ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಬೇಲೂರ ಸಮೀಪ ಜಾಲೀಹಾಳ ಗ್ರಾಮ ಇದೆ. ಅಲ್ಲಿ ಶ್ರೀಬ್ರಹ್ಮಾನಂದರು ಶ್ರೀ ಶಾಲಿವಾಹನ ಶಕೆ ೧೭೮೦ ಕಾಲಯುಕ್ತಾಕ್ಷಿ ನಾಮ ಸಂವತ್ಸರ ಮಾಘ ಬಹುಳ ದಶಮಿ ಗುರುವಾರ ದಿನಾಂಕ: ೨೭.೨. ೧೮೫೯ರ ಶುಭದಿನ ಶುಭ ಮುಹೂರ್ತದಲ್ಲಿ ಜನಿಸಿದರು. ಇವರ ತ೦ದೆ ಶ್ರೀಬಾಳಂಭಟ್ಟ, ತಾಯಿ ಸೌ. ಜೀವೂಬಾಯಿ. ಚಿಕ್ಕ ವಯಸ್ಸಿನಲ್ಲಿಯೇ ಇವರು ಮನೆಬಿಟ್ಟು ಹೋಗಿ, ಸಕಲ ಶಾಸ್ತ್ರ ವೇದಾಂತಗಳ ಅಧ್ಯಯನ ಮಾಡಿದರು. ಅನಂತ ಶಾಸ್ತ್ರಿಗಳೆಂದು ಹೆಸರು ವಾಸಿಯಾದರು. ಶಾಸ್ತ್ರಾಧ್ಯಾಯನ ಮಾಡಿದ್ದರೂ, ಅವರು ಅದನ್ನೇ ಅವಲಂಬಿಸದೇ ಅದರಲ್ಲಿಯ ಸಾರಸರ್ವಸ್ವವನ್ನು ತಿಳಿದುಕೊಂಡು ಭಕ್ತಿ ಮಾರ್ಗವನ್ನು ಹಿಡಿದರು. ಉತ್ಕಟ ಭಕ್ತಿಯೋಗದಿಂದ ಅನಂತ ಶಾಸ್ತ್ರಿಗಳು ವೆಂಕಟಾಪುರದ ಶ್ರೀವೆಂಕಟಪತಿಯನ್ನು ಪ್ರಸನ್ನೀಕರಿಸಿಕೊ೦ಡರು. ಶ್ರೀ ವೆಂಕಟಪತಿಯ ಆದೇಶದ೦ತೆಯೇ ಸದ್ಗುರುಗಳನ್ನು ಶೋಧಿಸಲು ತೀರ್ಥಯಾತ್ರೆ ಕೈಕೊಂಡರು. ಯಾತ್ರೆಯ ಮಧ್ಯದಲ್ಲಿ ಇಂದೂರಿನಲ್ಲಿ ಅವರಿಗೆ ತಮ್ಮ ಇಚ್ಛೆಗನುಸಾರವಾಗಿ ಸದ್ಗುರುಗಳು ದೊರೆತರು. ಅವರೇ ಶ್ರೀ ಬ್ರಹ್ಮಚೈತನ್ಯ ಮಹಾರಾಜರು ಅವರಲ್ಲಿ ಶ್ರೀ ಮಾರುತಿ ಸ್ವರೂಪವನ್ನೇ ಕಂಡರು. ಇವರು ಸದ್ಗುರುಗಳ ಸಕೃದ್ದರ್ಶನ ಮಾತ್ರದಲ್ಲಿಯೇ ಅವರಿಗೆ ತಮ್ಮ ತನು-ಮನಗಳನ್ನು ಅರ್ಪಿಸಿಕೊಂಡರು. ಸಕಲ ಶಾಸ್ತ್ರ ಬಲ್ಲ ಶ್ರೀ ಅನಂತ ಶಾಸ್ತ್ರಿಗಳು ಸದ್ಗುರು ಶ್ರೀ ಬ್ರಹ್ಮಚೈತನ್ಯರು ಉಪದೇಶ ಮಾಡಿದ ಶ್ರೀ ರಾಮ ಮಂತ್ರವನ್ನು ಶ್ರದ್ಧಾಪೂರ್ವಕ ತಮ್ಮದನ್ನಾಗಿ ಮಾಡಿಕೊಂಡರು. ಶಾಸ್ತ್ರಕ್ಕನುಸಾರವಾಗಿ ಸದ್ಗುರುಗಳ ಅನನ್ಯ ಸೇವೆ ಮಾಡಿ ಸದ್ಗುರು ಕೃಪೆಗೆ ಪಾತ್ರರಾದರು. ಸ್ವರೂಪಾನಂದದಲ್ಲಿ ಲೀನರಾಗಿ, ಬ್ರಹ್ಮಾನಂದ ಸುಖವನ್ನು ಅನುಭವಿಸಿದರು. ಅದೇ ಬ್ರಹ್ಮಾನಂದ ಸುಖದ ಪರಿಸರದಿ೦ದ ಶ್ರೀ ಅನಂತ ಶಾಸ್ತ್ರಿಗಳು “ಶ್ರೀಬ್ರಹ್ಮಾನಂದ’ ನಾಮಧೇಮದಿಂದ ಪ್ರಖ್ಯಾತರಾದರು.*
*ಶ್ರೀ ಬ್ರಹ್ಮಾನಂದರು ತಮ್ಮ ಸದ್ಗುರುಗಳ ಅಪ್ಪಣೆಯಂತೆ ಬೆಳಧಡಿಗೆ ಆಗಮಿಸಿ, ಸುತ್ತುಮುತ್ತಲಿನ ಸಾವಿರಾರು ಜನರನ್ನು ಶ್ರೀ ರಾಮೋಪಾಸನೆಯಲ್ಲಿ ತೊಡಗಿಸಿದರು. ಮುಂದೆ ಬೆಳಧಡಿಯಲ್ಲಿ ಭಕ್ತ ಮಹಾಶಯರ ಸಹಾಯ-ಸಹಕಾರದಿಂದ ಶ್ರೀ ರಾಮಮಂದಿರ ಕಟ್ಟಿಸಿದರು. ತಮ್ಮ ಸದ್ಗುರು ಶ್ರೀ ಬ್ರಹ್ಮಚೈತನ್ಯ ಮಹಾರಾಜರ ಅಮೃತ ಹಸ್ತದಿಂದ ಆ ಮಂದಿರದಲ್ಲಿ ಶ್ರೀಮಾರುತಿ ಸಮೇತ ಶ್ರೀ ಸೀತಾರಾಮ ಲಕ್ಷ್ಮಣರ ವನಮೋಹಕ ಸು೦ದರ ಸ೦ಗಮವರಿಯ ದಿವ್ಯ ಮೂರ್ತಿಗಳನ್ನು ಪ್ರತಿಷ್ಠಾಪಿಸಿದರು. ಪ್ರತಿವರ್ಷ ಶ್ರೀರಾಮ ನವಮಿ, ನವರಾತ್ರಿ ಉತ್ಸವಗಳನ್ನು ಆಚರಿಸುತ್ತ ಶ್ರೀ ಸಮರ್ಥ ರಾಮದಾಸರ ಸಂಪ್ರದಾಯದಂತೆ ಉಪಾಸನಾ ಪದ್ಧತಿಯನ್ನು ಆರಂಭಿಸಿದರು.*
*ಕ್ರಿ. ಶ. ೧೯೦೯ ರಲ್ಲಿ ಶ್ರೀ ಬ್ರಹ್ಮಚೈತನ್ಯ ಮಹಾರಾಜರು ಬೆಳಧಡಿಗೆ ಬಂದಾಗ ಶ್ರೀ ಬ್ರಹ್ಮಾನಂದರು ತಮ್ಮ ತಪೋಭೂಮಿ ವೆ೦ಕಟಾಪುರಕ್ಕೆ ಕರೆದುಕೊಂಡು ಹೋದರು. ಶ್ರೀ ಬ್ರಹ್ಮ ಚೈತನ್ಯ ಮಹಾರಾಜರು ಅಲ್ಲಿಯ ಸ್ವಯಂ ಭೂ ಉದ್ಭವ ಶ್ರೀ ವೆಂಕಟಪತಿ ಮೂರ್ತಿಯನ್ನು, ಆ ರಮ್ಯ ಸ್ಥಳವನ್ನೂ ಕಂಡು* *ಆನಂದಭರಿತರಾಗಿ ಅದರ ಸಂಪೂರ್ಣ ಜೀರ್ಣೋದ್ದಾರವನ್ನು ಮಾಡಲು ಶ್ರೀಬ್ರಹ್ಮಾನಂದರಿಗೆ ಅಪ್ಪಣೆ ಮಾಡಿದರು, ಸದ್ಗುರು ಆಜ್ಞೆಯನ್ನು ಶಿರಸಾವಹಿಸಿ ಬದಾಮಿ ಶಿಲಾಮಯ ಭವ್ಯ ಮಂದಿರವನ್ನು ತಿರುಪತಿ ಕ್ಷೇತ್ರದಲ್ಲಿರುವಂತೆ* *ಶ್ರೀವರಾಹದೇವರ, ಶ್ರೀ ಗೋವಿಂದರಾಜ, ಶ್ರೀ ಶಂಕರ, ಶ್ರೀದೇವಿ, ಶ್ರೀ ಮಾರುತಿ ದೇವ ಮಂದಿರಗಳನ್ನು ಸುಂದರವಾಗಿ ಕಟ್ಟಿಸಿದ್ದಾರೆ. ಇದಲ್ಲದೇ* *ಭೋಜನಶಾಲೆ, ಗೋಶಾಲೆ ಮತ್ತು ಶ್ರೀ ಕ್ಷೇತ್ರಕ್ಕೆ ಬರುವ ಭಕ್ತರಿಗೆ ವಾಸಿಸಲು ಅನೇಕ ಕೋಣೆಗಳನ್ನು ಕಟ್ಟಿಸಿದ್ದಾರೆ.* *ವೆ೦ಕಟಾಪುರದಲ್ಲಿಯೂ ಸಹ ನಿತ್ಯೋಪಾಸನೆಯು ಅವ್ಯಾಹತವಾಗಿ ನಡೆಯುವಂತೆ ವ್ಯವಸ್ಥೆ ಮಾಡಿದ್ದಾರೆ. ಶ್ರೀಕ್ಷೇತ್ರ ಬೆಳಧಡಿ ಮತ್ತು ಶ್ರೀ ಕ್ಷೇತ್ರ ವೆಂಕಟಾಪುರಗಳನ್ನು ತಮ್ಮ ಕೇಂದ್ರ ಸ್ಥಾನಗಳನ್ನಾಗಿ ಮಾಡಿಕೊಂಡು, ಶ್ರೀ ಬ್ರಹ್ಮಾನಂದರು ಕರ್ನಾಟಕದ ಬಹಳ ಊರು ಪಟ್ಟಣ – ಹಳ್ಳಿಗಳಲ್ಲಿ ಸಂಚರಿಸುತ್ತ, ಶ್ರೀರಾಮನಾಮ ತಾರಕಮಂತ್ರದ ಜಪಯಜ್ಞಗಳನ್ನು ಸಾಕಷ್ಟು ಮಾಡಿದ್ದಾರೆ. ತೇರಾಕೋಟಿ ಶ್ರೀ ರಾಮನಾಮ ಯಜ್ಞಗಳ ಸಾಂಗತಾ ಕಾರ್ಯವನ್ನೂ ನಿರ್ವಹಿಸಿದ್ದಾರೆ. ತಾವು ಸಂಚರಿಸಿದಲ್ಲೆಲ್ಲಾ ಜನ
ಮನದಲ್ಲಿ ಶ್ರೀ ರಾಮ ನಾಮದ ರುಚಿ ಹತ್ತಿಸಿದ್ದಾರೆ.
ಶ್ರೀ ಬ್ರಹ್ಮಾನಂದರ ಶ್ರೀ ರಾಮನಲ್ಲಿಯ ಭಕ್ತಿ, ಜ್ಞಾನ, ವೈರಾಗ್ಯಕ೦ಡು ಬಹಳಷ್ಟು ಜನರು ಭಕ್ತರಾದರು. ಆದರೆ ಇವರು ಮಾತ್ರ ಯಾರಿಗೂ ಅನುಗ್ರಹ ಕೊಡದೇ, ತಮ್ಮ
ಸದ್ಗುರು ಶ್ರೀ ಬ್ರಹ್ಮಚೈತನ್ಯ ಮಹಾರಾಜರಿಂದ ಅನುಗ್ರಹ ಕೊಡಿಸುತ್ತಿದ್ದರು. ಇವರ ಗುರುಭಕ್ತಿ ಅ೦ಥ ಅವರ್ಣೀಯವಾದಂತಹದಾಗಿತ್ತು. ಇವರಿಗೆ ತಮ್ಮ ಸದ್ಗುರುಗಳೇ ಪರಮದೇವರು. ಅವರಲ್ಲಿಯೇ ಸಕಲ ದೇವರನ್ನು ಕಾಣುತ್ತಿದ್ದರು.” ಮಹಾರಾಜರಿಗಿಂತ ಮತ್ತೊಬ್ಬ ದೇವರಿಲ್ಲ, ಈ ದೇವರ ಪಾದಗಳ ಮೇಲೆ ತಲೆ ಇಟ್ಟ ಬಳಿಕ ಬೇರೆಯವರ ಪಾದಗಳ ಮೇಲೆ ತಲೆಯಿಡುವ ಅವಶ್ಯಕತೆಯೇ ಇಲ್ಲ” ಶ್ರೀ ಬ್ರಹ್ಮಾನಂದರು ಮೇಲಿಂದ ಮೇಲೆ ಹೇಳುತ್ತಿದ್ದರು.
ಶ್ರೀ ಬ್ರಹ್ಮಾನಂದರು ನರಗುಂದ, ಬಿದರಹಳ್ಳಿ, ಕೇರದಾಳ, ಮುಂತಾದ ಇನ್ನೂ ಅನೇಕ ಊರುಗಳಲ್ಲಿ ಹದಿಮೂರು ಕೋಟಿ ಶ್ರೀ ರಾಮನಾಮ ಜಪಯಜ್ಞವನ್ನು ಮಾಡಿಸಿ, ಸಾಂಗತಾ ಕಾರ್ಯಕ್ಕೆ ತಮ್ಮ ಸದ್ಗುರು ಶ್ರೀಬ್ರಹ್ಮ ಚೈತನ್ಯರನ್ನು ಕರೆಯಿಸಿಕೊ೦ಡು ಅದ್ದೂರಿಯಿಂದ ನಡೆಸಿದರು. ಅದರಂತೆ ಕರ್ನಾಟಕದ ತುಂಬೆಲ್ಲಾ ಶ್ರೀ ರಾಮೋಪಾಸನೆಯನ್ನೂ, ಶ್ರೀ ರಾಮ ನಾಮ ಜಪ ಮಾಡುವವರ ಸಂಖ್ಯೆಯನ್ನೂ ದೊಡ್ಡ ಪ್ರಮಾಣದಲ್ಲಿ ಬೆಳೆಸಿದರು.
೧೯೨೫ ನೇ ಇಸ್ವಿಯಲ್ಲಿ ಬೆಳಧಡಿ ಶ್ರೀ ರಾಮ ಮಂದಿರದಲ್ಲಿ ಪ್ರತಿವರ್ಷದಂತ ಅಖಂಡ ರಾಮನಾಮ ಸಪ್ತಾಹ ಆರಂಭವಾಗಿತ್ತು. ಒಂದು ದಿನ ಬೆಳಗಿನ ಹತ್ತು ಗಂಟೆಗೆ ಶ್ರೀ ರಾಮನಾಮ ಜಪಿಸುತ್ತ ಸರತಿಯ ಸಾಲಿನಲ್ಲಿ ಕುಳಿತ ಜನರ ಮಧ್ಯದಲ್ಲಿ ಒಂದು ದೊಡ್ಡ ಸರ್ಪವೂ ಹೆಡೆ ತೆಗೆದು ಅಲ್ಲಿ ಕುಳಿತವರನ್ನು ಬರಿ ಬಿರಿ ನೋಡುತ್ತ ಗರ್ಭಗುಡಿಯಲ್ಲಿ ಹೊರಟು ಹೋಯಿತು. ಅಲ್ಲಿ ಕುಳಿತವರು ಭಯಭೀತರಾಗಿ ಸರತಿಬಿಟ್ಟು ಓಡಿಹೋದರು. ಮುಂದೆ ಕೆಲವರು ಆ ಸಣ್ಣ ಗರ್ಭಗುಡಿಯಲ್ಲಿ ಹುಡುಕಿದರೆ ಹಾವು ಅಲ್ಲಿ ಕಂಡುಬರಲೇ ಇಲ್ಲ. ಈ ಚಮತ್ಕಾರ ನಡೆದಾಗ ಶ್ರೀ ಅಡಿವೆ೦ಭಟ್ಟ ಗಾಡಗೋಳಿಯವರು ಅಲ್ಲಿಯೇ ಇದ್ದರು. ಅವರು ಆಗಿಂದಾಗಲೇ ಒಂದು ಹಾಡು ರಚಿಸಿದರು – ಜಯ ಜಯ ಗುರುವರಾ ಬ್ರಹ್ಮಾನಂದಾ!” ಎಂಬ ಪದ್ಯದಲ್ಲಿ ಬೆಳಧಡಿಯಲ್ಲಿ ಭಜನಿಯ ಸಮಯದಿ ಭುಜಂಗರೂಪದಿಂದ ದರ್ಶನವಿತ್ತಿ’ ಎಂದು ಉಲ್ಲೇಖಿಸಿದ್ದಾರೆ.
ಶ್ರೀ ಬ್ರಹ್ಮಾನಂದರು ಶ್ರೀ ಬ್ರಹ್ಮಚೈತನ್ಯ ಮಹಾರಾಜರ ಮಹಿಮೆಯನ್ನು ಕೊಂಡಾಡುತ್ತ ಕರ್ನಾಟಕದ ಜನರನ್ನು ಅವರ ಶಿಷ್ಯರನ್ನಾಗಿ ಮಾಡಿ ಅವರ ಸೇವೆಗೆ ಹಚ್ಚುತ್ತಿದ್ದರು. ತಾವು ಮಾತ್ರ ಶ್ರೀ ಮಹಾರಾಜರ ಶಿಷ್ಯರೆಂದೇ ವರ್ತಿಸುತ್ತಿದ್ದರು. ಲಕ್ಷೋಪಲಕ್ಷ ರೂಪಾಯಿ ಖರ್ಚುಮಾಡಿ ತಾವು ಕಟ್ಟಿಸಿದ ಎಲ್ಲ ದೇವಾಲಯಗಳಲ್ಲಿ “ಶ್ರೀ ಬ್ರಹ್ಮಚೈತನ್ಯ ಮಹಾರಾಜರು ಕಟ್ಟಿಸಿದ್ದು ಎಂದು ಶಿಲೆಯಲ್ಲಿ ಬರೆಯಿಸಿದ್ದಾರೆ. ಶ್ರೀ ಬ್ರಹ್ಮಾನಂದರು ನಿರಭಿಮಾನ, ನಿರ್ಲೋಬಿ, ಅಕ್ರೋಧ, ಜನಪ್ರೀಯತ್ವಗಳ ಸಾಕಾರ ಮೂರ್ತಿಯೇ ಆಗಿದ್ದರು.
”ನಾವೇನೂ ಸಮರ್ಥರ ಯೋಗ್ಯತೆಯುಳ್ಳವರಲ್ಲ, ಆದರೆ ಬ್ರಹ್ಮಾನಂದರು ಕಲ್ಯಾಣ ಸ್ವಾಮಿಯ ಪ್ರತಿ ಅವತಾರ ವೆನ್ನುವುದರಲ್ಲಿ ಸಂಶಯವಿಲ್ಲ. ಅವರು ಶುಕ ಮಹರ್ಷಿಗಳ ಯೋಗ್ಯತೆ ಯುಳ್ಳವರು” ಎಂದು ಶ್ರೀ ಬ್ರಹ್ಮಚೈತನ್ಯ ಮಹಾರಾಜರು ಹೃದಯ ತುಂಬಿ ಮೇಲಿಂದ ಮೇಲೆ ಹೇಳುತ್ತಿದ್ದರು. ಕರ್ನಾಟಕದ ಭಾವಿಕ ಜನರಿಗೆ ಶ್ರೀ ಮಹಾರಾಜರ ಮುಖಾಂತರ ಶ್ರೀ ರಾಮನಾಮದ ಹುಚ್ಚು ಹಿಡಿಸಿ ಅವರ ದಿವ್ಯ ಆಧ್ಯಾತ್ಮಿಕ ಸಂಪತ್ತನ್ನು ಆಸ್ವಾದಿಸುವಂತೆ ಮಾಡಿದ ಶ್ರೇಯಸ್ಸು ಶ್ರೀ ಬ್ರಹ್ಮಾನಂದರದು.
ಶ್ರೀ ರಾಮನಾಮಕ್ಕಾಗಿ ತಮ್ಮ ನಾಲಿಗೆಯನ್ನ ಮಾರಿಕೊಂಡ ಶ್ರೀ ಬ್ರಹ್ಮಾನಂದರು ತಮ್ಮ ಆಯುಷ್ಯದಲ್ಲಿ ಎಂದೂ ಶಾಸ್ತ್ರ ಕುರಿತು ಚರ್ಚೆಗಿಳಿಯಲಿಲ್ಲ. ಸಮಾಜವನ್ನು ಎಂದೂ ದೂರಲಿಲ್ಲ. ಶ್ರೀ ಬ್ರಹ್ಮ ಚೈತನ್ಯ ಮಹಾರಾಜರಿಗೆ ಅತೀ ಪ್ರೀಯವಾಗಿದ್ದ ಅನ್ನದಾನವ೦ತೂ ಶ್ರೀಬ್ರಹ್ಮಾನಂದರು ಎಷ್ಟು ಮಾಡಿದರೆಂಬುದನ್ನು ಹೇಳಲು ಸಾಧ್ಯವಿಲ್ಲ. ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮಾಡಿದ ಅನ್ನದಾನವು ಉಂಡೆ-ಕಡಬು-ಪ೦ಚ ಪಕ್ವಾನ್ನಗಳಿಂದಲೇ ತುಂಬಿರುತ್ತಿತ್ತು. ಅದಕ್ಕಾಗಿಯೇ ಶ್ರೀಬ್ರಹ್ಮಚೈತನ್ಯರು ಬ್ರಹ್ಮಾನಂದರನ್ನು ‘ಅನ್ನಪೂರ್ಣೇಶ್ವರಿ’ ಎಂದೇ ಕರಿಯುತ್ತಿದ್ದರು ಮತ್ತು ಭಕ್ತರೊಂದಿಗೆ ವಿನೋದವಾಗಿ ನಿಮಗೆ ಅನ್ನ ಸಾರು ಭಕ್ಕರಿ ಬೇಕಾಗಿದ್ದರೆ ನನ್ನ ಕಡೆಗೆ ಬನ್ನಿರಿ, ಉಂಡಿ, ಕಡುಬು, ಪಕ್ವಾನ್ನ ಬೇಕಾದರೆ ಬ್ರಹ್ಮಾನಂದರ ಕಡೆಗೆ ಹೋಗಿರಿ” ಎಂದು ಹಾಸ್ಯಚಟಾಕಿ ಹಾರಿಸುತ್ತಿದ್ದರು.*
*ಪರೋಪಕಾರ ಮೂರ್ತಿಯಾದ ಶ್ರೀ ಬ್ರಹ್ಮಾನಂದರು ತಮ್ಮ ದೇಹವೂ ಸಹ ಜಲಚರಗಳಿಗೆ ಆಹಾರವಾಗಬೇಕೆಂಬ ಸದಿಚ್ಛೆಯಿಂದ ಯಾರಿಗೂ ತಿಳಿಯದಂತೆ ಯಾವ ತರಹದ ಸದ್ದುಗದ್ದಲ ಇಲ್ಲದೇ ಕೃಷ್ಣಾ ನದಿಯ ದಂಡೆಯ ಮೇಲಿರುವ, ಕಾಗವಾಡದ ಸಮೀಪದ ನವಬಾಗ ಎಂಬಲ್ಲಿ ತಮ್ಮ ಜಡದೇಹವನ್ನು ಶ್ರೀ ಶಕೆ ೧೮೪೦ ಕಾಲ ಯುಕ್ತಾಕ್ಷಿ ಸಂವತ್ಸರ ಭಾದ್ರಪದ ಬಹುಳ ಅಮಾವಾಸ್ಯೆಯ ದಿನ ೧೦ ಗಂಟೆ ೩೫ ನಿಮಿಷಕ್ಕೆ, ತ್ಯಜಿಸಿ ಶ್ರೀ ರಾಮನ ಪಾದಾರವಿಂದಗಳಲ್ಲಿ ಲೀನರಾದರು. (ದಿ. ೪. ೧೦. ೧೯೧೮ ಶುಕ್ರವಾರ) ಅವರ ಜಡದೇಹವನ್ನು ಕೃಷ್ಣಾ ನದಿಯಲ್ಲಿ ಜಲಚರಗಳಿಗೆ ಆಹಾರವಾಗುವ ಅವರ ಅಪೇಕ್ಷೆಯ ಮೇರೆಗೆ ಜಲ ಸಮಾಧಿ ಮಾಡಲಾಯಿತು. ಈ ಅಪ್ರತಿಮ ಮಹಾಪುರುಷನ ದೇಹವನ್ನು ತನ್ನ ಉದರದಲ್ಲಿರಿಸಿಕೊಂಡ ಕೃಷ್ಣಾ ಮಾತೆಯೇ ಪರಮಧನ್ಯಳು.