಾಯುಜ್ಯ ಸೇರಿದ್ದಾರೆ.
ಇವರಿಗೆ ರಾಮಾಯಣಾಚಾರ್ಯ ಎಂದೆ ಹೆಸರು. ಶ್ರೀ ವಾಲ್ಮೀಕಿ ರಾಮಾಯಣದ ಸರ್ವಸ್ವ ಇವರ ಕಣ ಕಣದಲ್ಲಿ ಸೇರಿತ್ತು. ಮಹಾಭಾರತ, ಭಗವದ್ಗೀತೆ, ಪಾದುಕಾಸಹಸ್ರ, ಶ್ರೀ ರಾಮಾನುಜರ ನವಗ್ರಂಥಗಳು, ಪುರಾಣಗಳು, ಇತರ ದಾರ್ಶನಿಕರ ಗ್ರಂಥಗಳು ಇವರ ಅಧ್ಯಯನದ ಮತ್ತು ಪ್ರವಚನದ ಪ್ರಮುಖ ಆಕರಗಳಾಗಿದ್ದವು. ಶ್ರೀ ವೈಷ್ಣವ ಧರ್ಮದ ಸಕಲ ಆಚಾರ್ಯರ ಎಲ್ಲ ಗ್ರಂಥಗಳು ಇವರಿಗೆ ಕರತಲಾಮಲಕವಾಗಿದ್ದವು. ಆಂಗ್ಲಭಾಷೆಯಲ್ಲಿ ಅಪೂರ್ವ ಪ್ರೌಢಿಮೆ ಹೊಂದಿದ್ದು ಎಲ್ಲ ರೀತಿಯ ಆಂಗ್ಲ ಸಾಹಿತ್ಯ ಓದಿದ್ದರು.
ಭಾರತದ ಆತ್ಮವನ್ನು ಅದರ ಮೂಲ ಸಿದ್ಧಾಂತಗಳನ್ನು ಋಷಿಗಳ ವಾಣಿಯೊಂದಿಗೆ ಉದ್ಧರಿಸಿ ಭಯವಿಲ್ಲದೆ ಸಿದ್ಧಾಂತ ಪ್ರತಿಪಾದನೆ ಮಾಡುತ್ತಿದ್ದರು.
ನಾವೂ ಸಹ ಅವರ ಪ್ರವಚನಗಳನ್ನು ಕೇಳುತ್ತಲೇ ಬೆಳೆದವು. ಮೇಲುಕೋಟೆಯ ನಮ್ಮ ಮನೆತನದೊಂದಿಗೆ ಅವರ ಮತ್ತು ಅವರ ಕುಟುಂಬದ ಒಡನಾಟ ಬಹುಕಾಲದಿಂದ ಸೌಹಾರ್ದಯುತವಾಗಿತ್ತು.
ಅವರು ಇಂದು ತಮ್ಮ ಭೌತಿಕ ಶರೀರವನ್ನು ತ್ಯಾಗ ಮಾಡಿ ಆಚಾರ್ಯನ ಶ್ರೀ ಪಾದಗಳ ಮೂಲಕ ಶ್ರೀ ಪರಮಪದವನ್ನು ಹೊಂದಿದ್ದಾರೆ. ಅವರ ಭೌತಿಕ ಶರೀರ ಇಲ್ಲವಾದರೂ ಅವರ ಧ್ವನಿಗಳು, ಅವರ ವೀಡಿಯೋಗಳು ಮತ್ತು ಅವರ ಬರಹರೂಪಗಳು ಜಗತ್ತಿಗೆ ಮುಂದೆಯೂ ಪ್ರೇರಣೆಯನ್ನು ಒದಗಿಸಲಿವೆ.
ಅವರ ಕುಟುಂಬದ ಸದಸ್ಯರಿಗೆ ಭಗವಂತ ನಾರಾಯಣಾಚಾರ್ಯರ ಅಗಲಿಕೆಯ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ಓಂ ನಾರಾಯಣಸಾಯುಜ್ಯಮವಾಪ್ನೋತಿ ನಾರಾಯಣಸಾಯುಜ್ಯಮವಾಪ್ನೋತಿ.
ಅವರಿಗೆ ಅಶ್ರುಪೂರ್ವಕ ನಮನಗಳು.