ಸಮಸ್ತ ಮಾನವಕೋಟಿಯ ಉದ್ಧಾರಕ್ಕೆ ಇರುವ ಸ್ತೋತ್ರ ವಿಷ್ಣುಸಹಸ್ರನಾಮ. ಹಾಗಾಗಿಯೇ ಭೀಷ್ಮಾಚಾರ್ಯರು ಇದನ್ನು ಕಲಿಯುಗಕ್ಕೆ ವರ ಮತ್ತು ಆತ್ಮೋನ್ನತಿಯ ಮಾರ್ಗವೆಂದು ಘೋಷಿಸಿದರು. ಸರ್ವಶಾಸ್ತ್ರಗಳ ಸಾರೋದ್ಧಾರವೇ ವಿಷ್ಣುಸಹಸ್ರನಾಮ ಎಂಬುದು ಬೃಹತೀಸಹಸ್ರದ ಸಾರ.ಸಂಸಾರವೇ ಪರಮ ಸುಖ ಆಗಲಾರದು. ಆ ಸಖ ಇದ್ದರೇನೇ ಸುಖ. ಪರಮಾತ್ಮನ ನಾಮಸ್ಮರಣೆಯಿಂದ ಮಾತ್ರವೇ ಕುಲಕೋಟಿ ಉದ್ಧಾರವಾಗುತ್ತದೆ. ಜಗದ್ಗುರು ಶಂಕರಾಚಾರ್ಯರು ಗೇಯಂ ಗೀತಾ ನಾಮ ಸಹಸ್ರಂ ಎಂದಿದ್ದಾರೆ.ವೇದದ ಪ್ರತಿ ಮಾತಿಗೆ ಮೂರು ಮೂರು ಅರ್ಥವಿದ್ದರೆ, ಮಹಾಭಾರತದ ಪ್ರತಿ ಮಾತಿಗೆ ಹತ್ತು ಹತ್ತು ಅರ್ಥವಿದೆ. ವಿಷ್ಣುಸಹಸ್ರನಾಮದ ಪ್ರತಿ ನಾಮಕ್ಕೆ ನೂರು ನೂರು ಅರ್ಥವಿರುತ್ತದೆ. ಹಾಗಾಗಿಯೇ ವಿಷ್ಣುಸಹಸ್ರನಾಮವನ್ನು ಶ್ರದ್ಧಾಪೂರ್ವಕವಾಗಿ ಹೇಳಿದರೆ ಪರಮಾತ್ಮನ ಲಕ್ಷನಾಮಗಳನ್ನು ಜಪಿಸಿದ ಪುಣ್ಯ ಪ್ರಾಪ್ತಿಯಾಗುತ್ತದೆ.
ಪರಮಾತ್ಮನನ್ನು ಬೇರೆ ಬೇರೆ ನಾಮಗಳಿಂದ ಅರ್ಚಿಸುವ ಸಂಪ್ರದಾಯ ಜಗತ್ತಿನ ನಾನಾ ಸಮುದಾಯಗಳಲ್ಲಿ ಪ್ರಚಲಿತವಿದೆ. ದೇವನೊಬ್ಬ ನಾಮ ಹಲವು ಎಂಬಂತೆ. ವಿಷ್ಣುಸಹಸ್ರನಾಮಕ್ಕಿರುವ ದಿವ್ಯತೆ, ಶ್ರೇಷ್ಠತೆ ಹಾಗೂ ಪಾವಿತ್ರ್ಯತೆಗಳು ಅನನ್ಯ. ವಿಷ್ಣುಸಹಸ್ರನಾಮ ಪಾರಾಯಣದಿಂದ ಸಕಲ ಇಷ್ಟಾರ್ಥಗಳು ನೆರವೇರುತ್ತದೆ.
ಪಾರಾಯಣ ಎಂದರೆ:
ವಿಷ್ಣುಸಹಸ್ರನಾಮ ಪಾರಾಯಣ ಮಾಡುವವರು ತನ್ಮಯತೆಯಿಂದ, ತದೇಕಚಿತ್ತದಿಂದ ಮಾಡಬೇಕು. ವಿಷ್ಣುಸಹಸ್ರನಾಮದಲ್ಲಿನ ನಾಮಮಂತ್ರ ತರಂಗಗಳು ಸುತ್ತಲಿನ ವಾತಾವರಣವನ್ನು ಶುದ್ಧಿಗೊಳಿಸಿ, ಹೃದಯದಲ್ಲಿ ದೇವಿಕ ಆನಂದವನ್ನು ತರುತ್ತದೆ. ಕುಟುಂಬದವರೆಲ್ಲರೂ ಒಟ್ಟಿಗೆ ಪಾರಾಯಣ ಮಾಡುವುದರಿಂದ ಸಕಲ ಇಷ್ಟಾರ್ಥಗಳು ನೆರವೇರುತ್ತದೆ.
ಸ್ವರ ತರಂಗಗಳ ಪ್ರಭಾವ:
ಬೃಹತೀಸಹಸ್ರ ಗ್ರಂಥವು ಋಗ್ವೇದದ ಒಂದುಸಾವಿರ ಋಕ್ ಗಳ ಸುಂದರಹಾರ. ಬೃಹತೀ ಛಂದಸ್ಸಿನಲ್ಲಿ ಪ್ರತಿಸ್ತೋತ್ರದಲ್ಲೂ ಮೂವತ್ತಾರು ಸ್ವರಾಕ್ಷರ ಮತ್ತು ವ್ಯಂಜನಾಕ್ಷರ ಇರುತ್ತದೆ. ಒಂದು ಸಾವಿರ ಸ್ತೋತ್ರದಲ್ಲಿ ಎಪ್ಪತ್ತೆರಡು ಸಾವಿರ ಅಕ್ಷರಗಳು. ಬೃಹತೀ ಸಹಸ್ರದ ವ್ಯಾಖ್ಯಾನವೇ ವಿಷ್ಣುಸಹಸ್ರನಾಮ ಸ್ತೋತ್ರ. ಎಪ್ಪತ್ತೆರಡು ಸಾವಿರ ನಾಡಿಗಳನ್ನು ಸಂಸ್ಕಾರ ಮಾಡಿ ನಾಡೀ ಶುದ್ಧಿ, ದೇಹ ಶುದ್ಧಿ ಹಾಗೂ ಮನಶುದ್ಧಿ ಮಾಡುತ್ತದೆ.
ಸಂವಿಧಾನ:
ಮಹಾಮಂತ್ರದ ದೈವ ಮಹಾವಿಷ್ಣು. ನೀಡಿದ ಋಷಿ ವೇದವ್ಯಾಸರು. ಅನುಷ್ಟಪ್ ಛಂದಸ್ಸು. ಈ ಮಂತ್ರದ ಬೀಜಭಾಗ ಅಮೃತಾಂಶೂದ್ಭವೋ ಭಾನುಃ ಸ್ತೋತ್ರ. ಮಹಾಶಕ್ತಿ ದೇವಕೀನಂದನಃ ಸ್ರಷ್ಟಾ ಸ್ತೋತ್ರ. ಪರಮ ಮಂತ್ರ ಉದ್ಭವಃ ಕ್ಷೆಭಣೋ ದೇವಃ. ಅನಾವರಣ ಭಾಗ ಶಂಖಭೃತ್ ನಂದಕೀ ಚಕ್ರ ಸ್ತೋತ್ರ. ಅಸ್ತ್ರ ಭಾಗ ಶಾಂರ್ಙಧನ್ವಾ ಗದಾಧರಃ.ಜಾಗೃತಿಭಾಗ ರಥಾಂಗಪಾಣಿಃ ಅಕ್ಷೆಭ್ಯ. ಕವಚಭಾಗ ತ್ರಿಸಾಮಗಸಾಮ. ಮಂತ್ರದ ಮೂಲ ಪ್ರೇರಣೆ ಆನಂದಂ ಪರಬ್ರಹ್ಮ. ಮಂತ್ರದ ಪಹರೆ ಋತುಃ ಸುದರ್ಶನಃ ಕಾಲಃ. ಜಗದೊಡೆಯ ವಿಷ್ಣುವೇ ಧ್ಯಾನ.
ಸಕಲ ಪುರುಷಾರ್ಥ ಸಿದ್ಧಿ:
ಶರಪಂಜರದ ಮೇಲೆ ಮಲಗಿದ್ದ ಭೀಷ್ಮರನ್ನು ಧರ್ಮರಾಜ ಕೇಳುತ್ತಾನೆ. ಇಡೀ ಜಗತ್ತಿನ ದೈವ ಯಾವುದು ? ಸಮಸ್ತ ಧರ್ಮಗಳಲ್ಲಿ ಶ್ರೇಷ್ಠ ಧರ್ಮ ಯಾವುದು? ಯಾರ ಜಪ ಮಾಡುವುದರಿಂದ ಸಂಸಾರಬಂಧನದಿಂದ, ಜನನ- ಮರಣಗಳ ಚಕ್ರದಿಂದ ಮುಕ್ತರಾಗಬಹುದು? ಇದಕ್ಕೆಲ್ಲ ಒಂದೇ ಉತ್ತರ ವಿಷ್ಣು ಸಹಸ್ರನಾಮ ಸ್ತೋತ್ರ. ಮಂತ್ರದ್ರಷ್ಟಾರರಾದ ಋಷಿಮುನಿಗಳಿಂದ ಸ್ತುತಿಸಲ್ಪಟ್ಟ ವಿಷ್ಣುಸಹಸ್ರನಾಮ ಸ್ತೋತ್ರ ಪಾರಾಯಣದಿಂದ ಸಕಲ ಪುರುಷಾರ್ಥಗಳೂ ಸಿದ್ಧಿಯಾಗುತ್ತದೆ.
– ವೇ.ಬ್ರ.ಶ್ರೀ. ಸುಧಾಕರ ಶರ್ಮ