ದಿಲ್ಲಿಯ ಮೋಸ್ಟ್ ವಾಂಟೆಡ್ ಕ್ರಿಮಿನಲ್, ಗ್ಯಾಂಗ್‌ಸ್ಟರ್ ಜಿತೇಂದ್ರ ಗೋಗಿ ಹಾಗೂ ಇತರೆ ಮೂವರು ಕೋರ್ಟ್ ಆವರಣದಲ್ಲಿಯೇ ನಡೆದ ಶೂಟೌಟ್‌ನಲ್ಲಿ ಹತರಾಗಿದ್ದಾರೆ. ಜಿತೇಂದ್ರನನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲು ರೋಹಿಣಿ ಕೋರ್ಟ್ 206 ನೇ ಸಂಖ್ಯೆ ಕರೆದುಕೊಂಡು ಬರುವಾಗ ಈ ದಾಳಿ ನಡೆದಿದೆ. ವಕೀಲರ ದಿರಿಸಿನಲ್ಲಿ ಬಂದಿದ್ದ ದಾಳಿಕೋರರು, ಜಿತೇಂದ್ರನ ಮೇಲೆ ಗುಂಡಿನ ದಾಳಿ ನಡೆಸಿ ಆತನನ್ನು ಸ್ಥಳದಲ್ಲಿಯೇ ಹತ್ಯೆ ಮಾಡಿದ್ದಾರೆ. ಕೂಡಲೇ ಪ್ರತಿ ದಾಳಿ ನಡೆಸಿದ ದಿಲ್ಲಿ ವಿಶೇಷ ಘಟಕದ ಪೊಲೀಸರು ಇಬ್ಬರು ದಾಳಿಕೋರರನ್ನು ಹತ್ಯೆ ಮಾಡಿದ್ದಾರೆ. ದಾಳಿಕೋರರನ್ನು ಜಿತೇಂದ್ರನ ವೈರಿ ಗ್ಯಾಂಗ್ ತಿಲ್ಲು ತಾಜ್‌ಪೂರಿಯಾಕ್ಕೆ ಸೇರಿದವರು ಎನ್ನಲಾಗಿದೆ.
ಈ ಶೂಟೌಟ್‌ನಲ್ಲಿ ಒಟ್ಟು ನಾಲ್ವರು ಮೃತಪಟ್ಟಿದ್ದು, ಮಹಿಳಾ ವಕೀಲರೊಬ್ಬರು ಗಾಯಗೊಂಡಿದ್ದಾರೆ. ಈ ದಾಳಿ ಸಂದರ್ಭದಲ್ಲಿ 30-40 ಸುತ್ತು ಗುಂಡುಗಳನ್ನು ಹಾರಿಸಲಾಗಿದೆ. ಜಿತೇಂದ್ರ ಮತ್ತು ಆತನ ಸಹಚರ ಕುಲದೀಪ್ ಫಜ್ಜಾನನ್ನು ದಿಲ್ಲಿ ಪೊಲೀಸರ ವಿಶೇಷ ಘಟಕವು ಎರಡು ವರ್ಷಗಳ ಹಿಂದೆ ಗುರುಗ್ರಾಮದಲ್ಲಿ ಬಂಧಿಸಿತ್ತು. ಅಂದಿನಿಂದಲೂ ಜಿತೇಂದ್ರ ಜೈಲಿನಲ್ಲಿದ್ದ. ದಿಲ್ಲಿ ವಿಶ್ವವಿದ್ಯಾಲಯದಲ್ಲಿ ಟಾಪರ್ ಆಗಿದ್ದ ಕುಲದೀಪ್, ಮಾರ್ಚ್ 25ರಂದು ಕಸ್ಟಡಿಯಿಂದ ತಪ್ಪಿಸಿಕೊಂಡಿದ್ದ. ಜಿತೇಂದ್ರ ಗೋಗಿ ಗ್ಯಾಂಗ್ ನೆಟ್‌ವರ್ಕ್‌ನಲ್ಲಿ 50ಕ್ಕೂ ಹೆಚ್ಚು ಜನರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜಿತೇಂದ್ರನ ಬಂಧನದ ವೇಲೆ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿತ್ತು.