ತುಮಕೂರು: ನಾವು ಕನ್ನಡ ಭಾಷೆ, ಕಲೆ, ಸಂಸ್ಕೃತಿ ಎಂಬ ತೇರಿನ ಉತ್ಸವ ಮೂರ್ತಿಗಳಾಗದೆ ರಥವನ್ನು ಮುನ್ನಡೆಸುವ ಸಾರಥಿಗಳಾಗಬೇಕು. ಕನ್ನಡಾಂಬೆಯ ಉತ್ಸವ ಮೂರ್ತಿಯನ್ನು ಮುಂದಕ್ಕೆಳೆದುಕೊಂಡು ಸಾಗುವ ಸೇನಾನಿಗಳಾಗಬೇಕು ಎಂದು ತುಮಕೂರು ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಕೆ.ಸಿ. ನರಸಿಂಹಮೂರ್ತಿ ಅಭಿಪ್ರಾಯಪಟ್ಟರು.
ತುಮಕೂರು ಬೆಂಗಳೂರು ರೈಲ್ವೇ ಪ್ರಯಾಣಿಕರ ವೇದಿಕೆ ವತಿಯಿಂದ ತುಮಕೂರು ರೈಲು ನಿಲ್ದಾಣದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆ, ಸಂಸ್ಕೃತಿ, ಕಲೆ, ಸಾಹಿತ್ಯದ ರಥವನ್ನು ಇಲ್ಲಿನವರೆಗೂ ಎಳೆದು ತಂದ ಮಹನೀಯರ ಹಾದಿಯಲ್ಲಿ ನಾವುಗಳೂ ಸಾಗಿ ಮುಂದಿನ ಪೀಳಿಗೆಗೆ ದಾಟಿಸಬೇಕಾದ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ. ಇದನ್ನು ಎಲ್ಲರೂ ತಮ್ಮ ಸ್ವಂತ ಜವಾಬ್ದಾರಿ ಎಂದು ಭಾವಿಸಿ ನಿಭಾಯಿಸಬೇಕಿದೆ ಎಂದರು.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಮಹಾನಗರ ಪಾಲಿಕೆ ಸದಸ್ಯರ ಗಿರಿಜಾ ಧನಿಯಾಕುಮಾರ್ ಮಾತನಾಡಿ, ಕನ್ನಡ ನಮ್ಮ ಮನೆ ಮತ್ತು ವ್ಯವಹಾರದ ಭಾಷೆಯಾಗಬೇಕು. ದಿನ ನಿತ್ಯದ ಬದುಕಿನಲ್ಲಿ ಕನ್ನಡ ನಮ್ಮ ಉಸಿರಾಗಬೇಕು ಎಂದರಲ್ಲದೆ, ರೈಲ್ವೇ ಇಲಾಖೆ ಮತ್ತು ಬ್ಯಾಂಕುಗಳ ಉದ್ಯೋಗದಲ್ಲಿ ಕನ್ನಡಿಗರಿಗೆ ಆದ್ಯತೆ ದೊರೆಯಬೇಕೆಂದರು.
ರಾಜ್ಯೋತ್ಸವದ ಮಹತ್ವದ ಬಗ್ಗೆ ಮಾತನಾಡಿದ ಜಾದೂಗಾರ, ಹರಿಕಥಾ ವಿದ್ವಾನ್ ಮೋಹನ್‌ಕುಮಾರ್ ಅವರು, ನಮ್ಮ ಪೂರ್ವಿಕರು ಉಳಿಸಿಕೊಂಡು ಬಂದಿರುವ ಕನ್ನಡ ಭಾಷೆ, ನೆಲ, ಜಲ, ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದರು.
ರೋಟರಿ ತುಮಕೂರು ಅಧ್ಯಕ್ಷ ಬಸವರಾಜ್ ಹಿರೇಮಠ್ ವೇದಿಕೆಯೊಂದಿಗೆ ಸಹಭಾಗಿಯಾಗಿರುವುದು ನಮಗೆ ದೊರೆತ ಅವಕಾಶ ಅಮೂಲ್ಯವಾದುದು ಎಂದರು. ನೈಋತ್ಯ ರೈಲ್ವೇ ವಾಣಿಜ್ಯ ವ್ಯವಸ್ಥಾಪಕ ಧನಂಜಯ, ತುಮಕೂರು ರೈಲು ನಿಲ್ದಾಣ ವ್ಯವಸ್ಥಾಪಕ ನಾಗರಾಜ್, ಆರ್‌ಪಿಎಫ್ ಇನ್ಸ್‌ಪೆಕ್ಟರ್ ಸುಧಾಕರ್ ನಾಯ್ಡು ಮತ್ತು ರೈಲ್ವೇ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.
ವೇದಿಕೆಯ ಹಿರಿಯ ಉಪಾಧ್ಯಕ್ಷ ಪರಮೇಶ್ವರ್ ಅಧ್ಯಕ್ಷತೆ ವಹಿಸಿದ್ದರು. ಓಕೆ ವೀಣಾ ಪ್ರಾರ್ಥಿಸಿದರು. ನಿರ್ದೇಶಕ ಸಿ. ನಾಗರಾಜ್ ಸ್ವಾಗತಿಸಿದರು. ರಘು ರಾಮಚಂದ್ರಯ್ಯ ಸನ್ಮಾನಿತರನ್ನು ಪರಿಚಯಿಸಿದರು. ರಾಮಾಂಜನೇಯ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಕರಣಂ ರಮೇಶ್ ವಂದಿಸಿದರು. ಕೆ.ಆರ್. ಭಾಗ್ಯಲಕ್ಷ್ಮಿ ನಾಗರಾಜ್, ಓ.ಕೆ. ವೀಣಾ ಚನ್ನಬಸಪ್ಪ, ಶೀಲಾ ರೂಪರಾಜ್, ಜ್ಯೋತಿ ರವಿಶಂಕರ್ ಮತ್ತು ಸಂಜನ್ ನಾಗರಾಜ್ ನಾಡಗೀತೆ, ಕನ್ನಡ ಗೀತೆಗಳನ್ನು ಹಾಡಿದರು. ಕಾರ್ಯಕ್ರಮದ ನಂತರ ನೆರದಿದ್ದವರಿಗೆ ಸಿಹಿ ಹಂಚಲಾಯಿತು.