ತುಮಕೂರು : ಭಾರತದಲ್ಲಿ ಹಲವು ಕ್ಷೇತ್ರಗಳಲ್ಲಿ ವೈಜ್ಞಾನಿಕವಾಗಿ ಸಂಶೋಧನೆಗಳು ನಡೆಯುತ್ತಿದ್ದು, ಸಂಶೋಧಿಸಿದ ಅವಿಷ್ಕಾರಗಳನ್ನು ಬೌದ್ಧಿಕ ಆಸ್ತಿಯಾಗಿ ರಕ್ಷಿಸುವಲ್ಲಿ ಭಾರತೀಯರಲ್ಲಿ ಅರಿವು ಹೆಚ್ಚಿಲ್ಲದೆ ಉದಾಸೀನ ತೋರಿದ ಪರಿಣಾಮವಾಗಿ ಹಲವು ಆರ್ಥಿಕ ಅವಕಾಶಗಳು ಕೈತಪ್ಪಿ ಇತರೆ ದೇಶಗಳ ಸಂಶೋಧಕರಿಗೆ ಲಾಭವಾಗಿದೆ ಎಂದು ಬೆಂಗಳೂರಿನ ಐಸೆಟ್-ಐಲ್ಯಾಬ್‌ನ ಸಂಶೋಧನಾ ನಿರ್ದೇಶಕರಾದ ಡಾ.ಸಿರಿಲ್ ಪ್ರಸನ್ನರಾಜ್‌ರವರು ನುಡಿದರು.
ನಗರದ ಶ್ರೀದೇವಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಏರ್ಪಡಿಸಿದ್ದ ಒಂದು ದಿನದ ’ಉಪನ್ಯಾಸಕ ಅಭಿವೃದ್ಧಿ ಕಾರ್ಯಾಗಾರದಲ್ಲಿ’ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡುತ್ತಿದ್ದರು. ಹೊಸ ಪೇಟೆಂಟ್‌ಗಳನ್ನು ಪಡೆಯುವಲ್ಲಿ ೨೦೧೯ ರ ವರದಿಗಳ ಪ್ರಕಾರ ಚೀನಾ ದೇಶವು 14 ಲಕ್ಷ ಕ್ಕಿಂತಲೂ ಹೆಚ್ಚು ನೊಂದಣಿ ಅರ್ಜಿ ಸಲ್ಲಿಸಿದ್ದು, ಭಾರತವು 53 ಸಾವಿರದಷ್ಟೇ ನೊಂದಣಿ ಅರ್ಜಿ ಸಲ್ಲಿಸಿದ್ದು, ಕ್ರಮವಾಗಿ ೧ನೇ ಸ್ಥಾನದಲ್ಲೂ ಹಾಗೂ ೭ನೇ ಸ್ಥಾನದಲ್ಲೂ ಇವೆ. ಆದರಿಂದ ಚೀನಾ ಅಪಾರ ಅನುಕೂಲಗಳೊಂದಿಗೆ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆಯೆಂದರು. ಭಾರತದಲ್ಲಿ ಪೇಟೆಂಟ್ ನೊಂದಣಿಯ ಅರಿವು ಮೂಡಿಸಿ ಕ್ರಿಯಾಶಾಲಿ ಮನಸುಗಳಿಗೆ ಬೌದ್ಧಿಕ ಆಸ್ತಿಗಳ ಹಕ್ಕುಗಳ ರಕ್ಷಣೆಯನ್ನು ಮಾಡಬೇಕಾದ ಅಗತ್ಯವನ್ನು ಪಾತ್ಯಕ್ಷಿಕೆಯೊಂದಿಗೆ ವಿವರಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಐಸೆಟ್-ಐಲ್ಯಾಬ್ ಇನ್‌ಕ್ಯುಬೇಷನ್ ಫೌಂಡೇಷನ್ ವ್ಯವಸ್ಥಾಪಕ ನಿರ್ದೇಶಕರಾದ ಕಿಶೋರ್ ಜಾಗೀರ್‌ದಾರ್‌ರವರು ಮಾತನಾಡುತ್ತಾ ವಿಶ್ಲೇಷಣೆಯ ಪ್ರಕಾರ ಹೊರದೇಶಗಳಲ್ಲಿ ಭಾರತೀಯರು ಸಲ್ಲಿಸುವ 10 ಪೇಟೆಂಟ್ ಅರ್ಜಿಗಳಲ್ಲಿ ನಾಲ್ಕು ನೊಂದಣಿಯಾದರೆ ಭಾರತದಲ್ಲಿ ಕೇವಲ ಒಂದು ಪೇಟೆಂಟ್ ನೊಂದಣಿಯಾಗುತ್ತದೆಯೆಂದರು. ನಿಧಾನ ವಿಲೇವಾರಿ ಪ್ರಕ್ರಿಯೆ, ಅಸೃಷ್ಟ ಅರ್ಜಿ ಸಲ್ಲಿಕೆ, ನೊಂದಣಿಗೆ ಕಡಿಮೆ ದರಗಳು ಈ ರೀತಿಯ ನಡಾವಳಿಗೆ ಕಾರಣವಿರಬಹುದೆಂದು ಅವರು ಭಾರತೀಯ ಪೇಟೆಂಟ್ ಪ್ರಕ್ರಿಯೆಯಲ್ಲಿ ಶೀಘ್ರಗತಿ ಮತ್ತು ನಿಖರವಾಗಿ ಪೇಟೆಂಟ್ ಅರ್ಜಿ ಸಲ್ಲಿಕೆಯನ್ನು ಸಂಶೋಧಕರಿಗೆ ತಿಳಿಸಬೇಕಾದ ಅಗತ್ಯವನ್ನು ಒತ್ತಿ ಹೇಳಿದರು.
ಇದೇ ಸಂದರ್ಭದಲ್ಲಿ ಪ್ರಾಂಶುಪಾಲರಾದ ಡಾ.ನರೇಂದ್ರ ವಿಶ್ವನಾಥ್‌ರವರು ಮಾತನಾಡುತ್ತಾ ಜೀವನದಲ್ಲಿ ಬರುವ ಎಡರು ತೊಡರುಗಳನ್ನು ಎದುರಿಸಿ ಅವುಗಳಿಗೆ ಪರಿಹಾರವನ್ನು ರೂಪಿಸಿ ಅದನ್ನೇ ಬೌದ್ಧಿಕ ಆಸ್ತಿ ಹಕ್ಕಾಗಿಸಿ ಪೇಟೆಂಟ್ ಪಡೆದು ಆರ್ಥಿಕ ಅವಕಾಶಗಳನ್ನು ಪಡೆದುಕೊಂಡ ದೃಷ್ಟಾಂತವನ್ನು ವಿವರಿಸಿ ಉಪನ್ಯಾಸಕರು ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಲೆಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಸಿಲಿಕಾನ್ ಮೈಕ್ರೋಸಿಸ್ಟಮ್ ಟೆಕ್ನಿಕಲ್ ಇನ್ಫೋವೇಷನ್ ನಿರ್ದೇಶಕರಾದ ಜಯಚಂದ್ರ ಆರಾಧ್ಯ ಭಾಗವಹಿಸಿದ್ದರು. ಪ್ರಾಂಶುಪಾಲರಾದ ಡಾ.ನರೇಂದ್ರ ವಿಶ್ವನಾಥ್ ಸ್ವಾಗತಿಸಿ, ಡಾ.ಸಿ.ನಾಗರಾಜ್‌ರವರು ವಂದಿಸಿದರು. ಈ ಸಮಾರಂಭದಲ್ಲಿ ಬೋಧಕ ವರ್ಗದವರು ಭಾಗವಹಿಸಿದ್ದರು.